ADVERTISEMENT

ಕೆಂಪುಹಾಸು ಸ್ವಾಗತ; ಸಸಿ ವಿತರಣೆ

ಹುಣಸೂರು ತಾಲ್ಲೂಕಿನ ಬಿಳಿಕೆರೆಯಲ್ಲಿ ಮಾದರಿ ಮತಗಟ್ಟೆ

​ಪ್ರಜಾವಾಣಿ ವಾರ್ತೆ
Published 13 ಮೇ 2018, 7:15 IST
Last Updated 13 ಮೇ 2018, 7:15 IST
ಹುಣಸೂರು ತಾಲ್ಲೂಕಿನ ನಾಗಾಪುರದಲ್ಲಿ ಬುಡಕಟ್ಟು ಸಂಸ್ಕೃತಿ ಮತಗಟ್ಟೆ ನಿರ್ಮಿಸಲಾಗಿತ್ತು
ಹುಣಸೂರು ತಾಲ್ಲೂಕಿನ ನಾಗಾಪುರದಲ್ಲಿ ಬುಡಕಟ್ಟು ಸಂಸ್ಕೃತಿ ಮತಗಟ್ಟೆ ನಿರ್ಮಿಸಲಾಗಿತ್ತು   

ಮೈಸೂರು: ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ಮತಗಟ್ಟೆಗಳು, ಮತದಾನ ಮಾಡುವವರಿಗೆ ಗಿಡಗಳ ಉಡುಗೊರೆ. ಬಿಸಿಲಿನ ಝಳಕ್ಕೆ ದಣಿವಾರಿಸಿಕೊಳ್ಳಲೆಂದು ಸೊಗದೆ ಬೇರು ಕಷಾಯ, ಶರಬತ್ತು ಹಾಗೂ ಹಣ್ಣಿನ ರಸ ವಿತರಣೆ. ಮಕ್ಕಳು ಆಟವಾಡಲು ಆಟಿಕೆಗಳು ಮತ್ತು ಅಂಗವಿಕಲರಿಗೆ ಗಾಲಿಕುರ್ಚಿ ವ್ಯವಸ್ಥೆ. ಹುಣಸೂರು ತಾಲ್ಲೂಕಿನ ಬಿಳಿಕೆರೆಯ ಮತಗಟ್ಟೆ ಸಂಖ್ಯೆ 154 ಹಾಗೂ ನಾಗಾಪುರದ ಮತಗಟ್ಟೆಗಳಲ್ಲಿ ಕಂಡುಬಂದ ದೃಶ್ಯಗಳಿವು.

ಚುನಾವಣಾ ಆಯೋಗವು ಬಿಳಿಕೆರೆಯಲ್ಲಿ ಮಾದರಿ ಮತಗಟ್ಟೆಯನ್ನು ರೂಪಿಸಿತ್ತು. ಶಾಲೆಯ ಬಾಗಿಲಿನಿಂದ ಮತಗಟ್ಟೆವರೆಗೆ ಕೆಂಪುಹಾಸು ಹಾಕಲಾಗಿತ್ತು. ಅದರ ಸುತ್ತಲೂ ಕಂಬಗಳನ್ನು ನೆಟ್ಟು ಬಾಳೆಕಂದು, ಮಾವಿನ ಎಲೆಗಳನ್ನು ಕಟ್ಟಲಾಗಿತ್ತು. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲ ಸಿಬ್ಬಂದಿ ಬಿಳಿ ಅಂಗಿ ಹಾಗೂ ಪಂಚೆ ಧರಿಸಿದ್ದರು. ಮತ ಚಲಾಯಿಸಲು ಬರುವವರಿಗೆ ಹಣ್ಣಿನ ರಸ ನೀಡಲಾಯಿತು. ತಾಯಂದಿರೊಂದಿಗೆ ಬರುವ ಮಕ್ಕಳಿಗಾಗಿ ಆಟದ ಸಾಮಗ್ರಿಗಳನ್ನು ಒದಗಿಸಲಾಗಿತ್ತು. ಇಬ್ಬರು ಮಕ್ಕಳು ಆಟವಾಡುತ್ತಾ ಕಾಲ ಕಳೆಯುತ್ತಿದ್ದರು. ಅವರ ತಾಯಂದಿರು ಸರದಿ ಸಾಲಿನಲ್ಲಿ ನಿಂತು ಮತಚಲಾಯಿಸಿದರು.

ಪರಿಸರ ಸಂರಕ್ಷಣೆ ಉದ್ದೇಶದಿಂದ ಮತ ಹಾಕಿದ ಪ್ರತಿಯೊಬ್ಬರಿಗೆ ಹಲಸು, ಕರಿಬೇವು, ಸೀಬೆ ಗಿಡಗಳನ್ನು ನೀಡಲಾಯಿತು. ಈ ಮತಗಟ್ಟೆಯಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡರು. ಯುವ ಮತದಾರರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಮತ ಹಾಕಿದರು.

ADVERTISEMENT

ಮಲ್ಲಿನಾಥಪುರದ ನಿವಾಸಿಗಳಾದ ಪುಟ್ಟಮ್ಮ, ಸಾಕಮ್ಮ ಹಾಗೂ ನಾಗಮ್ಮ ಮತ ಹಾಕಿ ಹೊರಬಂದರು. ಅವರಿಗೆ ಕರಿಬೇವು ಹಾಗೂ ಹಲಸಿನ ಗಿಡಗಳನ್ನು ನೀಡಲಾಗಿತ್ತು.

‘ಈ ಬಾರಿ ಹಬ್ಬದ ವಾತಾವರಣ ಇದೆ. ವೋಟು ಹಾಕಿದ್ದು ಖುಷಿಯಾಗಿದೆ. ನನಗೆ ಹಲಸಿನ ಗಿಡ ಕೊಟ್ಟಿದ್ದಾರೆ. ಕಾಡು ಬೆಳೆದರೆ ಊರು ಉಳಿಯುತ್ತೆ. ಈ ಗಿಡವನ್ನು ಮರವನ್ನಾಗಿ ಬೆಳೆಸುತ್ತೇನೆ’ ಎಂದು ನಾಗಮ್ಮ ಹೇಳಿದರು.

ಜೀನಹಳ್ಳಿಯ 95 ವರ್ಷದ ವೃದ್ಧೆಯನ್ನು ಅವರ ಮಗ ಲೋಕೇಶ್‌ ಕರೆದುಕೊಂಡು ಬಂದಿದ್ದರು. ಎರಡು ಕಿ.ಮೀ. ದೂರದಿಂದ ಬಿಳಿಕೆರೆಗೆ ಬರಲು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷದವರು ಆಟೊ ವ್ಯವಸ್ಥೆ ಮಾಡಿದ್ದರು.

ಜೀನಹಳ್ಳಿಯ 90 ವರ್ಷದ ಕೆಂಪಮ್ಮ ಮತ ಹಾಕಿದರು. ‘ಯಾವುದೇ ಚುನಾವಣೆ ಇದ್ದರೂ, ನಾನು ವೋಟು ಹಾಕುತ್ತೇನೆ. ಒಂದು ಸಾರಿನೂ ವೋಟು ಹಾಕದೆ ಇರಲಿಲ್ಲ’ ಎಂದರು.

75 ವರ್ಷದ ಚಿಕ್ಕವೀರಮ್ಮ, ‌‘ಇಂದಿರಾ ಗಾಂಧಿ ಕಾಲದಿಂದ ವೋಟು ಹಾಕುತ್ತಿದ್ದೇನೆ. ಮಕ್ಕಳು ಹೇಳಿದ ಪಕ್ಷಕ್ಕೆ ವೋಟು ಹಾಕಿದ್ದೇನೆ’ ಎಂದು ಹೇಳಿದರು.

ಇದೇ ತಾಲ್ಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಪುರುಷರಿಗಿಂತ ಮಹಿಳೆಯರು ಮತದಾನದಲ್ಲಿ ಪಾಲ್ಗೊಂಡಿದ್ದರು. 80 ವರ್ಷದ ಕಮಲಮ್ಮ ಎಂಬುವರು ಮೊಮ್ಮಗ ಮುತ್ತು ಸಹಾಯದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಎಚ್‌.ಡಿ.ಕೋಟೆ ತಾಲ್ಲೂಕಿನ ಕೋಳಗಾಲದಲ್ಲಿ ಎರಡು ಮತಗಟ್ಟೆಗಳಿದ್ದವು. ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮೊದಲ ಬಾರಿ ಮತ ಹಾಕುವವರು ಹೆಚ್ಚಾಗಿದ್ದರು.

ಚಾಮುಂಡೇಶ್ವರಿ ಕ್ಷೇತ್ರದ ಜಯಪುರದಲ್ಲಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮಧ್ಯಾಹ್ನ 3 ಗಂಟೆ ಆಗಿದ್ದರೂ ಸರದಿ ಸಾಲು ಕಡಿಮೆ ಆಗಿರಲಿಲ್ಲ. ಪುರುಷರಿಗಿಂತ ಮಹಿಳೆಯರು ಹೆಚ್ಚಾಗಿದ್ದರು. ಡಿ.ಸಾಲುಂಡಿ ಗ್ರಾಮದಲ್ಲಿ 66 ವರ್ಷದ ಮಂಜಮ್ಮ ಎಂಬುವರು ಮಂಡಿ ನೋವಿದ್ದರೂ ಅದನ್ನು ಲೆಕ್ಕಿಸದೆ ಮತಗಟ್ಟೆಗೆ ಬಂದಿದ್ದರು.

ಗಮನ ಸೆಳೆದ ಬುಡಕಟ್ಟು ಸಂಸ್ಕೃತಿ ಮತಗಟ್ಟೆ

ನಾಗಾಪುರದ ಸರ್ಕಾರಿ ಗಿರಿಜನ ಆಶ್ರಮ ಶಾಲೆಯನ್ನು ಬುಡಕಟ್ಟು ಸಂಸ್ಕೃತಿ ಮತಗಟ್ಟೆಯನ್ನಾಗಿ ರೂಪಿಸಿದ್ದು ಗಮನ ಸೆಳೆಯಿತು. ತಳಿರು ತೋರಣಗಳಿಂದ ಶಾಲೆಯನ್ನು ಶೃಂಗರಿಸಲಾಗಿತ್ತು. ಆವರಣದಲ್ಲಿ ಹುಲ್ಲಿನ ಮನೆಯನ್ನು ನಿರ್ಮಿಸಲಾಗಿತ್ತು. ಇದರಿಂದ ಮತಗಟ್ಟೆಗೆ ಹೊಸ ಕಳೆ ಬಂದಿತ್ತು. ಮತದಾರರಿಗೆ ಕಷಾಯ, ಶರಬತ್ತು ನೀಡಲಾಯಿತು. ಮತ ಚಲಾಯಿಸಿದ ಬಳಿಕ ಗಿಡಗಳನ್ನು ನೀಡಲಾಯಿತು. ಗಿರಿಜನರು ಉತ್ಸಾಹದಿಂದಲೇ ಮತದಾನದಲ್ಲಿ ಪಾಲ್ಗೊಂಡರು.

ಮತ ಚಲಾಯಿಸಿದ 8 ತಿಂಗಳ ಗರ್ಭಿಣಿ

ನಾಗಾಪುರದ 3ನೇ ಬ್ಲಾಕ್‌ನ ಜ್ಯೋತಿ, ಭಾಗ್ಯ, ಶಾಂತಿ, ಗೀತಾ, ಕೃತಿಕಾ ಹಾಗೂ ಬೋಜಿ ಮೊದಲ ಬಾರಿಗೆ ಮತದಾನ ಮಾಡಿದರು. ಶಾಂತಿ ಅವರು ಆರು ತಿಂಗಳ ಮಗುವಿನೊಂದಿಗೆ ಬಂದು ಮತ ಹಾಕಿದರು. ಕೃತಿಕಾ ಎಂಟು ತಿಂಗಳ ಗರ್ಭಿಣಿ.

‘ಮೊದಲ ಬಾರಿಗೆ ವೋಟು ಹಾಕುತ್ತಿದ್ದೇವೆ. ವೋಟಿಂಗ್‌ ಮಿಷನ್‌ ಅನ್ನು ಚಿತ್ರಗಳಲ್ಲಿ ನೋಡಿದ್ದೆ.  ವೋಟು ಹಾಕಲು ಖುಷಿ ಆಗುತ್ತಿದೆ’ ಎಂದು ಜ್ಯೋತಿ ಸಂತಸ ಹಂಚಿಕೊಂಡರು.

ಇದೇ ಹಾಡಿಯಲ್ಲಿ ವಾಸವಾಗಿರುವ ಸೃಜನಾ ಎಂಬುವರು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಕಾಂ ಓದುತ್ತಿದ್ದಾರೆ. ಅವರು ಅಂಗವೈಕಲ್ಯಕ್ಕೆ ತುತ್ತಾಗಿದ್ದು, ಕುಬ್ಜರಾಗಿದ್ದಾರೆ. ಮತ ಹಾಕಲು ಮೈಸೂರಿನಿಂದ ಬಂದಿದ್ದರು.

‘ಇದು ಹುಣಸೂರು ತಾಲ್ಲೂಕಿನಲ್ಲೇ ಅತ್ಯುತ್ತಮ ಮತಗಟ್ಟೆ ಎಂಬ ಹಿರಿಮೆಗೆ ಪಾತ್ರವಾಗುತ್ತದೆ ಎಂಬ ವಿಶ್ವಾಸ ಇದೆ. ಈ ಹಾಡಿಯಲ್ಲಿ ಶಿಕ್ಷಣದ ಬಗ್ಗೆ ಇನ್ನೂ ಮನವರಿಕೆ ಆಗಿಲ್ಲ. ಈ ಬಗ್ಗೆ ಅವರಿಗೆ ಅರಿವು ಮೂಡಿಸುವ ಅಗತ್ಯವಿದೆ’ ಎಂದು ಸೃಜನಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.