ADVERTISEMENT

ಟ್ರೆಜರ್ ಹಂಟ್, ರಿವರ್ ಕ್ರಾಸಿಂಗ್ ಕೌತುಕ!

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 10:40 IST
Last Updated 11 ಅಕ್ಟೋಬರ್ 2012, 10:40 IST

ಮೈಸೂರು: ದಸರಾ ಮಹೋತ್ಸವದ ಸಾಹಸ ಕ್ರೀಡೆಗಳಲ್ಲಿ ಈ ಬಾರಿ ಟ್ರೆಜರ್ ಹಂಟ್ (ನಿಧಿ ಶೋಧ) ಮತ್ತು ರಿವರ್ ಕ್ರಾಸಿಂಗ್ ಪ್ರಮುಖ ಆಕರ್ಷಣೆಯಾಗಲಿದ್ದು, ಹಾಟ್ ಏರ್ ಬಲೂನ್ ಪ್ರಯಾಣ ಸಿಗುವುದಿಲ್ಲ!
ಅಕ್ಟೋಬರ್ 17ರಿಂದ ಆರಂಭವಾಗಲಿರುವ ಸಾಹಸ ಕ್ರೀಡೆಗಳಲ್ಲಿ ಜಲ, ವಾಯು ಮತ್ತು ಭೂ ಸಾಹಸ ಕ್ರೀಡೆಗಳು ನಡೆಯಲಿವೆ.

ಈ ಕುರಿತು ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಾಹಸ ಕ್ರೀಡಾ ಉಪಸಮಿತಿ ಅಧ್ಯಕ್ಷ ಮಹದೇವ ನಂದೀಶ್, `ಈ ಬಾರಿ ಹೊಸದಾಗಿ ಟ್ರೆಜರ್ ಹಂಟ್ ಆಯೋಜಿಸಲಾಗುತ್ತಿದೆ. ಇದು ರೋಚಕ ಕ್ರೀಡೆಯಾಗಿದ್ದು, ನಕ್ಷೆ ಮಾದರಿಯಲ್ಲಿ ನಿರ್ದಿಷ್ಟ ಸ್ಥಳವನ್ನು ಗುರುತಿಸುವಂತೆ ಮಾರ್ಗ ರೂಪಿಸಲಾಗುತ್ತದೆ. ಯಾರು ಮೊದಲು ಸ್ಥಳಕ್ಕೆ ಆಗಮಿಸುತ್ತಾರೋ ಅವರನ್ನು ವಿಜೇತರೆಂದು ಘೋಷಿಸಲಾಗುತ್ತದೆ~ ಎಂದು ಹೇಳಿದರು.

`ರಿವರ್ ಕ್ರಾಸಿಂಗ್ ನದಿಯ ಮೇಲೆ ಹಗ್ಗ ಕಟ್ಟಿ ದಾಟುವ ಮಾದರಿಯಲ್ಲಿರುತ್ತದೆ. ಮೈಸೂರಿನಲ್ಲಿ ನದಿ ಇಲ್ಲದಿರುವುದರಿಂದ ಅದರ ಮಾದರಿಯನ್ನು ರಾಜಕುಮಾರ್ ಉದ್ಯಾನದಲ್ಲಿ ಮಾಡಲಾ ಗುತ್ತಿದೆ. ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತುವ ಸ್ಪರ್ಧೆ ಆಯೋಜಿಸಲಾಗಿದೆ~ ಎಂದು ತಿಳಿಸಿದರು.

ಕೋತಿರಾಮನಿಗೆ ಹಗ್ಗ ಕಡ್ಡಾಯ
ಈ ಸಂದರ್ಭದಲ್ಲಿ ಹಾಜರಿದ್ದ ಕಾರ್ಯಾಧ್ಯಕ್ಷ, ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್, `ಚಿತ್ರದುರ್ಗದ ಕಲ್ಲಿನಕೋಟೆಯನ್ನು ಹತ್ತಿ ಈಗಾಗಲೇ ಗಮನ ಸೆಳೆದಿರುವ ಜ್ಯೋತಿ ರಾಮ್ ಅಲಿಯಾಸ್ ಕೋತಿರಾಮ್ ಕಟ್ಟಡವನ್ನು ಹತ್ತುವ ಸಾಹಸ ಪ್ರದರ್ಶನವನ್ನು ನೀಡಲಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಹಗ್ಗ ಕಟ್ಟಿಕೊಂಡು ಹತ್ತುವಂತೆ ಮನವಿ ಮಾಡಿದ್ದೇವೆ. ಏಕೆಂದರೆ ಈಗಾಗಲೇ ಅವರು ಒಂದು ಸಾರಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಆದ್ದರಿಂದ ದಸರೆಯ ಸಂಭ್ರಮದಲ್ಲಿ ಯಾವುದೇ ಅಪಾಯಕ್ಕೆ ಅವಕಾಶ ಕೊಡಲು ನಾವು ಸಿದ್ಧರಿಲ್ಲ. ಆದ್ದರಿಂದ ಹಗ್ಗದ ಸಹಾಯದಿಂದಲೇ ಅವರು ಪ್ರದರ್ಶನ ನೀಡಬೇಕು~ ಎಂದು ಹೇಳಿದರು.

`ಕಳೆದ ಬಾರಿ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪ್ಯಾರಾ ಸೇಲಿಂಗ್ ಮಾಡಲು ಅನುಮತಿ ಕೊಟ್ಟಿರಲಿಲ್ಲ. ಈ ಬಾರಿ ವಿಮಾನಗಳ ಹಾರಾಟ ಇಲ್ಲ. ಆದ್ದರಿಂದ ಈ ಬಾರಿಯಾದರೂ ಅವಕಾಶ ನೀಡುವಂತೆ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದ್ದೇವೆ. ಇಲ್ಲಿ ಅವಕಾಶ ಸಿಕ್ಕರೆ ದೊಡ್ಡವರೂ ಭಾಗವಹಿಸ ಬಹುದು. ಲಲಿತ್‌ಮಹಲ್‌ನಲ್ಲಿ ಮಾಡಿದರೆ ಮಕ್ಕಳಿಗೆ ಮಾತ್ರ ಅವಕಾಶ ಸಿಗುತ್ತದೆ~ ಎಂದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.