ADVERTISEMENT

ಕೆಎಸ್‌ಒಯು ಮಾನ್ಯತೆ ಪಡೆಯಲು ಕಸರತ್ತು

2017–18ಸಾಲಿಗೆ ಮಾನ್ಯತೆ ನೀಡುವ ವಿಶ್ವಾಸ; ಜೂನ್ 20ರಂದು ದೆಹಲಿಯಲ್ಲಿ ಮಹತ್ವದ ಸಭೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2017, 7:24 IST
Last Updated 8 ಜೂನ್ 2017, 7:24 IST
ಕೆಎಸ್‌ಒಯು ಮಾನ್ಯತೆ ಪಡೆಯಲು ಕಸರತ್ತು
ಕೆಎಸ್‌ಒಯು ಮಾನ್ಯತೆ ಪಡೆಯಲು ಕಸರತ್ತು   

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಮಾನ್ಯತೆ ನವೀಕರಣ ಕುರಿತು ಜೂನ್ 20ರಂದು ನವದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದ್ದು, 2017–18ನೇ ಸಾಲಿಗೆ ಮಾನ್ಯತೆ ಸಿಗುವ ಸಾಧ್ಯತೆಗಳು ಇದೆ ಎಂದು ಮೂಲಗಳು ತಿಳಿಸಿವೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಎಸ್.ಕೆ. ಶರ್ಮ ಅವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ವಿ.ವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ, ಕುಲಸಚಿವ ಚಂದ್ರಶೇಖರ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಯುಜಿಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.

2017–18ನೇ ಶೈಕ್ಷಣಿಕ ಸಾಲಿಗೆ ಮಾನ್ಯತೆ ನೀಡಬೇಕು, 2013–14 ಹಾಗೂ 2014–15ನೇ ಸಾಲಿನ 96 ವಿದ್ಯಾರ್ಥಿಗಳು ಪಡೆದ ಪದವಿಗೆ ಮಾನ್ಯತೆ ನೀಡಬೇಕು ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನೋಂದಣಿಯಾದ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಡೆದ ಪದವಿಗೆ ಮಾನ್ಯತೆ ನೀಡಬೇಕು ಎಂದು ಈಗಾಗಲೇ ವಿ.ವಿ ಫೆಬ್ರುವರಿಯಲ್ಲಿ ಸರ್ಕಾರಕ್ಕೆ ಪತ್ರ ಬರೆದಿದೆ.

ADVERTISEMENT

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕುಲಪತಿ ಶಿವಲಿಂಗಯ್ಯ, ‘ನಮ್ಮ ಮೂರು ಬೇಡಿಕೆಗಳ ಪೈಕಿ ಕನಿಷ್ಠ 2017–18ನೇ ಸಾಲಿಗೆ ಮಾನ್ಯತೆ ನೀಡಬಹುದು ಎಂಬ ಭರವಸೆ ಇದೆ. ಉಳಿದ ಬೇಡಿಕೆಗಳನ್ನೂ ಈಡೇರಿಸಲು ಒತ್ತಾಯಿಸಲಾಗುವುದು. ಈ ಬಾರಿ ಸಕರಾತ್ಮಕ ಪ್ರತಿಕ್ರಿಯೆ ಬರುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

2013ನೇ ಸಾಲಿನಿಂದ ಕೆಎಸ್‌ಒಯು ಕೋರ್ಸ್‌ಗಳಿಗೆ ಮಾನ್ಯತೆಯನ್ನು ಯುಜಿಸಿ ರದ್ದುಪಡಿಸಿತ್ತು. ಅಲ್ಲಿಂದ ಇಲ್ಲಿವರೆಗೂ ವಿ.ವಿಗೆ ಮಾನ್ಯತೆ ಸಿಕ್ಕಿಲ್ಲ.

**

ಅವ್ಯವಹಾರ; ತನಿಖೆ ಆರಂಭ

ಮೈಸೂರು: ಕಳೆದ 5 ವರ್ಷಗಳಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಒಯು) ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನೇತೃತ್ವದ ತಂಡ ಬುಧವಾರ ತನಿಖೆ ಆರಂಭಿಸಿತು.

ಕುಲಸಚಿವ ಚಂದ್ರಶೇಖರ್ ಅವರನ್ನು ಭೇಟಿ ಮಾಡಿದ ತಂಡದ ಸದಸ್ಯರು ತನಿಖೆಗೆ ಅಗತ್ಯವಿರುವ ದಾಖಲೆಗಳನ್ನು ನೀಡುವಂತೆ ಸೂಚಿಸಿದರು. ವಿ.ವಿಯಲ್ಲಿ ಇಡೀ ದಿನ ದಾಖಲಾತಿ ಪರಿಶೀಲನೆಯಲ್ಲಿ ತೊಡಗಿದ್ದರು.

‘ಆಡಳಿತಾತ್ಮಕ ಹಾಗೂ ಆರ್ಥಿಕ ವಿಭಾಗಗಳಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸುವಂತೆ ಸರ್ಕಾರ ಒಂದು ತಿಂಗಳ ಹಿಂದೆಯೇ ಮೂವರು ಸದಸ್ಯರ ಸಮಿತಿ ರಚಿಸಿತ್ತು. ಅಲ್ಲದೆ,15 ದಿನದ ಒಳಗೆ ವರದಿ ನೀಡುವಂತೆ ಸೂಚಿಸಿತ್ತು. ಕೆಲಸದ ಒತ್ತಡದಿಂದ ತನಿಖೆ ನಡೆಸಲು ಆಗಿರಲಿಲ್ಲ. ಇದೀಗ ತನಿಖೆ ಆರಂಭಿಸಿದ್ದು, ವರದಿ ನೀಡುವ ಗಡುವನ್ನು ವಿಸ್ತರಿಸಲು ಪತ್ರ ಬರೆಯಲಾಗಿದೆ’ ಎಂದು ವೆಂಕಟೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ವೆಂಕಟೇಶ್ ನೇತೃತ್ವದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಲೆಕ್ಕಪತ್ರ ಅಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಒಳಗೊಂಡ ತ್ರಿಸದಸ್ಯ ಸಮಿತಿ ತನಿಖೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.