ADVERTISEMENT

ಜೀವನ ಸಂಭ್ರಮಕ್ಕೆ ಜಾತ್ರೆಗಳು ಸಹಕಾರಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 10:45 IST
Last Updated 10 ಫೆಬ್ರುವರಿ 2012, 10:45 IST

ಎಚ್.ಡಿ.ಕೋಟೆ: ನಿತ್ಯ ಜೀವನಕ್ಕೆ ಸಂಭ್ರಮ ತಂದುಕೊಡುವಲ್ಲಿ ಜಾತ್ರೆ, ಉತ್ಸವಗಳು ಸಹಕಾರಿಯಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಭೀಮನಕೊಲ್ಲಿ ಬುಧವಾರ ನಡೆದ ಮಹದೇಶ್ವರಸ್ವಾಮಿ ಜಾತ್ರೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, `ದೇವಸ್ಥಾನದ ಆಭಿವೃದ್ಧಿಗೆ ಈಗಾಗಲೇ  50 ಲಕ್ಷ ರೂಪಾಯಿ ಬಿಡುಗೆಡಯಾಗಿದ್ದು, ಇನ್ನುಳಿದ 50 ಲಕ್ಷ ಹಣ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳುತ್ತೇನೆ. ಮೂರ್‌ಬಾಂದ್ ಗ್ರಾಮದಿಂದ ದೇವಸ್ಥಾನದ ರಸ್ತೆಯವರೆಗೆ 5.5 ಕಿ.ಮೀ. ರಸ್ತೆಯ ಅಭಿವೃದ್ಧಿಗೆ ರೂ. 60 ಲಕ್ಷದ ಕಾಮಗಾರಿಗೆ ಅನುಮೋದನೆ ದೊರೆತಿದೆ. ಒಂದು ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸಲಾಗುತ್ತದೆ~ ಎಂದು ಹೇಳಿದರು.

`ಬೇಲದಕುಪ್ಪೆ, ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನಗಳಿಗೆ ಹೆಚ್ಚಿನ ಭಕ್ತರು ಇದ್ದಾರೆ. ಈ ಭಾಗದಲ್ಲಿ ಕೇವಲ ಕುರುಚಲು ಕಾಡು ಮಾತ್ರ ಇದೆ. ಕೇಂದ್ರ ಸರ್ಕಾರದ ಹುಲಿ ಸಂರಕ್ಷಣಾ ಯೋಜನೆಯಿಂದ ಸಾರ್ವಜನಿಕರಿಗೆ ಅನಾವಶ್ಯಕವಾಗಿ ತೊಂದರೆ ಉಂಟಾಗುತ್ತಿದೆ. ಇದನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು~ ಎಂದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಕಿರಿಯ ಶ್ರೀ ಕೀರ್ತಿಪ್ರಭು ಸ್ವಾಮೀಜಿ ಹಾಗೂ ಸಿದ್ಧಲಿಂಗದೇವರು ಆಶೀರ್ವಚನ ನೀಡಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಂದ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಗೋಪಾಲಸ್ವಾಮಿ, ಡಿ.ಸುಂದರದಾಸ್, ಜಿಲ್ಲಾ ಪಂಚಾಯಿತಿ ಸದಸ್ಯೆ ಎಚ್.ಆರ್. ಭಾಗ್ಯಲಕ್ಷ್ಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಟಿ. ನರಸಿಂಹಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಜಿ. ಮಹೇಂದ್ರ, ಪುಟ್ಟಯ್ಯ, ಜಾತ್ರಾ ಸಮಿತಿ ಉಪಾಧ್ಯಕ್ಷ ಎನ್.ಶಿವಣ್ಣ, ಎಂ.ಎನ್. ಜಗದೀಶ್, ಎಪಿಎಂಸಿ ಅಧ್ಯಕ್ಷ ಸಿದ್ದಪ್ಪ, ಜಿ.ಟಿ. ವೆಂಕಟೇಶ್, ಪ್ರಭಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.