ADVERTISEMENT

ತಮಿಳುನಾಡಿಗೆ ಕಾವೇರಿ ನೀರು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 6:54 IST
Last Updated 7 ಡಿಸೆಂಬರ್ 2012, 6:54 IST

ಮೈಸೂರು: ತಮಿಳುನಾಡಿಗೆ ಕೆ.ಆರ್.ಸಾಗರ ಜಲಾಶಯದಿಂದ ಐದು ದಿನಗಳ ಕಾಲ 10 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ತೀರ್ಪು ನೀಡಿರುವುದನ್ನು ಖಂಡಿಸಿ ನಗರದ ಕಾಡಾ ಕಚೇರಿ ಎದುರು ಕಬಿನಿ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ಮಾಡಿದರು.

ಈಗಾಗಲೇ ತಮಿಳುನಾಡಿಗೆ ಸಾಕಷ್ಟು ಬಾರಿ ನೀರು ಬಿಡಲಾಗಿದೆ. ಆದರೂ ತಮಿಳುನಾಡು ಸರ್ಕಾರ ಮತ್ತೆ ನೀರು ಬಿಡುವಂತೆ ಒತ್ತಾಯ ಮಾಡುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಬರ ಕಾಣಿಸಿಕೊಂಡ ನಂತರ ಪರಿಸ್ಥಿತಿ ಹದಗೆಟ್ಟಿದೆ. ಸರಿಯಾಗಿ ಮಳೆಯಾಗದ ಕಾರಣ ಯಾವ ಜಲಾಶಯಗಳು ಭರ್ತಿಯಾಗಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಕೆಆರ್‌ಎಸ್ ಮತ್ತು ಕಬಿನಿ ಕೊಳ್ಳದ ರೈತರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಬೇಸಿಗೆ ಬರುವುದರಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ತಮಿಳುನಾಡಿನ ಒತ್ತಾಯಕ್ಕೆ ಮಣಿದು ನೀರು ಬಿಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸರ್ಕಾರ ತನ್ನ ನಿಲುವನ್ನು ತಮಿಳುನಾಡು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕು. ಒಂದು ವೇಳೆ ನೀರು ಹರಿಸಿದ್ದೇ ಆದಲ್ಲಿ ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ರೈತರ ಹಿತ ಕಾಯಬೇಕಾದರೆ ಸರ್ಕಾರ ತಮಿಳುನಾಡಿಗೆ ನೀರನ್ನು ಬಿಡಬಾರದು ಎಂದು ಆಗ್ರಹಿಸಿ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಮಿತಿ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ: ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಕುಮಾರ್‌ಶೆಟ್ಟಿ ಬಣ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ಮಾಡಿದರು.

ಕರ್ನಾಟಕದ ಜಲಾಶಯಗಳಲ್ಲಿ ನೀರಿಲ್ಲ. ಜಲಾಶಯಗಳು ಬತ್ತುವ ಹಂತಕ್ಕೆ ಬಂದಿವೆ. ಬೆಳೆಗಳಿಗೆ ನೀರಿಲ್ಲದೆ ರೈತರು ಪರಿತಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿನ ಒತ್ತಾಯಕ್ಕೆ ಮಣಿದು ಸರ್ಕಾರ ನೀರನ್ನು ಬಿಡಬಾರದು. ತಮಿಳುನಾಡು ಸರ್ಕಾರವನ್ನು ಓಲೈಸಲು ಕೇಂದ್ರ ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕ ಅಧ್ಯಕ್ಷ ಕೆ.ಮಾದೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

`ನೀರು ಬಿಡದಿರಲು ಒತ್ತಾಯ'
ಮೈಸೂರು: `ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡಬಾರದು' ಎಂದು ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಒತ್ತಾಯಿಸಿದ್ದಾರೆ.

`ತಮಿಳುನಾಡಿಗೆ ತಕ್ಷಣವೇ 10 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ತೀರ್ಪು ನೀಡಲಾಗಿದೆ. ಇದು ರಾಜ್ಯಕ್ಕೆ ಮರಣಶಾಸನವಾಗಿದೆ. ಇದರಿಂದ ರೈತಾಪಿ ವರ್ಗ ಕಂಗಾಲಾಗಿದೆ. ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಗಳು ಒಣಗುತ್ತಿರುವಂತೆಯೇ ಕೆಆರ್‌ಎಸ್ ಜಲಾಶಯದಲ್ಲಿ ನೀರು ಬತ್ತುತ್ತಿದೆ. ತಮಿಳುನಾಡಿಗೆ ಒಂದು ಹನಿ ನೀರು ಬಿಡದಂತೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸುಗ್ರಿವಾಜ್ಞೆ ಹೊರಡಿಸಬೇಕು' ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.