ADVERTISEMENT

ಟಿಟಿಎಲ್ ವಿದ್ಯಾರ್ಥಿಗಳ ಧರಣಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 6:10 IST
Last Updated 20 ಜುಲೈ 2012, 6:10 IST

ಮೈಸೂರು: ಬೇರೆ ಕಾಲೇಜಿಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಟಿಟಿಎಲ್ ಕಾಲೇಜಿನ ಎಂಬಿಎ ದ್ವಿತೀಯ ವರ್ಷದ ವಿದ್ಯಾರ್ಥಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

ಟಿಟಿಎಲ್ ಕಾಲೇಜಿನಲ್ಲಿ 52 ವಿದ್ಯಾರ್ಥಿಗಳು ಎಂಬಿಎ ವ್ಯಾಸಂಗ ಮಾಡುತ್ತಿದ್ದೇವೆ. ಈಗಾಗಲೇ ಪ್ರಥಮ ವರ್ಷದ ಎಂಬಿಎ ತರಗತಿಯ 2ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಬರೆದಿದ್ದೇವೆ. ಆದರೆ ಇಲ್ಲಿವರೆಗೆ ವಿಶ್ವವಿದ್ಯಾನಿಲಯವು ಪರೀಕ್ಷೆ ಫಲಿತಾಂಶ ಪ್ರಕಟಿಸಿಲ್ಲ. ಕಾಲೇಜಿನ ಆಡಳಿತ ಮಂಡಳಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ತುಟಿ ಎರಡು ಮಾಡುತ್ತಿಲ್ಲ. ಪ್ರವೇಶ ಪತ್ರ ನೀಡುವುದಾಗಿ ತಿಳಿಸಿ 52 ವಿದ್ಯಾರ್ಥಿಗಳಿಂದ ಅರ್ಜಿಗೆ ಸಹಿ ಹಾಕಿಸಿಕೊಂಡು ಅದನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ಆದರೆ ಹೈಕೋರ್ಟ್ ಪರೀಕ್ಷೆ ಬರೆಯಲು ಮಾತ್ರ ಅವಕಾಶ ನೀಡಿ ಫಲಿತಾಂಶ ಪ್ರಕಟಿಸಬಾರದೆಂದು ಆದೇಶ ಹೊರಡಿಸಿದೆ.

ಇದರಿಂದ ವಿದ್ಯಾರ್ಥಿಗಳು ಭವಿಷ್ಯ ಡೋಲಾಯಮಾನ ವಾಗಿದೆ. ಅಲ್ಲದೆ 2011-12 ನೇ ಸಾಲಿನಿಂದ ಕಾಲೇಜಿನ ಎಂಬಿಎ ಪದವಿಗೆ ಮಾನ್ಯತೆ ರದ್ದು ಮಾಡಲಾಗಿದೆ. ಅಲ್ಲದೆ ಮೈಸೂರು ವಿಶ್ವವಿದ್ಯಾನಿಲಯ ಸಹ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ವ್ಯಾಸಂಗ ಮುಗಿಸಿ ಬದುಕನ್ನು ಕಟ್ಟಿಕೊಳ್ಳಬೇಕಾದ ವಿದ್ಯಾರ್ಥಿಗಳ ಸ್ಥಿತಿ ತ್ರಿಶಂಕುವಾಗಿದೆ. ಹಾಗಾಗಿ ದ್ವಿತೀಯ ವರ್ಷದ ಎಂಬಿಎ ವ್ಯಾಸಂಗ ಮುಂದುವರೆಸಲು ಕುಲಪತಿ ವಿದ್ಯಾರ್ಥಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿ ಅನುಕೂಲ ಮಾಡಿಕೊಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.