ADVERTISEMENT

ಕೊಳೆತ ಹತ್ತಿ ಬೆಳೆ: ರೈತರಲ್ಲಿ ಮನೆ ಮಾಡಿದ ಆತಂಕ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 8:46 IST
Last Updated 10 ಜುಲೈ 2013, 8:46 IST

ಎಚ್.ಡಿ.ಕೋಟೆ: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಿಂದ ರೈತರ ಮೊಗದಲ್ಲಿ ಸಂತೋಷ ಮೂಡಿದ್ದರೆ, ತಾಲ್ಲೂಕಿನ ಬೆಳಗನಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಬೆಳೆದ ಹತ್ತಿ ಕೊಳೆತು ಹೋಗುತ್ತಿದೆ.

ತಾಲ್ಲೂಕು ಕೇಂದ್ರದಿಂದ 3 ಕಿ.ಮೀ. ದೂರದಲ್ಲಿರುವ ಬೆಳಗನಹಳ್ಳಿ ಗ್ರಾಮದಲ್ಲಿ ನಾಗೇಗೌಡ ಎಂಬವರು 2 ಎಕರೆ ಜಮೀನಿನಲ್ಲಿ ಹತ್ತಿಯನ್ನು ಬಿತ್ತನೆ ಮಾಡಿದ್ದರು. ಉತ್ತಮವಾಗಿ ಬೆಳೆದ ಬೆಳೆ ಹೂ ಬಿಡುವ ವೇಳೆಯಲ್ಲಿ ಕೊಳೆತಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕೃಷಿ ಇಲಾಖೆಗೆ ದೂರು ನೀಡಿದ್ದು, ಅಧಿಕಾರಿಗಳು ಬಂದು ಸ್ಥಳ ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದು ನಾಗೇಗೌಡ ಅಳಲು ತೋಡಿಕೊಂಡಿದ್ದಾರೆ.

ಕೃಷಿ ಇಲಾಖಾಧಿಕಾರಿ ವೆಂಕಟೇಶ್ ಅವರನ್ನು ಸಂಪರ್ಕಿಸಿದಾಗ ಎಡೆಬಿಡದೇ ಸುರಿದ ಮಳೆಯಿಂದಾಗಿ ಹತ್ತಿ ಗಿಡಗಳಿಗೆ ನಿಗದಿಗಿಂತ ಹೆಚ್ಚು ನೀರು ಬಂದು ಅತೀವ ತೇವಾಂಶದಿಂದ ಈ ರೀತಿ ಆಗಿದೆ ಎಂದರು. ವಾಣಿಜ್ಯ ಬೆಳೆ ಹತ್ತಿಯನ್ನೇ ನಂಬಿ ಬದುಕುತ್ತಿದ್ದ ನಾಗೇಗೌಡ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಪಿಂಚಣಿ ಅದಾಲತ್ ನಾಳೆ
ಪಿರಿಯಾಪಟ್ಟಣ: ತಾಲ್ಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಜುಲೈ 11 ರಂದು ಬೆಳಿಗ್ಗೆ 11ಕ್ಕೆ ಹಾಗೂ ರಾವಂದೂರು ಗ್ರಾಮದಲ್ಲಿ ಮಧ್ಯಾಹ್ನ 1ಕ್ಕೆ ಪಿಂಚಣಿ ಅದಾಲತ್ ನಡೆಯಲಿದೆ ಎಂದು ತಹಶೀಲ್ದಾರ್ ಎಂ.ಕೆ. ಸವಿತಾ ತಿಳಿಸಿದ್ದಾರೆ. ಉಪವಿಭಾಗಾಧಿಕಾರಿಗಳು ಅಧ್ಯಕ್ಷತೆ ವಹಿಸುವರು. ಸಂಬಂಧಿಸಿದ ಹೋಬಳಿಯ ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.