ADVERTISEMENT

ಚರಂಡಿ ಕಾಣದ ಸುಶಿಕ್ಷಿತರ ಗ್ರಾಮ

ಪ್ರಜಾವಾಣಿ ವಿಶೇಷ
Published 5 ಏಪ್ರಿಲ್ 2012, 8:10 IST
Last Updated 5 ಏಪ್ರಿಲ್ 2012, 8:10 IST

ಹುಣಸೂರು: ತಾಲ್ಲೂಕಿನ ಬೀಜಗನಹಳ್ಳಿ ಗ್ರಾಮ ಪಂಚಾಯಿತಿ ಆರ್ಥಿಕವಾಗಿ ಸಾಕಷ್ಟು ಸದೃಢವಾಗಿದ್ದರೂ ಗ್ರಾಮದಲ್ಲಿ ಮೂಲ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ಗ್ರಾಮದ ಪ್ರತಿಯೊಂದು ರಸ್ತೆಯಲ್ಲಿನ ಚರಂಡಿ ಹಾಳಾಗಿದ್ದು ಇಡೀ ಪರಿಸರ ಅನೈರ್ಮಲ್ಯದಿಂದ ಕೂಡಿದೆ.

ಬೀಜಗನಹಳ್ಳಿ ಪಂಚಾಯಿತಿ ಮೈಸೂರು-ಭಟ್ವಾಳ ರಾಜ್ಯ ಹೆದ್ದಾರಿ 88ಕ್ಕೆ ಹೊಂದಿಕೊಂಡಿದ್ದು, ಹುಣಸೂರಿನಿಂದ ಕೇವಲ 4 ಕಿ.ಮೀ. ದೂರದಲ್ಲಿದೆ. ಗ್ರಾಮಕ್ಕೆ ಉತ್ತಮ ಸಂಪರ್ಕ ರಸ್ತೆ ಇದ್ದರೂ ಮೂಲ ಸವಲತ್ತುಗಳು ಸಿಕ್ಕಿಲ್ಲ. ಗ್ರಾಮದಲ್ಲಿನ ಚರಂಡಿಗಳಲ್ಲಿ ಬಹುಪಾಲು ದುರಸ್ತಿಗೆ ಬಂದಿವೆ. ಎಲ್ಲೆಂದರಲ್ಲಿ ಹೂಳು ತುಂಬಿ ತ್ಯಾಜ್ಯ ನಿಂತುಕೊಂಡಿದೆ.

ಈಗ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು ಗ್ರಾಮದ ನೀರಿನ ಮೂಲಗಳೂ ಬತ್ತಿವೆ. ಹೀಗಾಗಿ ಪ್ರತಿದಿನ ಇಲ್ಲಿನ ಜನ ನೀರಿಗಾಗಿ ಪರದಾಡಬೇಕು. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ತಾಲ್ಲೂಕು ಪಂಚಾಯಿತಿಯಲ್ಲಿ ಒಂದು ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಅಧಿಕಾರಿಯನ್ನೂ  ನೇಮಕ ಮಾಡಲಾಗಿದೆ. ಹೀಗಿದ್ದರೂ ಈ ಗ್ರಾಮದಲ್ಲಿ ನೀರಿನ ಸಮಸ್ಯೆ ನೀಗಿಲ್ಲ.

`ಗ್ರಾಮ ನೈರ್ಮಲ್ಯ ಯೋಜನೆ ಕುರಿತು ಪ್ರತಿಯೊಂದು ಗ್ರಾಮ ಸಭೆಯಲ್ಲಿ ಮಾತನಾಡುತ್ತಾರೆ. ಆದರೆ, ದಲಿತ ಕೇರಿಗೆ ಸೂಕ್ತ ಚರಂಡಿ ಮತ್ತು ರಸ್ತೆ ನಿರ್ಮಿಸಿಲ್ಲ. ಮಂಡಲ ಪಂಚಾಯಿತಿ ಆಡಳಿತ ಇದ್ದಾಗಿನಿಂದಲೂ ಮನವಿ ನೀಡುತ್ತಲೇ ಇದ್ದೇವೆ. ಕೇರಿಗೆ ಚರಂಡಿ ಮತ್ತು ರಸ್ತೆ ಮಾಡಿಲ್ಲ. ಇಂಥವರಿಂದ ಬೇರೇನು ನಿರೀಕ್ಷಿಸುವುದು?~ ಎಂದು ಪ್ರಶ್ನಿಸುತ್ತಾರೆ ದಲಿತ ಕೇರಿಯ ಮುಖಂಡರು.

ಬೀಜಗನಹಳ್ಳಿಯ ಮಧ್ಯಭಾಗದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರಾದ ಬಹಳಷ್ಟು ಕುಟುಂಬಗಳು ಮನೆ ಕಟ್ಟಿಕೊಂಡಿವೆ. ಆದರೆ, ಇಲ್ಲಿಯೂ ಚರಂಡಿ ವ್ಯವಸ್ಥೆ ಸರಿ ಇಲ್ಲ. ಹೀಗಾಗಿ ಇಲ್ಲಿನ ಜನ ಪದೇ ಪದೇ ಒಂದೊಲ್ಲೊಂದಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ.

ಬೀಜಗನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗದ್ದೆಗಳು ಭಾರಿ ಬೇಡಿಕೆ ಇದೆ. ಈಗಾಗಲೇ ಗ್ರಾಮದ ಹೊರವಲಯದಲ್ಲಿ ಹಲವಾರು ಬಡಾವಣೆಗಳು ಅಭಿವೃದ್ಧಿಗೊಂಡಿವೆ. ಪಂಚಾಯಿತಿಗೆ ಕಂದಾಯ ಮೂಲಕ ಹಣ ಹರಿದುಬತ್ತಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಂಪಾದನೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.