ADVERTISEMENT

ಜುಲೈನಿಂದಲೇ ದಸರಾಗೆ ಸಿದ್ಧತೆ: ರಾಮದಾಸ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 11:05 IST
Last Updated 2 ಜೂನ್ 2011, 11:05 IST

ಮೈಸೂರು: `ಈ ಬಾರಿಯ ದಸರಾ ಉತ್ಸವದ ಸಿದ್ಧತೆಯನ್ನು ಜುಲೈ ತಿಂಗಳಿನಿಂದಲೆ ಆರಂಭಿಸಲಾಗುವುದು~ ಎಂದು ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಎ.ರಾಮದಾಸ್ ಇಲ್ಲಿ ತಿಳಿಸಿದರು.

`ಇನ್ನು ಮುಂದೆ ದಸರಾಗೆ ಸರ್ಕಾರ ಪ್ರತ್ಯೇಕವಾಗಿ ಹಣ ನೀಡುವುದಿಲ್ಲ. ಬದಲಿಗೆ ಬಜೆಟ್‌ನಲ್ಲೇ ಪ್ರತಿ ವರ್ಷ ರೂ.10 ಕೋಟಿಯನ್ನು ದಸರಾಗೆ ಮೀಸಲಿಡಲಾಗುವುದು. ಜುಲೈ ಮೊದಲ ವಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ದಸರಾಗೆ ಸಂಬಂಧಿಸಿದಂತೆ ಸಭೆ ನಡೆಸಲಾಗುವುದು~  ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜಿಲ್ಲಾಧಿಕಾರಿ ಹರ್ಷಗುಪ್ತ ದಸರಾಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ವಿವರವಾದ ವರದಿಯೊಂದನ್ನು ಕಳುಹಿಸಿದ್ದಾರೆ. ಜಿಲ್ಲಾಧಿಕಾರಿಯೊಂದಿಗೆ  ಸರಿಯಾಗಿ ಹೊಂದಾಣಿಕೆ ಇಲ್ಲವೆ ಎಂದು ಪ್ರಶ್ನಿಸಿದಾಗ `ಹರ್ಷಗುಪ್ತ ತಮ್ಮ  ಅಭಿಪ್ರಾಯವನ್ನು ತಿಳಿಸಿದ್ದಾರೆ. ಮುಂದೆ ದಸರಾ ಕುರಿತು ಎಲ್ಲ ಅಧಿಕಾರಿಗಳೊಂದಿಗೆ  ಸಭೆ ನಡೆಸಲಾಗುವುದು~ ಎಂದು ತಿಳಿಸಿದರು.

`ಜಿಲ್ಲೆಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಶೇ.85 ರಷ್ಟು ಪ್ರಗತಿ ಆಗಿದೆ. ಮುಖ್ಯಮಂತ್ರಿ ರೂ.100 ಕೋಟಿ ಅನುದಾನದಲ್ಲಿ ರೂ.78 ಕೋಟಿ ಬಳಸಿಕೊಳ್ಳಲಾಗಿದೆ. ಎಚ್.ಡಿ.ಕೋಟೆ ತಾಲ್ಲೂಕು ಕೇಂದ್ರ ಮತ್ತು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆಗಳನ್ನು ತೆರೆಯಲಾಗುವುದು~ ಎಂದು ಹೇಳಿದರು.

`ಜು.1 ರಿಂದ ಹೊಸ ಮರಳು ನೀತಿ ಜಾರಿಯಾಗಲಿದೆ. 11 ಚೆಕ್‌ಪೋಸ್ಟ್‌ಗಳನ್ನು ತೆರೆಯಲು ಸರ್ಕಾರ ಹಣ ಬಿಡುಗಡೆ ಮಾಡಲಿದೆ. ಜನಸಾಮಾನ್ಯರು ನೇರವಾಗಿ ಡಿಡಿ ಕಟ್ಟಿ ಮರಳನ್ನು ಕೊಂಡುಕೊಳ್ಳಬಹುದು. ಎಕ್ಸೆಲ್ ಪ್ಲಾಂಟ್‌ನ್ನು ನಗರದಿಂದ ಹೊರಗೆ ಹಾಕಲು ನಿರ್ಧರಿಸಲಾಗಿದೆ. ಅದಕ್ಕಾಗಿ ರೂ.100 ಎಕರೆ ಭೂಮಿ ಅಗತ್ಯವಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ~ ಎಂದರು.

`ಮೈಸೂರು ನಗರವನ್ನು ಒಂದು ಪ್ರವಾಸಿ ಕೇಂದ್ರವನ್ನಾಗಿ ಮಾಡಲು ನಾವು ವಿಫಲ ಆಗಿದ್ದೇವೆ. ಇದಕ್ಕಾಗಿ ಹತ್ತು ಹಲವು ಯೋಜನೆಗಳನ್ನು  ಹಮ್ಮಿಕೊಳ್ಳಲಾಗುತ್ತಿದೆ. ಆರು ವರ್ಷಗಳಿಂದ ನಿವೇಶನಗಳನ್ನು ಹಂಚಿಲ್ಲ.ವರ್ಷದ ಕೊನೆಯ ವೇಳೆಗೆ 5 ಸಾವಿರ ನಿವೇಶನಗಳನ್ನು ಹಂಚಲಾಗುವುದು. ಕೆ.ಆರ್.ಆಸ್ಪತ್ರೆಯ ಜಯದೇವ ಹೃದ್ರೋಗ ಘಟಕದಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ನಡೆಯುತ್ತಿಲ್ಲ.

ಇದಕ್ಕಾಗಿ ಬೇಕಾಗಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ನಾಲ್ಕು ತಿಂಗಳ ಒಳಗೆ ಚಿಕಿತ್ಸೆ ನೀಡಲಾಗುವುದು. ಕೆಆರ್‌ಎಸ್ ರಸ್ತೆಯಲ್ಲಿರುವ ಸ್ಯಾನಿಟೋರಿಯಂ ಆಸ್ಪತ್ರೆಯ ಒಂದು ಭಾಗದಲ್ಲಿ ಕಿದ್ವಾಯಿ ಘಟಕವನ್ನು ಆರಂಭಿಸಲಾಗುವುದು~ ಎಂದು ತಿಳಿಸಿದರು.

ಲಂಚ ಪಡೆದಿದ್ದರೆ ರಾಜಕೀಯ ನಿವೃತ್ತಿ
`ನಾನು ಯಾವುದೇ ದಂಧೆಯಲ್ಲಿ ತೊಡಗಿಲ್ಲ. ಒಂದು ರೂಪಾಯಿ ಲಂಚ ಪಡೆದಿದ್ದರೂ ಅದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಹೊಂದಿ ಮಕ್ಕಳ  ಸೇವೆ ಮಾಡಿಕೊಂಡು ಇರುತ್ತೇನೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಪ್ರತಿ ಸವಾಲು ಹಾಕಿದರು.

ಸಂಸದ ಎ.ಎಚ್.ವಿಶ್ವನಾಥ್ ಅವರು ರಾಮದಾಸ್ ವಿರುದ್ಧ ಈಚೆಗೆ ಟೀಕೆ ಮಾಡಿದ್ದರ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು `ವಿಶ್ವನಾಥ್ ಅವರು ಹಿರಿಯರು. ಅವರ ಬಗ್ಗೆ ನನಗೆ ಗೌರವ ಇದೆ. ಅವರ ಆರೋಪದಂತೆ ನಾನು ಯಾವುದೇ ಹಣ ಮಾಡುವ ದಂಧೆಯಲ್ಲಿ ತೊಡಗಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.