ADVERTISEMENT

ಕೂದಲೆಳೆ ಅಂತರದಲ್ಲಿ ಬೀದಿಗೆ ಬಿದ್ದ ಜೆಒಸಿ ಶಿಕ್ಷಕರು!

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 4:57 IST
Last Updated 10 ಜನವರಿ 2014, 4:57 IST

ಮೈಸೂರು: ಪದವಿಪೂರ್ವ ಶಿಕ್ಷಣ ಇಲಾಖೆಯಡಿ 1977ರಲ್ಲಿ ಬಹುನಿರೀಕ್ಷೆಯಿಂದ ಆರಂಭಿಸಿದ ವೃತ್ತಿ ಶಿಕ್ಷಣ ಆಧರಿತ ಕೋರ್ಸ್‌ಗಳು ಅರ್ಥಾತ್ ಜೆಒಸಿಯಲ್ಲಿ ಪಾಠ ಹೇಳುತ್ತಿದ್ದ 500ಕ್ಕೂ ಹೆಚ್ಚಿನ ಶಿಕ್ಷಕರು ಉದ್ಯೋಗವಿಲ್ಲದೇ ಬೀದಿಗೆ ಬಿದ್ದಿದ್ದಾರೆ.

ವಿದ್ಯಾರ್ಥಿಗಳ ಕೊರತೆಯನ್ನು ನೆಪಮಾಡಿಕೊಂಡ ಸರ್ಕಾರ 2010ರಲ್ಲಿ ಇಡೀ ಕೋರ್ಸ್‌ನ್ನು ಸ್ಥಗಿತಗೊಳಿ­ಸಿ­ದಾಗ ಇದರಲ್ಲಿ 3,746 ಅರೆಕಾಲಿಕ ಶಿಕ್ಷಕರು ಕೆಲಸ ಮಾಡುತ್ತಿದ್ದರು. ಇವರು ಅತಂತ್ರರಾಗಬಾರದೆಂದು 2011ರಲ್ಲಿ 5 ವರ್ಷ ಪೂರೈಸಿದ ಶಿಕ್ಷಕರನ್ನು ಮಾತ್ರ ಇತರ ಇಲಾಖೆಗಳೊಂದಿಗೆ ವಿಲೀನಗೊಳಿಸಿ ಕಾಯಂ ಮಾಡಿತು. ಹೀಗೆ, 5 ವರ್ಷ ಪೂರೈಸಿದ ಉದ್ಯೋಗಿಗಳ ಸಂಖ್ಯೆ 3,216.

ಆದರೆ, ಕೇವಲ ಸೇವಾವಧಿಗೆ ಒಂದು ದಿನ, ಒಂದು ತಿಂಗಳು ಅಂತರವಿದ್ದ ಶಿಕ್ಷಕರು ಕೆಲಸ ಕಳೆದುಕೊಳ್ಳಬೇಕಾಯಿತು. ಇವರ ಸಂಖ್ಯೆ ಬರೋಬರಿ 530!

ಇನ್ನೇನು ಕೆಲಸ ಸಿಕ್ಕಿತೆಂದು ಸರ್ಕಾರವನ್ನು ನಂಬಿ ಮದುವೆಯಾದವರು, ಸಾಲ ಮಾಡಿ ಮನೆ ಕಟ್ಟಿದವರು, ಅಕ್ಕ–ತಂಗಿಯರ ಮದುವೆಗೆ ಸಾಲ ಮಾಡಿದವರು ಈ 530 ಮಂದಿಯಲ್ಲಿ ಇದ್ದಾರೆ. ಹಲವರ ಆರ್ಥಿಕ ಸ್ಥಿತಿ ತೀರಾ ಶೋಚನೀಯವಾಗಿದೆ. ವಯೋಮಿತಿ ಮೀರಿದವರ ಪಾಡಂತೂ ಹೇಳಲು ಅಸಾಧ್ಯವಾಗಿದೆ. ಇತ್ತ ಜೆಒಸಿಯಲ್ಲಿ ನೌಕರಿಯೂ ಇಲ್ಲದೆ, ಅತ್ತ ಬೇರೆಡೆ ಉದ್ಯೋಗಕ್ಕೆ ಅರ್ಜಿಸಲ್ಲಿಸಲು ವಯೋಮಿತಿ ಮೀರಿರುವುದರಿಂದ ಜೀವನ ನಿರ್ವಹಣೆಗೆ ಪರಿತಪಿಸುತ್ತಿದ್ದಾರೆ.

ಶಿಕ್ಷಣ ಇಲಾಖೆ ಮತ್ತು ಸರ್ಕಾರ ಮೂರ್ನಾಲ್ಕು ವರ್ಷದ ನಂತರವಾದರೂ ಉದ್ಯೋಗ ವಂಚಿತ ವೃತ್ತಿ ಶಿಕ್ಷಣ ಉದ್ಯೋಗಿಗಳ ಕಡೆಗೆ ಗಮನ ಹರಿಸಿ ‘ಮರುನೇಮಕ ಭಾಗ್ಯ’ವನ್ನು ಕಲ್ಪಿಸುತ್ತದೆ ಎಂದು ಚಾತಕ ಪಕ್ಷಿಗಳಂತೆ ಇವರು ಕಾಯುತ್ತಿದ್ದೇವೆ ಎಂದು ಕೆಲಸ ಕಳೆದುಕೊಂಡ ಶಿಕ್ಷಕರು ಹೇಳುತ್ತಾರೆ.

‘ಮನವಿಗೆ ಸ್ಪಂದಿಸದ ಸರ್ಕಾರ’
2011ರಿಂದ ಇಲ್ಲಿವರೆಗೂ ನಿರಂತರ ಮನವಿಗಳನ್ನು, ಅಹವಾಲುಗಳನ್ನು ಸರ್ಕಾರಕ್ಕೆ ಸಲ್ಲಿಸುತ್ತಿದ್ದರೂ ನಮ್ಮ ನೋವನ್ನು ಆಲಿಸುತ್ತಿಲ್ಲ. ವಯೋಮಿತಿ ಮೀರಿರುವ ಉದ್ಯೋಗಿಗಳು ಈ 530 ಜನರಲ್ಲಿ ಇದ್ದಾರೆ. ಶಿಕ್ಷಣ ಸಚಿವರಿಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಸರ್ಕಾರವು ಅನ್ಯಾಯಕ್ಕೆ ಈ ಕೂಡಲೇ ಸ್ಪಂದಿಸಬೇಕು
– ಕೆ.ಆರ್‌. ಮಂಜುನಾಥ್‌, ಜೆಒಸಿ ಉಪನ್ಯಾಸಕರ ವೇದಿಕೆ ಸದಸ್ಯ

ವಿಪರ್ಯಾಸ
ಎರಡು ತಿಂಗಳ ಅವಧಿ ಕಡಿಮೆಯಾಗಿದ್ದರಿಂದ ನಾನು ಕೆಲಸ ಕಳೆದುಕೊಂಡಿದ್ದೇನೆ. ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ನಮ್ಮನ್ನು ನೋಡಬೇಕು. ಕೆಲವೇ ಕೆಲವು ದಿನಗಳು, ತಿಂಗಳುಗಳು ದಾಟಿದ್ದರೆ ನಮಗೂ ‘ಕಾಯಂ ಭಾಗ್ಯ’ ಸಿಗುತ್ತಿತ್ತು. ಆದರೆ, ಕೂದಲೆಳೆಯ ಅಂತರದಲ್ಲಿ ಹಿಂದೆ ಉಳಿದ ನಮ್ಮನ್ನು ಸರ್ಕಾರ ಸೇವೆಯಿಂದ ನಿರ್ದಯವಾಗಿ ತೆಗೆದುಹಾಕಿದ್ದು ಮಾತ್ರ ವಿಪರ್ಯಾಸ.
– ಸರಿತಾ ಹೆಗಡೆ, ಜೆಒಸಿ ಉಪನ್ಯಾಸಕ ಹುದ್ದೆ ವಂಚಿತೆ,  ಮೂಡಬಿದಿರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT