ADVERTISEMENT

ಕುಮಾರವ್ಯಾಸ ಜನಪರ, ಜನಪದ ಕವಿ: ನಲ್ಲೂರು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 6:50 IST
Last Updated 10 ಅಕ್ಟೋಬರ್ 2011, 6:50 IST

ಮೈಸೂರು: `ಮಹಾಕವಿ ಕುಮಾರವ್ಯಾಸ ಜನಪರ, ಜನಪದ ಕವಿ ಆಗುವ ಮೂಲಕ ಓದುವ ವರ್ಗವನ್ನು ಸೃಷ್ಟಿಸಿದರು~ ಎಂದು ಕೇಂದ್ರ ಕನ್ನಡ ಸಾಹಿತ್ಯ   ಪರಿಷತ್ ರಾಜ್ಯಾಧ್ಯಕ್ಷ ಡಾ. ಆರ್.ಕೆ.ನಲ್ಲೂರು ಪ್ರಸಾದ್ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜೆಎಲ್‌ಬಿ ರಸ್ತೆಯ ಎಂಜಿನಿಯರುಗಳ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಮಹಾಕವಿ ಕುಮಾರವ್ಯಾಸ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

`ಹೊಸ ವಿಚಾರ, ಆಧುನಿಕ ಜಗತ್ತಿನ ಅವಾಂತರದಲ್ಲಿ ಸಂಸ್ಕೃತಿಯನ್ನು ಹಿಂದಿರುಗಿ ನೋಡುವ ಅಗತ್ಯವಿದೆ. ಕುಮಾರವ್ಯಾಸ ಕವಿಯಾಗಿ ಇಂದಿಗೂ ಅಚ್ಚರಿ ಮೂಡಿಸುತ್ತಾನೆ. ಪತ್ರಿಕೆ, ಟಿ.ವಿ ಮಾಧ್ಯಮ ಇಲ್ಲದ ಆ ಕಾಲದಲ್ಲಿ ಕುಮಾರವ್ಯಾಸ ಜನಮಾನಸದಲ್ಲಿ ಮನೆ ಮಾಡಿದ್ದರು. ತಾಂತ್ರಿಕವಾಗಿ ಏನೂ ಇಲ್ಲದ ಕಾಲದಲ್ಲೂ ಕುಮಾರವ್ಯಾಸನನ್ನು ಎಲ್ಲರೂ ಓದುತ್ತಿದ್ದರು. ಕುಮಾರವ್ಯಾಸ ಶಿಷ್ಟ ಕವಿ ಹಾಗೂ ಜನಪದ ಕವಿಯೂ ಹೌದು. ಆತನ ಭಾಷಾ ಬಳಕೆ ಅದ್ಭತುವಾಗಿತ್ತು~ ಎಂದು ಹೇಳಿದರು.

`ಕುವೆಂಪು ಅವರು ಕುಮಾರವ್ಯಾಸನನ್ನು ಕುರಿತು ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪಾರ ಆಗುವುದು ಎಂದು ಹೇಳಿದ್ದಾರೆ. ಹಾಗೆಯೇ ಕುಮಾರವ್ಯಾಸ ತಿಳಿಯ ಹೇಳುವೆ ಕೃಷ್ಣ ಕತೆಯ, ಇಳಿಯ ಜಾಣರು ಮೆಚ್ಚುವಂತಿದೆ ಎಂದು ಕೃಷ್ಣನ ಕತೆಯನ್ನು ರೂಪಕಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಕವಿಯ ಕೃತಿಯನ್ನು ಗಮನಿಸಬೇಕೆ ಹೊರತು ಕವಿಯನ್ನಲ್ಲ~ ಎಂದರು.

`ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಆಯ್ಕೆ ಆದ ಒಂದು ವರ್ಷದಲ್ಲೇ ಪ್ರಣಾಳಿಕೆಯಲ್ಲಿದ್ದ 10 ಅಂಶಗಳನ್ನು ಕಾರ್ಯರೂಪಕ್ಕೆ ತಂದಿದ್ದೇನೆ. ಪುಸ್ತಕ ಮಾರಾಟದಿಂದ ಬಂದ ಆದಾಯದಲ್ಲಿ 1 ಕೋಟಿ ಹಣವನ್ನು ಠೇವಣಿ ಇಡಲಾಗಿದೆ. ಪ್ರತಿ ಜಿಲ್ಲೆಗೆ 10 ರಿಂದ 15 ಲಕ್ಷ ಹಾಗೂ ತಾಲ್ಲೂಕು ಸಾಹಿತ್ಯ ಪರಿಷತ್ತಿಗೆ 50 ಸಾವಿರ ರೂಪಾಯಿ ಅನುದಾನ ನೀಡಲಾಗಿದೆ. ನನ್ನ ಅವಧಿಯಲ್ಲಿ ಮಾಡಿರುವ ಕೆಲಸದ ಬಗ್ಗೆ ತೃಪ್ತಿ ಇದೆ~ ಎಂದು ನುಡಿದರು.

`ಪ್ರಶಸ್ತಿ ಯಾರಿಗೆ ಬಂದರೂ ಅದನ್ನು ಮುಕ್ತವಾಗಿ ಸ್ವಾಗತಿಸಬೇಕು. ಅದು ಬಿಟ್ಟು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಸಿಕೊಳ್ಳುವುದು ಕನ್ನಡಿಗರಿಗೆ ಶೋಭೆ ತರದು. ಸಾಹಿತ್ಯ, ಸಾಂಸ್ಕೃತಿಕ ಲೋಕದ ಸಮುದಾಯಕ್ಕೆ ಪರಸ್ಪರ ಗೌರವ ಇರಬೇಕು. ಕನ್ನಡ ಪರ ಕೆಲಸ ಮಾಡುವವರಿಗೆ ಶುಭ ಹಾರೈಸಿಬೇಕು~ ಎಂದು ಅಭಿಪ್ರಾಯಪಟ್ಟರು.

`ದಸರಾ ನಾಡಹಬ್ಬ ಆಗಬೇಕು. ನಾಡಿನ ಸಮಸ್ತ ಜನ ಅದರಲ್ಲಿ ಪಾಲ್ಗೊಳ್ಳಬೇಕು. ಸ್ಥಳೀಯ ಪ್ರತಿಭೆಗಳಿಗೆ, ಕಲಾವಿದರಿಗೆ ದಸರಾದಲ್ಲಿ ಕಾರ್ಯಕ್ರಮ ನೀಡಲು ಹೆಚ್ಚಿನ ಅವಕಾಶ ಕಲ್ಪಿಸಬೇಕು~ ಎಂದರು. ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿಗಳಾದ ಎಂ.ಚಂದ್ರಶೇಖರ್, ಬಿ.ವಿದ್ಯಾಸಾಗರ್ ಕದಂಬ ಹಾಜರಿದ್ದರು.

ರೂಪಕ ಸಾಮ್ರಾಜ್ಯ ಚಕ್ರವರ್ತಿ
ಕುಮಾರವ್ಯಾಸ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದ್ದ. ಆದರೆ ಕುಮಾರವ್ಯಾಸನಿಗೆ ಪ್ರಕೃತಿ ಬಗ್ಗೆ ಅಲಕ್ಷ್ಯವಿತ್ತು. ನಾರಣಪ್ಪ ಎಲ್ಲ ವಿಷಯದಲ್ಲೂ ವರಿಷ್ಠ, ಪ್ರಕೃತಿ ವಿಷಯದಲ್ಲಿ ಕನಿಷ್ಠ ಎಂದು ಹೇಳುತ್ತಿದ್ದರು. ಕನ್ನಡದ ಎಲ್ಲ ಕವಿಗಳಲ್ಲಿ ಇರುವಂತೆ ಆತನಲ್ಲೂ ದೌರ್ಬಲ್ಯವಿತ್ತು. ಆದರೆ, ಎಲ್ಲಕ್ಕೂ ಮಿಗಿಲಾಗಿ ಆತ್ಮಾನಂದ ಉಂಟುಮಾಡುವ ಕಾವ್ಯಗಳನ್ನು ರಚಿಸಿದ್ದಾನೆ. ರೂಪಕ, ಉಪಮೆ, ಪ್ರತಿಮೆಗಳನ್ನು ಬಳಸಿ ಕಾವ್ಯ ರಚನೆ ಮಾಡಲು ಸಾಧ್ಯವಾಗಿದ್ದು ಕುಮಾರವ್ಯಾಸನಿಗೆ ಮಾತ್ರ.
-ಡಾ. ಮಳಲಿ ವಸಂತಕುಮಾರ್, ಹಿರಿಯ ವಿದ್ವಾಂಸ

ಕುಮಾರವ್ಯಾಸ ಭಕ್ತ ಕವಿ
ಕುಮಾರವ್ಯಾಸ ಅನುಭಾವ ಕಾವ್ಯ ರಚನೆಕಾರ. ಆತ ಭಕ್ತ ಕವಿಯೂ ಹೌದು, ಭಾಗವತ ಕವಿಯೂ ಹೌದು. ಪಂಪ ತನ್ನ ಕಾವ್ಯಗಳಲ್ಲಿ ವೈಯಕ್ತಿಕ ಹಾಗೂ ಖಾಸಗಿ ಸಂಗತಿಗಳನ್ನು ಹೇಳುತ್ತಾನೆ. ಆದರೆ ಕುಮಾರವ್ಯಾಸ ಎಲ್ಲಿಯೂ ಹೇಳುವುದಿಲ್ಲ. ಕುವೆಂಪು ಹಾಗೂ ಕುಮಾರ ವ್ಯಾಸನಿಗೆ ಅನೇಕ ಸಾಮ್ಯ ಗಳಿವೆ. ರೂಪಕ, ದರ್ಶನಗಳ ಬಳಕೆ ದೃಷ್ಟಿಯಿಂದ ಕುಮಾರ ವ್ಯಾಸ ಅದ್ವಿತೀಯ ಕವಿಯಾಗಿ ನಿಲ್ಲುತ್ತಾನೆ. ಒಂದು ಯು ವನ್ನು ಮತ್ತೊಂದು ಯುಗಕ್ಕೆ ಪರಿವರ್ತಿಸುವ ಶಕ್ತಿ ಕುಮಾರ ವ್ಯಾಸನಿಗೆ ಮಾತ್ರ ಇತ್ತು ಎಂದು ಕುವೆಂಪು ಹೇಳಿದ್ದಾರೆ.
-ಡಾ.ಸಿ.ಪಿ.ಕೃಷ್ಣಕುಮಾರ್, ಹಿರಿಯ ಸಾಹಿತಿ

ಸುಗಮ ಸಂಗೀತಕ್ಕೆ ಪ್ರೋತ್ಸಾಹ ಅಗತ್ಯ
ಗಮಕ ಮರೆತರೆ ಸಾಹಿತ್ಯದ ಪ್ರಚಾರ ಸಾಧ್ಯವಿಲ್ಲ. ಕುಮಾರವ್ಯಾಸನ ಕಾವ್ಯಗಳು ಗಮಕದಿಂದಾಗಿ ಹಳ್ಳಿ ಹಳ್ಳಿಗೂ ತಲುಪಿದ್ದವು. ಈಗ ಬಯಲು ನಾಟಕ, ಗಮಕ ಇಲ್ಲ. ಆದ್ದರಿಂದ ಸರ್ಕಾರ ಗಮಕ, ಸುಗಮ ಸಂಗೀತಕ್ಕೆ ಪ್ರೋತ್ಸಾಹ ನೀಡಬೇಕು. ಸಂಗೀತ ವಿಶ್ವವಿದ್ಯಾನಿಲಯವು ವಾರಕ್ಕೊಮ್ಮೆ ಗಮಕ, ಯಕ್ಷಗಾನ, ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಬೇಕು.

ಕುಮಾರವ್ಯಾಸ, ಪಂಪ, ಬಸವೇಶ್ವರ ಹಾಗೂ ಕುವೆಂಪು ಈ ನಾಲ್ವರೂ ಹಿಮಾಲಯಕ್ಕೆ ಸರಿಸಮ. ಈ ನಾಲ್ವರಿಗೂ ಸರಿಸಮಾನರಾದ ಕವಿಗಳು ಜಗತ್ತಿನ ಯಾವ ಭಾಷೆಯಲ್ಲೂ ಇಲ್ಲ. ಕುವೆಂಪು ಪ್ರಕೃತಿ ಆರಾಧಕರಾದ್ದರಿಂದ ವರ್ಡ್ಸ್‌ವರ್ತ್‌ನನ್ನು ಮೀರಿ ಬೆಳೆಯಲು ಸಾಧ್ಯವಾಯಿತು. ರಾಜಕಾರಣಿಗಳು ಸಾಹಿತ್ಯ ಓದುವ ಮೂಲಕ ಗಮಕಕ್ಕೆ ವಿಶೇಷ ಸ್ಥಾನ ನೀಡಬೇಕು.
-ಡಾ.ದೇ.ಜವರೇಗೌಡ, ಹಿರಿಯ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.