ADVERTISEMENT

‘ಗದ್ದಿಗೆ ಭಾಗದಲ್ಲಿ ನೀರಾವರಿಗೆ ಆದ್ಯತೆ’

​ಪ್ರಜಾವಾಣಿ ವಾರ್ತೆ
Published 6 ಮೇ 2018, 12:45 IST
Last Updated 6 ಮೇ 2018, 12:45 IST

ಹುಣಸೂರು: ‘ಗದ್ದಿಗೆ ಕ್ಷೇತ್ರದ ಅಚ್ಚು ಕಟ್ಟು ಪ್ರದೇಶದ ಜನರಿಗೆ ನೀರಾವರಿ ಸೌಲಭ್ಯ ನೀಡುವ ಮೂಲಕ ನೀರಾವರಿ ಬಯಲಿನ ಕೃಷಿಕರಿಗೆ ಸಹಾಯ ಹಸ್ತ ನೀಡಿದ್ದೇನೆ’ ಎಂದು ಶಾಸಕ ಮಂಜುನಾಥ್‌ ಹೇಳಿದರು.

ತಾಲ್ಲೂಕಿನ ಗದ್ದಿಗೆ ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಿ ಮಾತನಾಡಿದರು. ‘ಈ ಭಾಗದ ಗ್ರಾಮಗಳ ಅಭಿವೃದ್ಧಿ ಮತ್ತು ಅಚ್ಚುಕಟ್ಟು ಪ್ರದೇಶದ ನಾಲಾಭಿ ವೃದ್ಧಿಗಳಿಗೆ ಆದ್ಯೆತೆ ನೀಡಿ ಕಾಮಗಾರಿ ನಡೆಸಿದ್ದೇನೆ. ಅಲ್ಲದೆ, ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೆರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಲಭ್ಯವಾಗುವ ಎಲ್ಲ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದರು.‌

‘ಕರಿಮುದ್ದನಹಳ್ಳಿ, ಕೆಂಚನಕೆರೆ, ಸೂಳೆ ಕೆರೆಗಳಿಗೆ ದಶಕಗಳ ಬಳಿಕ ನೀರು ಬಂದಿದೆ. ಈ ಭಾಗದಲ್ಲಿ ಜನ ಮತ್ತು ಜಾನುವಾರುಗಳಿಗೆ ಬೇಸಿಗೆಯ ಬಿಸಿ ತಟ್ಟದಂತೆ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದರು.

ADVERTISEMENT

‘ಈ ಭಾಗದಲ್ಲಿ ಅತಿ ಹೆಚ್ಚು ಕುರುಬ ಸಮಾಜದವರಿದ್ದು, ನಿಮ್ಮ ಸಮುದಾಯದ ಮುತ್ಸದ್ಧಿ ರಾಜಕಾರಣಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್‌ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಸಿದ್ದರಾಮಯ್ಯ ಅವರ ಕೊಡುಗೆ ಮನಸ್ಸಿನಲ್ಲಿಟ್ಟುಕೊಂಡು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

‘ಗದ್ದಿಗೆ ಭಾಗದ ಧರ್ಮಾಪುರ ಮತ್ತು ತರಿಕಲ್ಲು ಗ್ರಾಮದ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಪ್ರಗತಿಯಲ್ಲಿದೆ. ತರಿಕಲ್ಲು ದೇವಸ್ಥಾನ ಹೊಯ್ಸಳ ಕಾಲದ್ದಾಗಿದ್ದು, ಇದರ ಜೀರ್ಣೋದ್ಧಾರ ಪೂರ್ಣಗೊಂಡ ಬಳಿಕ ಈ ಭಾಗಕ್ಕೆ ಪ್ರವಾಸಿಗರು ಬರಲಿದ್ದಾರೆ. ಈ ಮೂಲಕ ಇಲ್ಲಿನ ಯುವಕರಿಗೆ ಉದ್ಯೋಗ ಸೃಷ್ಠಿಯಾಗಲಿದೆ’ ಎಂದರು.

‘ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ಅಲೆ ಇದೆ. ವಿರೋಧ ಪಕ್ಷದವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಜನರು ವದಂತಿಗೆ ಕಿವಿಗೊಡದೆ ಕಾಂಗ್ರೆಸ್‌ ಬೆಂಬಲಿಸಿದರೆ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ’ ಎಂದು ಹೇಳಿದರು.

ಸಮಯದಲ್ಲಿ ದೇವರಾಜ್‌, ರಮೇಶ್‌, ಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.