ಹುಣಸೂರು: ಪುರಸಭೆ ಅಧ್ಯಕ್ಷೆ ಮಂಜುಳ ಚೆನ್ನಬಸಪ್ಪ ಅವರ ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಕೆ ಪ್ರಕರಣದ ವಿಚಾರಣೆ ಕುರಿತು ತಹಶೀಲ್ದಾರ್ ಆಸಕ್ತಿ ತೋರಿಸುತ್ತಿಲ್ಲ ಎಂದು ಆರೋಪಿಸಿ ಜೆಡಿಎಸ್‌ನ ಸದಸ್ಯರು ತಹಶೀಲ್ದಾರ್ ಕಚೇರಿ ಎದುರು ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಮಂಜುಳ ಚೆನ್ನಬಸಪ್ಪ 30- 09-2007 ರಲ್ಲಿ ಸುಳ್ಳು ದಾಖಲೆಗಳನ್ನು ತಹಶೀ ಲ್ದಾರ್ ಕಚೇರಿಗೆ ಸಲ್ಲಿಸಿ ಎಸ್.ಟಿ. ಜಾತಿ ಪ್ರಮಾಣ ಪತ್ರ ಪಡೆದು ಮೀಸಲು ಕ್ಷೇತ್ರದಿಂದ ಆಯ್ಕೆಗೊಂಡು ಪುರಸಭೆ ಅಧ್ಯಕ್ಷೆ ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಂಜುಳ ಚೆನ್ನಬಸಪ್ಪ ಅವರ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪ್ರಶ್ನಿಸಿ ತಹಶೀಲ್ದಾರ್ ಅವರಿಗೆ ಕ್ರಮ ತೆಗೆದುಕೊಳ್ಳಲು ಆಗಸ್ಟ್ 2010 ರಲ್ಲಿ ಮನವಿ ಮಾಡಿದ್ದರೂ, ಈವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಧರಣಿನಿರತರು ಆರೋಪಿಸಿದರು. ಧರಣಿಯಲ್ಲಿ ಸದಸ್ಯರಾದಚಂದ್ರನಾಯಕ, ಧರ್ಮರಾಜ್, ಸತೀಶ್‌ಕು ಮಾರ್, ರಿಜ್ವಾನ್‌ಕೌಸರ್, ರಿಜ್ವಾನ್, ತಾಹೇರಾ ಮತ್ತು ಜೆ.ಡಿ.ಎಸ್.ನ ಖಜಾಂಚಿ ಸರ್ವಣ ಇದ್ದರು.
ಧರಣಿ ಸ್ಥಳದಲ್ಲಿ ಸದಸ್ಯ ಚಂದ್ರಶೇಖರ್ ಪತ್ರಕರ್ತರೊಂದಿಗೆ ಮಾತನಾಡಿ ಪುರಸಭೆ ಅಧ್ಯಕ್ಷೆ ಮಂಜುಳ ಚೆನ್ನ ಬಸಪ್ಪ ಸುಳ್ಳುಜಾತಿ ಪ್ರಮಾಣ ಪತ್ರ ಸಲ್ಲಿಸಿ ಮೀಸಲು ಕ್ಷೇತ್ರದಿಂದ ಪುರಸಭೆಗೆ ಆಯ್ಕೆಗೊಂಡಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಾತಿ ಪ್ರಮಾಣಪತ್ರ ವಿಚಾರವಾಗಿ ದೂರು ಸಲ್ಲಿಸಿ ಈ ಸಂಬಂಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆದು ಸುಳ್ಳು ಜಾತಿ ಪತ್ರ ನೀಡಿ ಆಯ್ಕೆಗೊಂಡಿರುವ ಬಗ್ಗೆ ವರದಿ ಸಲ್ಲಿಸಲಾಗಿದೆ ಎಂದರು.
ಹುಣಸೂರು ತಹಶೀಲ್ದಾರ್ ಕಚೇರಿಯಲ್ಲಿ ಇಲ್ಲ ಸಲ್ಲದ ನೆಪವೊಡ್ಡಿ ಪ್ರಕರಣ ತನಿಖೆ ಅಥವಾ ವಿಚಾರಣೆ ನಡೆಸದೆ ಮುಂದೂಡುತ್ತಿದ್ದ ಕಾರಣ, ಪುರಸಭಾ ಸದಸ್ಯ ಸತೀಶ್‌ಕುಮಾರ್ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆಯೋಗವು ನಡೆಸಿದ ವಿಚಾರಣೆ ಸಮಯದಲ್ಲಿ ತಹಶೀಲ್ದಾರ್ ಸಂಪೂರ್ಣ ತಪ್ಪು ಮಾಹಿತಿ ನೀಡಿ ಈ ಪ್ರಕರಣ ಉಪವಿಭಾಗಾಧಿಕಾರಿಗಳ ವ್ಯಾಪ್ತಿಗೆ ಬರುತ್ತದೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ವಿಚಾರದಲ್ಲಿ ಈಗಾಗಲೇ ಎಚ್.ಡಿ.ಕೋಟೆ, ಕೆ.ಆರ್.ನಗರ ಮತ್ತು ಹಾವೇರಿ ತಹಶೀಲ್ದಾರ್ ತಮ್ಮ ವ್ಯಾಪ್ತಿಯಲ್ಲೇ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಹುಣಸೂರು ತಹಶೀಲ್ದಾರ್ ಏಕೆ ಮಂಜುಳ ಚೆನ್ನಬಸಪ್ಪ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ? ಈ ವರ್ತನೆಯಿಂದ ನಿಜವಾದ ಎಸ್.ಟಿ ಜನಾಂಗದವರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ಎಸ್.ಟಿ. ಜನಾಂಗದವರಿಗೆ ಅನ್ಯಾಯವಾಗುತ್ತಿದ್ದರೂ ತಹ ಶೀಲ್ದಾರ್ ಮೌನವಹಿಸಿರುವುದು, ಇತರರು ಎಸ್.ಟಿ. ಜನಾಂಗದ ಸವಲತ್ತು ಕಸಿದುಕೊಳ್ಳಲು ಪ್ರೇರಣೆ ನೀಡಿದಂತಾಗುತ್ತದೆ. ಈ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಂಡು ನಿಜವಾದ ಎಸ್.ಟಿ. ಜನಾಂಗದ ಪುರಸಭಾ ಸದಸ್ಯನಿಗೆ ಅಧಿಕಾರ ನೀಡಲು ಸಹಕರಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.