ADVERTISEMENT

ಚಿತ್ರಸಂತೆ:ಭಾವ-ಬಣ್ಣಗಳ ಖರೀದಿ!

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 5:45 IST
Last Updated 15 ಅಕ್ಟೋಬರ್ 2012, 5:45 IST

ಮೈಸೂರು: ಅದು ನಿಜಕ್ಕೂ ಸಂತೆಯೇ. ಮಕ್ಕಳಿಂದ ಹಿಡಿದು ಮುದುಕರ ವರೆಗೆ ಎಲ್ಲರೂ ಅಲ್ಲಿದ್ದರು. ಗೋಜು, ಗದ್ದಲ, ಇಷ್ಟವಾದದ್ದನ್ನು ಕೊಳ್ಳುವ ಬಯಕೆ, `ಉತ್ಪನ್ನ~ವನ್ನು ಮಾರುವ ತವಕ ಎಲ್ಲವೂ ಇದ್ದವು. ಅಚ್ಚೆಯನ್ನು ದೇಹದ ಮೇಲೆ ಹಾಕಿಸಿಕೊಳ್ಳುವಲ್ಲಿ ಯುವ ಸಮೂಹ ನಿರತವಾಗಿದ್ದರೆ;  ಮತ್ತೊಂದೆಡೆ ಸುಂದರ ಮುಖ ಕ್ಯಾನ್ವಾಸ್ ಮೇಲೆ ಅರಳುವುದನ್ನು ಕಣ್ತುಂಬಿಕೊಳ್ಳುವ ಕಾತರದಿಂದ ಕೆಲವರು ಕಲಾವಿದರ ಮುಂದೆ ರೂಪದರ್ಶಿಯಾಗಿ ಕುಳಿತ್ತಿದ್ದರು!

ಅಲ್ಲಿ ಚೌಕಾಸಿ ಇರಲಿಲ್ಲ. ಚೀಲದ ತುಂಬ ವಸ್ತುಗಳನ್ನು ಕೊಂಡೊಯ್ಯ ಲಿಲ್ಲ. ಆದರೂ ಸದಾ ವಾಹನ ದಟ್ಟಣೆ ಯಿಂದ ಕೂಡಿರುತ್ತಿದ್ದ ನಂಜರಾಜ ಬಹದ್ದೂರ್ ಛತ್ರದ ಮುಂಭಾಗದ ರಸ್ತೆಯಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯಿತು. ಭಾವನೆಗಳನ್ನು ತುಂಬಿ ಕ್ಯಾನ್ವಾಸ್ ಮೇಲೆ ಅರಳಿಸಿದ ಕಲಾಕೃತಿಗಳು ಕಲಾ ರಸಿಕರ ಕೈ ಸೇರಿದವು.

ವಿಶ್ವಮಾನವ ಯುವ ವೇದಿಕೆ ಭಾನುವಾರ ಏರ್ಪಡಿಸಿದ್ದ ಮೂರನೇ ವಾರ್ಷಿಕ ಚಿತ್ರಸಂತೆಯಲ್ಲಿ 110ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು. ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗುಲ್ಬರ್ಗಾ, ತಮಿಳುನಾಡು, ಅಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧ  ಭಾಗಗಳ ಕಲೆಯ ವೈವಿಧ್ಯತೆ ಮನಸೆಳೆಯುತ್ತಿದ್ದವು. ರಸ್ತೆಯ ಎರಡು ಬದಿಯಲ್ಲಿ ಪ್ರದರ್ಶನಗೊಂಡಿದ್ದ ಕಲಾ ಕೃತಿಗಳನ್ನು ಆಸ್ವಾದಿಸುತ್ತಿದ್ದರೆ ಹೊತ್ತು ಸರಿಯುವುದೇ ಅರಿವಿಗೆ ಬರುತ್ತಿರಲಿಲ್ಲ. ವ್ಯಕ್ತಿಚಿತ್ರ, ನಿಸರ್ಗ, ಸಾಂಪ್ರದಾಯಿಕ, ವರ್ಲಿ, ನೆರಳು- ಬೆಳಕು, ಮಿನಿಯೇಚರ್, ಆಧುನಿಕ ಶೈಲಿಯ ಚಿತ್ರಗಳು ಎಲ್ಲರ ಮನ ತಣಿಸಿದವು.

ತಮಿಳುನಾಡು ಕಲಾವಿದ ಮರಿಯಪ್ಪನ್ ರಚಿಸಿದ್ದ ಕಲಾಕೃತಿಗಳು ಚಿತ್ರಸಂತೆಯ ಪ್ರಮುಖ ಆಕರ್ಷಣೆ ಯಾಗಿದ್ದವು. ಸಾಂಪ್ರದಾಯಿಕ ಉಡುಗೆ ತೊಟ್ಟು, ಮಲ್ಲಿಗೆ ಮುಡಿದ ಯುವತಿ ಮೊಸರು ಕಡೆಯುವ ದೃಶ್ಯವನ್ನು ಕಲಾವಿದ ಮನಮೋಹಕವಾಗಿ ಚಿತ್ರಿ ಸಿದ್ದರು. ಶೃಂಗಾರದಲ್ಲಿ ತೊಡಗಿದ್ದ ಮದುವಣಗಿತ್ತಿ ಸೂಜಿಗಲ್ಲಿನಂತೆ ಸೆಳೆ ಯುತ್ತಿದ್ದಳು. ರೂ.60 ಸಾವಿರದಿಂದ 80 ಸಾವಿರದ ವರೆಗಿನ ಕಲಾಕೃತಿಗಳು ಇವರ ಬಳಿ ಇದ್ದವು. ಕೊಲ್ಲಾಪುರದ ಪ್ರವೀಣ್ ಅವರ ನೆರಳು- ಬೆಳಕಿನ ಕಲಾಕೃತಿಗಳು ಛಾಯಾ ಚಿತ್ರಕ್ಕಿಂತಲೂ ಅದ್ಭುತವಾಗಿದ್ದವು.

ಗುಲ್ಬರ್ಗಾದ ಯುವ ಕಲಾವಿದ ಜಾವೀದ್ ಅನ್ಸಾರಿ 17ನೇ ಶತಮಾ ನದ ಚಿತ್ರಣವನ್ನು ಕಟ್ಟಿ ಕೊಟ್ಟರು. ವಿಜಯನಗರ ಸಾಮ್ರಾಜ್ಯದ ಸುರಪುರ ಶೈಲಿಯಲ್ಲಿ ಶಿವನ ತಾಂಡವ ನೃತ್ಯ, ಶಿವ ಪುರಾಣ ಹಾಗೂ ರಾಧಾಕೃಷ್ಣ ಸೇರಿ ದಂತೆ 20ಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಿದ್ದರು. ಚರ್ಮ ಹಾಗೂ ಗಾಜಿನಲ್ಲಿ ರಚಿಸಿದ ರಾಜರ ಪಾದರಕ್ಷೆಗಳ ಮಿನಿಯೇಚರ್ ಪೇಂಟಿಂಗ್‌ಗಳು ಕಣ್ಮನ ಸೆಳೆದವು. ಕೇರಳದ ಪ್ರಕಾಶ್ ಕೆ.ಪಯ್ಯನೂರ್ ಅವರು ಸಾಂಪ್ರದಾ ಯಿಕ ಶೈಲಿಯಲ್ಲಿ ಸೃಷ್ಟಿಸಿದ ಕಥಕ್ಕಳಿಯ ಕಲಾಕೃತಿಗಳು ಭಾವನೆಗಳನ್ನು ಸ್ಫುರಿಸುತ್ತಿದ್ದವು.

ಶೃಂಗಾರ, ಹಾಸ್ಯ, ಸಿಟ್ಟು, ರೌದ್ರ, ಭಯ, ಕರುಣ, ಶಾಂತಿ... ಹೀಗೆ ಕಥಕ್ಕ ಳಿಯಲ್ಲಿರುವ ನವರಸಗಳನ್ನು ಒಂದೇ ಫ್ರೇಮ್‌ನಲ್ಲಿ ಹಿಡಿದಿಟ್ಟ ಚಿತ್ರವನ್ನು ರೂ. 50 ಸಾವಿರಕ್ಕೆ ಮಾರಾಟಕ್ಕೆ ಇಡಲಾಗಿತ್ತು.

ಜನರ ಬಳಿಗೆ ಚಿತ್ರಕಲೆ: ಇದಕ್ಕೂ ಮುನ್ನ ಕರ್ನಾಟಕ ಲಲಿತ ಕಲಾ ಅಕಾಡೆ ಮಿಯ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ ಚಿತ್ರ ಸಂತೆಯನ್ನು ಉದ್ಘಾಟಿಸಿ ಮಾತನಾ ಡಿದ ಅವರು, ಇತ್ತೀಚಿನ  ವರ್ಷಗಳಲ್ಲಿ ಸಮಕಾಲೀನ ಚಿತ್ರಕಲೆಯ ಕಡೆಗೆ ಜನರು ಬರುತ್ತಿಲ್ಲ. ಹಾಗಾಗಿ ಚಿತ್ರ ಕಲೆಯೇ ಜನರ ಬಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ಈ  ನಿಟ್ಟಿನಲ್ಲಿ ಚಿತ್ರಸಂತೆ ಯನ್ನು ಕಳೆದ ಒಂದು ದಶಕದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಆಯೋಜಿಸಲಾಗುತ್ತಿದೆ ಎಂದರು.

ಗ್ಯಾಲರಿಗಳಲ್ಲಿರುವ ಕಲಾಕೃತಿಗಳು ಸಾಮಾನ್ಯರ ಕೈಗೆ ಎಟಕುತ್ತಿಲ್ಲ. ಚಿತ್ರಸಂತೆಯಲ್ಲಿ ಅಂತಹ ಸಮಸ್ಯೆ ಇಲ್ಲ. ಎಲ್ಲ ಪ್ರಕಾರದ ಕಲೆಗಳು, ಸಾರ್ವಜನಿ ಕರಿಗೆ ಲಭ್ಯವಾಗುತ್ತವೆ. ಆದರೆ ಗಂಭೀರ ಶೈಲಿಯ ಕಲಾಕೃತಿಗಳು ಇಲ್ಲಿ ಕಾಣಸಿಗುತ್ತಿಲ್ಲ. ಜನಪ್ರಿಯ ಮಾದ ರಿಯ ಚಿತ್ರಗಳು ಮಾತ್ರ ಎಲ್ಲೆಡೆ ಲಭ್ಯ ವಾಗುತ್ತಿವೆ. ಇದರಲ್ಲಿ ಭಾಗವಹಿಸುವ ಕಲಾವಿದರು ಗುಣಾತ್ಮಕವಾಗಿ ಬದ ಲಾಗಬೇಕಾದ ಅಗತ್ಯವಿದೆ ಎಂದರು.

ಮೇಯರ್ ಎಂ.ಸಿ.ರಾಜೇಶ್ವರಿ ಅಧ್ಯ ಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ವೆಂಕೋಬರಾವ್, ಉಪನ್ಯಾಸಕಿ ಶೈಲಾ ನಾಗರಾಜ್, ವಿಶ್ವಮಾನವ ಯುವ ವೇದಿಕೆ ಅಧ್ಯಕ್ಷ ಎಂ.ಜೆ.ಸುರೇಶ್‌ಗೌಡ, ಚಿತ್ರಸಂತೆಯ ಸಂಚಾಲಕ ರವೀಂದ್ರ ಜೋಶಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.