ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 65ನೇ ಹುಟ್ಟುಹಬ್ಬವನ್ನು ನಗರದ ವಿವಿಧೆಡೆ ಸಿದ್ದರಾಮಯ್ಯನವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಭಾನುವಾರ ಸಡಗರ, ಸಂಭ್ರಮದಿಂದ ಆಚರಿಸಿದರು.
ಆದಿಪೂಜಿತ ಗೆಳೆಯರ ಬಳಗದ ವತಿಯಿಂದ ಬೆಳಿಗ್ಗೆ ಚಾಮುಂಡೇಶ್ವರಿ ದೇವಸ್ಥಾನ, ಗರಡಿ ಕೇರಿ ಮಹದೇಶ್ವರ ಸ್ವಾಮಿ, ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ತಿಲಕ್ ನಗರದ ಸರ್ಕಾರಿ ಅಂಧ ಮತ್ತು ಮೂಕರ ಪಾಠಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಮಧ್ಯಾಹ್ನ 1 ಗಂಟೆಗೆ ಮಕ್ಕಳಿಗೆ ಭೋಜನ ನೀಡಲಾಯಿತು. ನಗರ ಕಾಂಗ್ರೆಸ್ ಅಧ್ಯಕ್ಷ ಸಿ.ದಾಸೇಗೌಡ, ಎಐಸಿಸಿ ಸದಸ್ಯೆ ಮುಕ್ತರುನ್ನಿಸ್ಸಾ ಬೇಗಂ ಇದ್ದರು. ಹೊಸಹುಂಡಿ ಗೇಟ್ ಬಳಿಯ ಭಾಗ್ಯಮ್ಮ ನರಸೇಗೌಡ ಛತ್ರದಲ್ಲಿ 100 ಬಡ ಮಹಿಳೆಯರಿಗೆ ಸೀರೆ, ಶಾಲಾ ಮಕ್ಕಳಿಗೆ ತಟ್ಟೆ ಲೋಟ ವಿತರಿಸಲಾಯಿತು.
ಕನ್ನಡ ಜನಜಾಗೃತಿ ಸಂಘದ ವತಿಯಿಂದ ಮಹಾರಾಣಿ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಗರ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು. ಎಲ್‌ಕೆಜಿಯಿಂದ ಪಿಯುಸಿ ವರೆಗಿನ ಹಲವು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿ ಸಿದ್ದರು.
ಮಧ್ಯಾಹ್ನ ಬಹುಮಾನ ವಿತರಣಾ ಸಮಾರಂಭ ಜರುಗಿತು. ಕೆ.ಆರ್.ಆಸ್ಪತ್ರೆಯಲ್ಲಿ ಕಾರ್ಯಕರ್ತರು ರಕ್ತದಾನ ಶಿಬಿರ ಏರ್ಪಡಿಸಿದ್ದರು. ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಸೇರಿದಂತೆ ಅನೇಕರು ರಕ್ತದಾನ ಮಾಡಿದರು.
ಮಾಜಿ ಮೇಯರ್ ಅನಂತು, ನಾರಾಯಣ್, ಆರೀಫ್ ಹುಸೇನ್, ಟಿ.ಬಿ.ಚಿಕ್ಕಣ್ಣ ಸೇರಿದಂತೆ ಗಣ್ಯರು ಹಾಜರಿದ್ದರು.
ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಚಾಮುಂಡಿ ತಪ್ಪಲಿನ ದಿವ್ಯವನದಲ್ಲಿ ಬೆಳಿಗ್ಗೆ 10.30ಕ್ಕೆ ಶ್ರೀಗಂಧದ ಸಸಿ ನೆಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.