ADVERTISEMENT

ಗುಣಮಟ್ಟದ ಶಿಕ್ಷಣ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 6:15 IST
Last Updated 22 ಸೆಪ್ಟೆಂಬರ್ 2011, 6:15 IST

ಮೈಸೂರು: `ಸಾಂಪ್ರದಾಯಿಕ ವಿಶ್ವ ವಿದ್ಯಾನಿಲಯಗಳಂತೆ ಮುಕ್ತ ವಿಶ್ವ ವಿದ್ಯಾನಿಲಯಗಳು ಗುಣಮಟ್ಟದ ಶಿಕ್ಷಣವನ್ನು ಕೊಡಬೇಕು~ ಎಂದು ನವ ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ವಿ.ಎನ್.ರಾಜಶೇಖರನ್ ಪಿಳೈ ಬುಧವಾರ ಕರೆ ನೀಡಿದರು.

ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಮೂರು ದಿನಗಳ ಕಾಲ ಆಯೋಜಿಸಿರುವ `ಜಾಗತಿಕ ಪರಿಸರದಲ್ಲಿ ಮುಕ್ತ ಮತ್ತು ದೂರ ಶಿಕ್ಷಣ ಕಲಿಕೆ: ವಿಷಯ ಮತ್ತು ಸವಾಲುಗಳು~ ಕುರಿತಾದ ಅಂತರ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಮುಕ್ತ ವಿಶ್ವವಿದ್ಯಾನಿಲಯಗಳು ದೂರ ಶಿಕ್ಷಣದ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ಈ ಮೂಲಕ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಕೊಳ್ಳುತ್ತಲೇ ಹೋಗಬೇಕು~ ಎಂದು ಹೇಳಿದರು.

`ಭಾರತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಆದ್ದರಿಂದ ದೂರು ಶಿಕ್ಷಣ ಕಲಿಕೆಯ ಸರಳವಾಗಿರಬೇಕು. ಮುಕ್ತ ವಿಶ್ವವಿದ್ಯಾನಿಲಯಗಳು ಹೆಚ್ಚು ಮಂದಿಗೆ ಶಿಕ್ಷಣದ ಜೊತೆಗೆ ಕೌಶಲ ವನ್ನು ಕೊಡುತ್ತದೆ. ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಮತ್ತು ಕೌಶಲ ದೊಡ್ಡ ಸವಾಲಾಗಿದೆ~ ಎಂದ ಅವರು `ಮಹಿಳೆಯರಿಗೆ ಪರಿಣಾಮಕಾರಿಯಾಗಿ ಶಿಕ್ಷಣ ಕೊಡಬೇಕು. ನಮ್ಮ ದೇಶದಲ್ಲಿ ಪೌಷ್ಟಿಕತೆ ಮತ್ತು ಮೂಲ ಶಿಕ್ಷಣವೂ ಸಹ ದೊಡ್ಡ ಸವಾಲಾಗಿದೆ. ಆದರೆ ಅಭಿವೃದ್ಧಿ ಹೊಂದಿದ ದೇಶಗಳು ಇವೆರಡಕ್ಕೂ ಹೆಚ್ಚಿನ ಗಮನಕೊಟ್ಟಿವೆ. ಆದ್ದರಿಂದ ಭಾರತದಲ್ಲಿಯೂ ತಾಯಿ, ಮಗು ಆರೋಗ್ಯದತ್ತ ಗಮನ ಹರಿಸಬೇಕು. ಪ್ರತಿ ಮಗುವಿಗೂ ಪೌಷ್ಟಿಕ ಆಹಾರ ಸಿಗುವಂತಾಗಬೇಕು~ ಎಂದರು.

`ದೇಶದಲ್ಲಿ ನೂರಾರು ವಿಶ್ವವಿದ್ಯಾನಿಲಯಗಳು, ಸಾವಿರಾರು ಕಾಲೇಜುಗಳು ಇವೆ. ಆದರೂ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಪ್ರಮಾಣ ಶೇಕಡ 12 ರಷ್ಟು ಇದೆ. ಇದು ಇನ್ನು ಹತ್ತು-ಹದಿನೈದು ವರ್ಷಗಳಲ್ಲಿ ಶೇಕಡಾ 20 ರಿಂದ 25 ತಲುಪುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಆದ್ದರಿಂದ ಮೂಲಕ ಶಿಕ್ಷಣಕ್ಕೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸಬೇಕು~ ಎಂದರು.

ಕಂಬಾರರಿಗೆ ಅಭಿನಂದನೆ
`ಹಂಪಿಯಲ್ಲಿ ಕನ್ನಡ ವಿಶ್ವ ವಿದ್ಯಾನಿಲಯವನ್ನು ಕಟ್ಟಿ ಬೆಳೆಸಿದ ಡಾ.ಚಂದ್ರಶೇಖರ ಕಂಬಾರ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು  ಸಂತಸವನ್ನುಂಟು ಮಾಡಿದೆ. ಅವರನ್ನು ಹೃದಯತುಂಬಿ ಅಭಿನಂದಿಸುತ್ತೇನೆ.

ಕಂಬಾರರು ಸೇರಿ ಒಟ್ಟು ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷೆಗೆ  ಸಂದಿದೆ. ನಂತರದ ಸ್ಥಾನದಲ್ಲಿ ಹಿಂದಿ ಇದೆ~ ಎಂದು ಹೇಳಿದರು.

ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರಫುಲ್ಲತಾ ಭಾರದ್ವಾಜ್ ಹಾಜರಿದ್ದರು. ಕೆನಡಾದ ಕಾಮನ್ ವೆಲ್ತ್ ಆಫ್ ಲರ್ನಿಂಗ್‌ನ ಅಧ್ಯಕ್ಷ ಜಾನ್ ಡೇನಿಯಲ್ ಸಮ್ಮೇಳನದ ಪ್ರಧಾನ ಭಾಷಣ ಮಾಡಿದರು. ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಜಿಸ್ಟ್ರಾರ್ ಕೆ.ಆರ್.ಜಯಪ್ರಕಾಶ್ ರಾವ್, ಡೀನ್ (ಶೈಕ್ಷಣಿಕ) ಪ್ರೊ.ಜೆ.ಜಗದೀಶ್, ಡೀನ್ ಟಿ.ಡಿ.ದೇವೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.