ADVERTISEMENT

ಕಾರ್ಖಾನೆ ಸಿಬ್ಬಂದಿ `ಕಾಯಂ'ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 6:24 IST
Last Updated 20 ಜುಲೈ 2013, 6:24 IST

ಮೈಸೂರು: ಪಿರಿಯಾಪಟ್ಟಣ ತಾಲ್ಲೂಕು ರಾವಂದೂರು ಹೋಬಳಿ, ಸೀಗೂರಿನಲ್ಲಿರುವ ಗಣೇಶ್ ಸ್ಪಿನ್ನರ್ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಪರ ಆಂದೋಲನ (ಜನಪ) ವೇದಿಕೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಕಾರ್ಖಾನೆಯಲ್ಲಿ 300 ಜನ ಕಾರ್ಮಿಕರಿದ್ದು, ಇವರಲ್ಲಿ ಸುಮಾರು 250 ಜನ ಕಾಯಂ ನೌಕಕರಾಗಿದ್ದಾರೆ. ಇನ್ನುಳಿದ 50 ಮಂದಿ ತಾತ್ಕಾಲಿ ಕವಾಗಿ 5-6 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ, ಈ ನೌಕರರ ಸೇವೆಯನ್ನು ಕಾಯಂಗೊಳಿ ಸಬೇಕು. ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ತಂಬಾಕು ಬೆಳೆ ಕಟಾವಿಗೆ ಬಂದಿದ್ದು, ಸಂಸ್ಕರಣೆ ಮಾಡಬೇಕಿದೆ. ಇದಕ್ಕೆ ಬೇಕಾದ ಸೌದೆ, ಬೂಸಾ ಬೆಲೆ ವಿಪರೀತ ಹೆಚ್ಚಳವಾಗಿದೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಶಾಸಕರು ಮಧ್ಯಪ್ರವೇಶಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ತಾಲ್ಲೂಕಿನಲ್ಲಿರುವ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಸಂಚಾರ ದುಸ್ತರವಾಗಿದೆ. ಕೂಡಲೇ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಜೋಗನಹಳ್ಳಿ ಗುರುಮೂರ್ತಿ, ಖಜಾಂಚಿ ಹೊಸ ಹೊಳಲು ನಾಗೇಗೌಡ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಎಂಜಿನಿಯರಿಂಗ್ ಪ್ರವೇಶ: 22ರಿಂದ ದಾಖಲಾತಿ ಪರಿಶೀಲನೆ
ಮೈಸೂರು: ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ನೇರ ಪ್ರವೇಶ ಬಯಸಿ ಸಿಇಟಿ ಎದುರಿಸಿದ ಡಿಪ್ಲೊಮಾ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ಇದೇ 22ರಿಂದ 26ರವರೆಗೆ ನಡೆಯಲಿದೆ.

ಎನ್‌ಸಿಸಿ, ಅಂಗವಿಕಲ, ಕ್ರೀಡಾ ಮೀಸಲು ಸೀಟುಗಳಿಗೆ ಬೆಂಗಳೂರಿನಲ್ಲಿ ದಾಖಲಾತಿ ಪರಿಶೀಲಿಸಲಾಗಿದೆ. ರಾಜ್ಯದ ಎಲ್ಲ ಸಿಇಟಿ ಸಹಾಯ ಕೇಂದ್ರಗಳಲ್ಲಿ 22ರಿಂದ ದಾಖಲಾತಿ ಪರಿಶೀಲನೆ ಆರಂಭವಾಗಲಿದೆ.

ಜುಲೈ 22ರಂದು 1ನೇ ರ‌್ಯಾಂಕ್‌ನಿಂದ 2 ಸಾವಿರ, 23ರಂದು 2,001ನೇ ರ‌್ಯಾಂಕ್‌ನಿಂದ 5,500, 24ರಂದು 5,501ರಿಂದ 10,500, 25ರಂದು 10,501ನೇ ರ‌್ಯಾಂಕ್‌ನಿಂದ 15,500 ಸಾವಿರ, 26ರಂದು 15,501ನೇ ರ‌್ಯಾಂಕ್‌ನಿಂದ ಕೊನೆಯ ರ‌್ಯಾಂಕ್‌ವರೆಗಿನ ಎಲ್ಲ ವಿದ್ಯಾರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಲಾಗುತ್ತದೆ.

`ಸಂಪುಟದಿಂದ ಕೈಬಿಡಬೇಡಿ'
ಮೈಸೂರು: ಕೊಪ್ಪಳ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ವರ್ಗಾವಣೆಗೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂಬ ಒತ್ತಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಣಿಯಬಾರದು ಎಂದು ಭೋವಿ ಜನಾಂಗ ಒಕ್ಕೂಟದ ಜಿಲ್ಲಾ ಸಂಚಾಲಕ ಜಿ.ವಿ. ಸೀತಾರಾಮ ಮನವಿ ಮಾಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ವರ್ಗಾವಣೆಯಲ್ಲಿ ಸಚಿವರ ಪಾತ್ರವಿಲ್ಲ. ರಾಜಕೀಯ ದುರುದ್ದೇಶದಿಂದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಸಹೋದರ ಮಾಡಿದ ತಪ್ಪಿಗೆ ಸಚಿವರನ್ನು ಹೊಣೆ ಮಾಡುವುದು ಸರಿಯಲ್ಲ ಎಂದರು. ಪಾಲಿಕೆ ಮಾಜಿ ಸದಸ್ಯ ಡಿ. ಗೋಪಾಲ, ಲಿಂಗಾಬೂದಿಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಂಗಾರಪ್ಪ, ಕಾರ್ಯದರ್ಶಿ ನಾರಾಯಣ, ಮುಖಂಡ ಎಂ.ಜಿ. ರಾಮಕೃಷ್ಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.