ADVERTISEMENT

ಜಾಗದ ಕೊರತೆ: ಅಭಿವೃದ್ಧಿಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 8:20 IST
Last Updated 19 ಮಾರ್ಚ್ 2011, 8:20 IST
ಜಾಗದ ಕೊರತೆ: ಅಭಿವೃದ್ಧಿಗೆ ಹಿನ್ನಡೆ
ಜಾಗದ ಕೊರತೆ: ಅಭಿವೃದ್ಧಿಗೆ ಹಿನ್ನಡೆ   

ಹುಣಸೂರು: ಗ್ರಾಮ ಪರಿಮಿತಿಯಲ್ಲಿ ಖಾಲಿ ನಿವೇಶನಗಳ ಕೊರತೆ ಇದ್ದು, ಮುಂದಿನ ದಿನಗಳಲ್ಲಿ ಸರ್ಕಾರದ    ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಕಷ್ಟವಾಗುತ್ತದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಶುಕ್ರವಾರ ಹೇಳಿದರು.ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದ ದಲಿತ ಕೇರಿಯಲ್ಲಿ ಜಿ.ಪಂ ವತಿಯಿಂದ 10 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರು ಸಂಗ್ರಹ ಘಟಕ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮಗಳಲ್ಲಿ ಸರ್ಕಾರಿ ಭೂಮಿ ಇಲ್ಲದೆ  ಯೋಜನೆ ಅನುಷ್ಠನಗೊಳಿಸಲು ಕಷ್ಟವಾಗಿದೆ.
 
ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾರ್ವಜನಿಕರನ್ನು  ಕಾಡುತ್ತಿದ್ದು, ಈ ಸಂಬಂಧ ಸರ್ಕಾರದಿಂದ ಕುಡಿಯುವ ನೀರು ಯೋಜನೆ ತಂದರೂ ಪಂಚಾಯಿತಿ ಯೋಜನೆ ಅನುಷ್ಠಾನಗೊಳಿಸಲು ಖಾಲಿ ನಿವೇಶನವಿಲ್ಲದೆ ಅತಂತ್ರ ಸ್ಥಿತಿಗೆ ತಲುಪಿತ್ತು. ಈ ಸಮಯದಲ್ಲಿ ನಾಯಕ ಸಮಾಜಕ್ಕೆ ಸೇರಿದವರು ಖಾಲಿ ನಿವೇಶನವನ್ನು ನೀಡಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಎಂದರು.

 ಹಿಂದಿನ ಕಾಲದಲ್ಲಿ ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ಸಹಕರಿಸಿ, ಯೋಜನೆ ಅನುಷ್ಠಾನಗೊಳಿಸಲು ಸ್ವಯಂ ಪ್ರೇರಿತರಾಗಿ ನಿವೇಶನ ನೀಡುತ್ತಿದ್ದರು. ಈಗ ಕಾಲ ಬದಲಾಗಿ, ಗ್ರಾಮಾಭಿವೃದ್ಧಿ ಯಾರಿಗೂ ಬೇಕಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಂಗನವಾಡಿ ಕೇಂದ್ರ: ತಾಲ್ಲೂಕಿನ 8 ಗ್ರಾಮಗಳಿಗೆ 8 ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಿಸಲು ಚಾಲನೆ ನೀಡಲಾಗಿದೆ. ಪ್ರತಿ ಯೊಂದು ಕಟ್ಟಡವನ್ನು ರೂ 4 ಲಕ್ಷ ಅಂದಾಜಿನಲ್ಲಿ ನಿರ್ಮಿಸಲಾಗುತ್ತದೆ.  ಬೀರನಹಳ್ಳಿ ಕಾವಲ್, ದಾಸನಪುರ,  ಕಾಡುವಡ್ಡರಗುಡಿ, ಕಂಪನಹಳ್ಳಿ, ಕೊಳವಿಗೆ ಹಾಡಿ, ಕೊಡಗು ಕಾಲೋನಿ, ಹೊಸೂರು ಮರದೂರು ಮತ್ತು ಮುಳ್ಳೂರು ಗ್ರಾಮದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಈ ಕಟ್ಟಡ ನಿರ್ಮಿಸಲು ಸರ್ಕಾರ 36 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಭೂ ಸೇನಾ ನಿಗಮ ಕಟ್ಟಡ ನಿರ್ಮಾಣದ ಜವಾಬ್ದಾರಿ ಹೊತ್ತಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ದಿನೇಶ್, ಸಿದ್ದಪ್ಪನಾಯಕ, ನಾಗಯ್ಯ, ಶರಣಚಾರಿ, ಗ್ರಾ.ಪಂ ಯೋಜನಾ ನಿರ್ದೇಶಕಿ ಪಿ.ಡಿ.ವಿಜಯಕುಮಾರಿ ಮತ್ತು ಸಮಾಜದ        ಮುಖಂಡರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.