ADVERTISEMENT

ಕೊಳೆಗೇರಿ ಅಭಿವೃದ್ಧಿಗೆ ₹ 1 ಕೋಟಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:09 IST
Last Updated 25 ಏಪ್ರಿಲ್ 2017, 6:09 IST

ಹುಣಸೂರು: ‘ನಗರದ ಕೊಳೆಗೇರಿ ಪ್ರದೇಶಗಳ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ₹ 1 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ’  ಎಂದು ಶಾಸಕ ಮಂಜುನಾಥ್‌ ಹೇಳಿದರು.

ನಗರದ ಸರಸ್ವತಿಪುರಂ ಕಾಲೊನಿಯಲ್ಲಿ ವಿವಿಧ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ನಗರ ವ್ಯಾಪ್ತಿಯ ಎಲ್ಲ ಪ್ರದೇಶ ಅಭಿವೃದ್ಧಿಗೆ ಈಗಾಗಲೇ ನಗರೋತ್ಥಾನ ಯೋಜನೆ ಸೇರಿದಂತೆ ಕೊಳೆಗೇರಿ ಮಂಡಳಿಯಿಂದ ಹಲವು ಯೋಜನೆ ಮಂಜೂರಾಗಿವೆ. ಹಂತ ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದರು.

ADVERTISEMENT

ಸರಸ್ವತಿಪುರಂ ಕಾಲೊನಿಯಲ್ಲಿ ₹ 66 ಲಕ್ಷ ವೆಚ್ಚದಲ್ಲಿ ಸಿಮೆಂಟ್ ರಸ್ತೆ, ಚರಂಡಿ ಕಾಮಗಾರಿ, ₹ 15 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ, ₹ 10 ಲಕ್ಷದಲ್ಲಿ ಅಂಗನವಾಡಿ, ₹ 10 ಲಕ್ಷದಲ್ಲಿ ಕುಡಿಯುವ ನೀರು ಪೈಪ್‌ ಆಧುನೀಕರಣ ಮತ್ತು ₹ 5 ಲಕ್ಷದಲ್ಲಿ ಗರಡಿ ಮನೆ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ ಎಂದು ಹೇಳಿದರು.

‘ಹುಣಸೂರು ನಗರಸಭೆಯಾದ ಬಳಿಕ ಪ್ರಥಮ ಬಾರಿಗೆ ₹ 25 ಕೋಟಿ ಅನುದಾನ ಮಂಜೂರಾಗಿದೆ. ಈ ಅನುದಾನವನ್ನು ನಗರಾಭಿವೃದ್ಧಿಗೆ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಈಗಾಗಲೇ ನಗರಸಭಾ ಸದಸ್ಯರೊಂದಿಗೆ ಚರ್ಚಿಸಲಾಗಿದೆ. ಈ ಅನುದಾನದಲ್ಲಿ ಕನಿಷ್ಠ 15 ವಾರ್ಡುಗಳಲ್ಲಿ ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಸಿ ನಂತರದಲ್ಲಿ ಉಳಿಕೆ ವಾರ್ಡುಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

‘ಕೊಳಚೆ ಮಂಡಳಿ ವತಿಯಿಂದ ಕೊಳೆಗೇರಿ ಪ್ರದೇಶದ ಫಲಾನುಭವಿಗಳಿಗೆ ಬಹುಮಹಡಿ ಮನೆ ನಿರ್ಮಿಸಿಕೊಳ್ಳುವ ಯೋಜನೆಯಿದೆ. ಈ ಯೋಜನೆಯ ಲಾಭ ಪಡೆಯಲು ಸ್ಥಳೀಯ ಫಲಾನುಭವಿಗಳು ನಿವೇಶನದ ಖಾತೆ ಹಾಲಿ ವಾಸವಿರುವವರ ಹೆಸರಿನಲಬೇಕು. ಆದರೆ, ಸರಸ್ವತಿಪುರಂ ಕಾಲೊನಿಯ ಶೇ 70ರಷ್ಟು ನಿವಾಸಿಗರು ನಗರಸಭೆಯಲ್ಲಿ ಖಾತೆ  ಬದಲಿಸಿಕೊಂಡಿಲ್ಲ. ಇದರಿಂದ ಈ ಯೋಜನೆ ಕೈಚೆಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ನಗರಸಭಾಧ್ಯಕ್ಷ ಕೆ.ಲಕ್ಷ್ಮಣ್‌, ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್‌, ನಗರಸಭಾ ಸದಸ್ಯೆ ಸೌರಭ ಇದ್ದರು.

**

ಹನುಮ ಜಯಂತಿ ಕಾರ್ಯಕ್ರಮದಲ್ಲಿ ಉಂಟಾದ ಘರ್ಷಣೆಗೆ ವಿನಾಕಾರಣ ನನ್ನ ಮೇಲೆ ಗೂಬೆ ಕೂರಿಸಲಾಗಿದೆ
-ಮಂಜುನಾಥ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.