ADVERTISEMENT

ತಂಬಾಕು ಬೆಳೆಗಾರರ ಸಾಲ ತೀರಿಸುವವರು ಯಾರು?

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 9:20 IST
Last Updated 18 ಅಕ್ಟೋಬರ್ 2011, 9:20 IST

ಮೈಸೂರು: ತಂಬಾಕಿಗೆ ಪರ್ಯಾಯ ಬೆಳೆ ಬೆಳೆಯೋ ರೈತನ ಬಾಕಿ ಸಾಲ ತೀರಿಸುವವರು ಯಾರು? ವಾಣಿಜ್ಯ ಬೆಳೆ ನಂಬಿ ಲಕ್ಷಾಂತರ ರೂಪಾಯಿ ಸಾಲ ಮಾಡಿರುವ ರೈತರ ಗತಿ ಏನು? ರೈತರ ಆರ್ಥಿಕ ನಷ್ಟಕ್ಕೆ ಯಾರು ಹೊಣೆ?

ಹೀಗೆ ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ.ಶಿವಣ್ಣ ಪ್ರಶ್ನೆ ಗಳನ್ನು ಕೇಳುತ್ತಿದ್ದರೆ ಅಧಿಕಾರಿಗಳು, ವಿಜ್ಞಾನಿಗಳು ಅಕ್ಷರಶಃ ಸುಸ್ತಾಗಿ ಹೋದರು.

ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ತಂಬಾಕು ಮಂಡಳಿ ಸೋಮವಾರ ಏರ್ಪಡಿಸಿದ್ದ ತಂಬಾಕಿಗೆ ಪರ್ಯಾಯ ಬೆಳೆಗಳ ಕುರಿತ ವಿಚಾರ ಸಂಕಿರಣದಲ್ಲಿ ಹಲವಾರು ಪ್ರಶ್ನೆಗಳು ಉದ್ಭವವಾದವು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಣ್ಣ, `2020ರಲ್ಲಿ ತಂಬಾಕು ಬೆಳೆ ಯನ್ನು ನಿಷೇಧಿಸಿರುವುದು ಸರಿ. ಆದರೆ, ವಾಣಿಜ್ಯ ಬೆಳೆಯಾದ ತಂಬಾಕನ್ನು ನಂಬಿ ಬದುಕು ಸಾಗಿಸುತ್ತಿರುವ, ಲಕ್ಷಾಂತರ ರೂಪಾಯಿ ಸಾಲ ಮಾಡಿರುವ ರೈತರ ಗತಿ ಏನು? ರೈತರ ಆರ್ಥಿಕ ನಷ್ಟ ಹಾಗೂ ಬದುಕಿನ ಏರುಪೇರಿಗೆ ಉತ್ತರಿಸುವವರು ಯಾರು? ಇಷ್ಟಕ್ಕೂ ತಂಬಾಕು ಬೆಳೆಯ ತುರ್ತು ನಿಯಂತ್ರಣ ಅಗತ್ಯವಿದೆಯೇ? ಎನ್ನುವ ಕುರಿತು ಕೇಂದ್ರ ಸರ್ಕಾರ ಹಾಗೂ ತಂಬಾಕು ಮಂಡಳಿ ಸಮರ್ಪಕ ಉತ್ತರ ನೀಡಬೇಕು~ ಎಂದು ಒತ್ತಾಯಿಸಿದರು.

`ಪರ್ಯಾಯ ಬೆಳೆ ಬೆಳೆಯಿರಿ ಎಂದು ಹೇಳುವ ಮಂಡಳಿ ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡಬೇಕು. ಪರ್ಯಾಯ ಬೆಳೆಗಳಾದ ರೇಷ್ಮೆ, ಬಾಳೆ, ಅರಿಶಿಣ, ತರಕಾರಿ, ಹತ್ತಿ ಬೆಳೆಯಲು ನೀರಾವರಿ ಸೌಕರ್ಯ ಒದಗಿಸಬೇಕು. ಮಳೆ ಆಶ್ರಯದಲ್ಲಿ ಕಡಿಮೆ ಇಳುವರಿ ಬರುವ ಕಾರಣ, ರೈತರಿಗೆ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಬೇಕು.

ಪರ್ಯಾಯ ಬೆಳೆಗೆ ಮೊದಲು ರೈತರ ಬದುಕನ್ನು ಹಸನಾಗಿಸಲು ಸರ್ಕಾರ ಹಾಗೂ ಮಂಡಳಿ ಪರ್ಯಾಯ ಕ್ರಮ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು.

`ತಂಬಾಕು ಬೆಳೆ ದೇಶ ಹಾಗೂ ಆರೋಗ್ಯಕ್ಕೆ ಹಾನಿಕರ ಎಂಬುದು ಒಪ್ಪುವ ಮಾತು. ಆದರೆ, ತಂಬಾಕನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಸೇರಿದಂತೆ ಹಲವಾರು ಜಿಲ್ಲೆಗಳ ರೈತರ ಸಂಕಷ್ಟವನ್ನು ಪರಿಹರಿಸುವವರು ಯಾರು? ಪರ್ಯಾಯ ಬೆಳೆ ಬೆಳೆಯಲು ಸೂಚಿಸಿರುವುದು ಸ್ವಾಗತಾರ್ಹ. ಆದರೆ, ಆರ್ಥಿಕ ನಷ್ಟ ಭರಿಸಲು ಸರ್ಕಾರ ಹಾಗೂ ತಂಬಾಕು ಮಂಡಳಿ ಕೈಗೊಂಡಿರುವ ಕ್ರಮಗಳು ಏನು ಎಂಬುದನ್ನು ಬಹಿರಂಗ ಪಡಿಸಬೇಕು~ ಎಂದು ಒತ್ತಾಯಿಸಿದರು.

ತಂಬಾಕು ಮಂಡಳಿ ಸದಸ್ಯ ಡಿ.ಎಂ.ಅಬುಮಹಮ್ಮದ್ ಮಾತನಾಡಿದರು. ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್, ಮಂಡಳಿಯ ಸದಸ್ಯರಾದ ಬಿ.ಎಂ.ಮಹದೇವ, ವಿ.ಪಾಪಣ್ಣ, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸಿ.ವಿ.ಸುಬ್ಬರಾವ್, ನಿರ್ದೇಶಕಿ ಮಂಜು.ಪಿ.ಪಿಳ್ಳೈ, ಸಿಟಿಆರ್‌ಐ ನಿರ್ದೇಶಕ ಡಾ.ವಿ.ಕೃಷ್ಣಮೂರ್ತಿ, ಭಾರತೀಯ ತಂಬಾಕು ಮಂಡಳಿಯ ಗುಂಟೂರು ಪ್ರತಿನಿಧಿ ವೈ.ಎ.ಚೌಧರಿ ಭಾಗವಹಿಸಿದ್ದರು.

ಔಷಧೀಯ ಉತ್ಪನ್ನಗಳ ಉತ್ಪಾದನೆ ಅಗತ್ಯ
ತಂಬಾಕು ಎಲೆಯಿಂದ ಹಾನಿ ಉಂಟಾಗುವುದಿಲ್ಲ. ಆದರೆ, ಉಪ ಉತ್ಪನ್ನಗಳಾದ ಬೀಡಿ, ಸಿಗರೇಟ್, ಗುಟಖಾ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಅಮೆರಿಕದಲ್ಲಿ ತಂಬಾಕನ್ನು ಬಳಸಿಕೊಂಡು ಜೈವಿಕ ತಂತ್ರಜ್ಞಾನದ ಮೂಲಕ ಔಷಧೀಯ ಉತ್ಪನ್ನಗಳನ್ನು ತಯಾರಿಸ ಲಾಗುತ್ತಿದೆ. ಅದೇ ಮಾದರಿಯನ್ನು ಭಾರತದಲ್ಲೂ ಅನುಸರಿಸಬೇಕು. ದೇಶದಲ್ಲಿ 46 ದಶಲಕ್ಷ ರೈತರು ತಂಬಾಕು ಬೆಳೆಯನ್ನು ಆಶ್ರಯಿಸಿದ್ದಾರೆ. ಆದ್ದರಿಂದ ಪರ್ಯಾಯ ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡಬೇಕು. ಆರೋಗ್ಯಕ್ಕೆ ಪೂರಕವಾಗಿ ತಂಬಾಕನ್ನು ಔಷಧಗಳ ತಯಾರಿಕೆಯಲ್ಲಿ ಬಳಸುವಂತಾಗಬೇಕು.
-ಪ್ರೊ. ಸ್ವಪನ್‌ಕುಮಾರ್ ದತ್ತ, ಉಪ ಪ್ರಧಾನ ವ್ಯವಸ್ಥಾಪಕ, ಐಸಿಎಆರ್ ನವದೆಹಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT