ಮೈಸೂರು: ರೆಕಾರ್ಡಿಂಗ್ ಕಂಪೆನಿಗಳ ಕಪಿಮುಷ್ಟಿ ಯಲ್ಲಿ ಕನ್ನಡ ಭಾವಗೀತೆಗಳು ನಲುಗುತ್ತಿದ್ದು, ಕವಿ, ಸಂಗೀತಗಾರರನ್ನು ಈ ಬಂಧನದಿಂದ ಬಿಡಿಸುವ ಅಗತ್ಯವಿದೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.
ನಗರದ ಜಾವಾ ರೋಟರಿ ಶಾಲೆಯ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಎನ್.ಸ್ವಾಮಿನಾಥನ್ ಅವರ `ಸ್ಪಂದನ~ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಭಾವಗೀತೆ ಸಂಕಲನ ಬಿಡುಗಡೆ ಮಾಡುವುದು ಸುಲಭ. ಆದರೆ ಅವನ್ನು ಹಾಡಾಗಿ ಕ್ಯಾಸೆಟ್ ರೂಪದಲ್ಲಿ ಹೊರ ತರುವುದು ಕಷ್ಟ. ಅಂತಹ ಸಾಹಸಕ್ಕೆ ಕೈ ಹಾಕಿದರೆ ರೆಕಾರ್ಡಿಂಗ್ ಕಂಪೆನಿಗಳನ್ನು ಎದುರಿಸುವ ಶಕ್ತಿ ಬೇಕಾಗುತ್ತದೆ.
ಕವಿಗಳು, ಸಂಗೀತಗಾರರು ಅವರ ಕಪಿಮುಷ್ಟಿಯಲ್ಲಿ ಸಿಲುಕಿರುವುದು ಕನ್ನಡಿಗರಿಗೆ ಆದ ಅವಮಾನ. ಇದರಿಂದ ಸಮರ್ಥ ಕವನಗಳು ಭಾವಗೀತೆಗಳಾಗಿ ಹೊರಬರುತ್ತಿಲ್ಲ. ಹಳೆಯ ಗೀತೆಗಳನ್ನೇ ಮತ್ತೆ ಮತ್ತೆ ಕೇಳುವ ಪರಿಸ್ಥಿತಿ ತಲೆದೂರಿದೆ ಎಂದು ಬೇಸರ ವ್ಯಕ್ತಪಡಿಸಿದರು.
`ಸ್ಪಂದನ~ ಕೃತಿಯಲ್ಲಿರುವ ಬಹುತೇಕ ಕವನಗಳು ಭಾವಗೀತೆಯ ಸಾಮರ್ಥ್ಯ ಹೊಂದಿವೆ. ವೈವಿಧ್ಯಮಯ ವಸ್ತು ಕವಿಯ ಸಾಮರ್ಥ್ಯವನ್ನು ಸೂಚಿಸುತ್ತದೆ. ತಂತ್ರಜ್ಞಾನ, ವಾಣಿಜ್ಯ ವಿಷಯಗಳ ಕುರಿತು ಕವಿತೆ ರಚಿಸುವುದು ಕಷ್ಟ.
ಆದರೆ ಕವಿ ಆ ವಸ್ತುಗಳನ್ನು ದುಡಿಸಿಕೊಂಡಿದ್ದಾರೆ. ಕನ್ನಡ ಪ್ರಾಧ್ಯಾಪಕರು ಮಾತ್ರ ಸಾಹಿತ್ಯ ಲೋಕ ಪ್ರವೇಶಿಸಿದರೆ ಹಳಸಿದ ಊಟವನ್ನೇ ಬಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಾಹಿತ್ಯಕ್ಕೆ ಬೇರೆ ಕ್ಷೇತ್ರದ ಸೃಜನಶೀಲ ಮನಸ್ಸುಗಳು ಬರಬೇಕು ಎಂದು ಪೂರ್ಣಚಂದ್ರ ತೇಜಸ್ವಿ ಆಶಿಸಿದ್ದರು. ಸ್ವಾಮಿನಾಥನ್ ಅವರು ಐಟಿ, ಬಿಟಿ ಕ್ಷೇತ್ರದ ಅನುಭವಗಳನ್ನು ಕನ್ನಡಕ್ಕೆ ದಕ್ಕಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲೇಖಕಿ ಡಾ.ಧರಣಿದೇವಿ ಮಾಲಗತ್ತಿ ಮಾತನಾಡಿ, ಐಟಿ-ಬಿಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಕನ್ನಡದ ಕಳಚಿದ ಕೊಂಡಿಗಳು ಎಂದು ನಿರ್ಧರಿಸಲಾಗಿದೆ. ಆದರೆ ಅಲ್ಲಿಯೂ ಕನ್ನಡದ ಕಂಪನ್ನು ಪಸರಿಸುವವರು ಇದ್ದಾರೆ.
ಕೆ.ಎಸ್. ನರಸಿಂಹಸ್ವಾಮಿ, ದ.ರಾ.ಬೇಂದ್ರೆ ಅವರ ಪ್ರಭಾವದಿಂದ ಕವಿ ಹೊರಬರಬೇಕಿತ್ತು. ಹೊಸ ರೂಪಕಗಳನ್ನು ಸೃಷ್ಟಿಸಿದರೆ ಕವಿತೆಯ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು. ಪತ್ರಕರ್ತ ಕೃಷ್ಣವಟ್ಟಂ ಅಧ್ಯಕ್ಷತೆ ವಹಿಸಿದ್ದರು. ಕವಿ ಎನ್.ಸ್ವಾಮಿನಾಥನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.