ADVERTISEMENT

ಚಿನ್ಮಯಕ್ಕೆ ಕುಂಬ್ಳೆ ಕಾಣಿಕೆ!

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 6:20 IST
Last Updated 7 ಜನವರಿ 2012, 6:20 IST

ಮೈಸೂರು: ರಂಗುರಂಗಿನ ಬಟ್ಟೆಗಳನ್ನು ಧರಿಸಿದ್ದ ಮಕ್ಕಳ ಮುಖದಲ್ಲಿ ಸಂಭ್ರಮದ ರಂಗು. ನೆಚ್ಚಿನ ಕ್ರಿಕೆಟ್ ತಾರೆ ಕಣ್ಮುಂದೆ ಬಂದು ನಿಂತಾಗ ಅವರ ಹಸ್ತಾಕ್ಷರ ತೆಗೆದುಕೊಳ್ಳುವ ಸಡಗರದಲ್ಲಿ ತಮ್ಮನ್ನು ತಾವೇ ಮರೆತಿದ್ದರು.

ಭಾರತ ಕ್ರಿಕೆಟ್ ತಂಡದ ಮಾಜಿ ಅನಿಲ್ ಕುಂಬ್ಳೆ ಶುಕ್ರವಾರ ಸಂಜೆ ಜಯಲಕ್ಷ್ಮೀಪುರದ ಚಿನ್ಮಯ ವಿದ್ಯಾಲಯದ ವಾರ್ಷಿಕೋತ್ಸವ ಉದ್ಘಾಟಿಸಲು ಬಂದಾಗ ಇಲ್ಲಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಂತಸಕ್ಕೆ ಪಾರವೇ ಇರಲಿಲ್ಲ. `ಜಂಬೋ~ ಕಾರ್ಯಕ್ರಮ ಮುಗಿಸಿ ಮರಳಿ ಹೋಗುವವರೆಗೂ ಅವರ ಆಟೋಗ್ರಾಫ್‌ಗಾಗಿ ವಿದ್ಯಾರ್ಥಿಗಳು ಮುಗಿಬಿದ್ದರು.

ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಕುಂಬ್ಳೆ, `ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಬರುವ ಶಾಲೆಯ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ ಹತ್ತು ಸಾವಿರ ರೂಪಾಯಿ ಮತ್ತು ಪಿಯುಸಿ ದ್ವಿತೀಯ ವರ್ಷದ ರಸಾಯನಶಾಸ್ತ್ರದಲ್ಲಿ ಮೊದಲಿಗರಾಗುವ ವಿದ್ಯಾರ್ಥಿಗೆ ಹತ್ತುಸಾವಿರ ರೂಪಾಯಿ ಬಹುಮಾನವನ್ನು ನೀಡುತ್ತೇನೆ~ ಎಂದು ಘೋಷಿಸಿದರು.

`ನಾನು ಕ್ರೀಡಾಪಟುವಾಗಿಯೂ ನಗದು ಪ್ರಶಸ್ತಿಯನ್ನು ಶೈಕ್ಷಣಿಕ ವಿಭಾಗಕ್ಕೆ ಕೊಡುತ್ತಿರುವುದು ಏಕೆಂದರೆ, ಆಟದೊಂದಿಗೆ ಪಾಠದಲ್ಲಿಯೂ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಆಟವು ಸೋಲು ಮತ್ತು ಗೆಲುವನ್ನು ನಿಭಾಯಿಸುವ ಮನೋಭಾವ ಬೆಳೆಸಿದರೆ. ಓದು ಭವಿಷ್ಯ ರೂಪಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಆಟ-ಪಾಠ ಎರಡರಲ್ಲೂ ಸಮಾನ ಆಸಕ್ತಿ ತೋರಬೇಕು. ನಾನು ಕೂಡ ಚಿನ್ಮಯ ಕುಟುಂಬದ ಸದಸ್ಯನಾಗಿರುವುದು ಸಂತಸದ ವಿಷಯ~ ಎಂದು ಹೇಳಿದರು.

`ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಕಾರ್ಯ ನಿರ್ವಹಿಸುವ ಶಿಕ್ಷಕರು ಕ್ರೀಡೆಗಳಲ್ಲಿ ಆಸಕ್ತಿ ತೋರಬೇಕು. ವಿದ್ಯಾರ್ಥಿಗಳು ಬದುಕಿನಲ್ಲಿ ಶಿಸ್ತು ಮತ್ತು ಸಮರ್ಪಣಾ ಭಾವವನ್ನು ಬೆಳೆಸಿಕೊಳ್ಳಬೇಕು. ಯಾವುದೇ ಕಾರ್ಯವು ಯಶಸ್ವಿಯಾಗಬೇಕಾದರೆ ಸಂಪೂರ್ಣ ಸಮರ್ಪಣಾ ಭಾವ ಅಗತ್ಯ~ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಚಿನ್ಮಯ ವಿದ್ಯಾಲಯ ಆಡಳಿತ ಮಂಡಳಿ ಚೇರಮನ್ ಎಚ್.ಎನ್. ರಾಮತೀರ್ಥ, `ಮಕ್ಕಳಿಗೆ ಕುಟುಂಬದ ಸದಸ್ಯರೇ ಆದರ್ಶವಾಗಬೇಕು. ಅವರು ಒಳ್ಳೆಯ ಮಾದರಿಯಾದಾಗ ಮಾತ್ರ ಮಕ್ಕಳು ಉತ್ತಮ ದಾರಿ ಹಿಡಿಯುತ್ತಾರೆ. ಅನಿಲ ಕುಂಬ್ಳೆಯವರು ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಗಳಿಸಿದ ವ್ಯಕ್ತಿ.

ಸಮಯಪರಿಪಾಲನೆ, ಸಮರ್ಪಣಾ ಭಾವಗಳಿಂದ ಎಂಜಿನಿಯರಿಂಗ್‌ನಲ್ಲಿ ರ‌್ಯಾಂಕ್ ಪಡೆಯುದರ ಜೊತೆಗೆ ವಿಶ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿ ಬೆಳಗಿದ್ದಾರೆ. ಅವರು ಹುಟ್ಟಿನಿಂದಲೇ ನಾಯಕತ್ವ ಗುಣ ಇದ್ದವರು. ಅಂತಹವರ ಬದುಕು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು~ ಎಂದು ಹೇಳಿದರು.

ಚಿನ್ಮಯ ವಿದ್ಯಾಲಯದ ಅಧ್ಯಕ್ಷೆ ರಮಾದೇವಿ ರಾಮತೀರ್ಥ, ಆಡಳಿತಾಧಿಕಾರಿ ಎಂಎಸ್‌ಎಸ್ ಪ್ರಸಾದ್, ಪ್ರಭಾರ ಪ್ರಾಚಾರ್ಯರಾದ ಕುಶಲ, ಮುಖ್ಯೋಪಾಧ್ಯಾಯಿನಿ ಕೆ. ಮಂಗಳ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.