ADVERTISEMENT

ದಸರಾ ಕುಸ್ತಿ ಪೈಪೋಟಿ ಅ.16ರಿಂದ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಅಕ್ಟೋಬರ್ 16 ರಿಂದ 21ರವರೆಗೆ 31ನೇ ರಾಜ್ಯಮಟ್ಟದ ಕುಸ್ತಿ ಮತ್ತು 7ನೇ ಅಖಿಲ ಭಾರತ ಆಹ್ವಾನಿತ ಪುರುಷ ಮತ್ತು ಮಹಿಳಾ ಕುಸ್ತಿ ಆಯೋಜಿಸಲಾಗಿದೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಸ್ತಿ ಉಪಸಮಿತಿ ಅಧ್ಯಕ್ಷ ಪೈಲ್ವಾನ್ ವಿ. ಗಿರಿಧರ್, `ದೊಡ್ಡಕೆರೆ ಮೈದಾನದಲ್ಲಿರುವ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ.  ನಾಡಕುಸ್ತಿಗೆ 300 ಹಾಗೂ ರಾಷ್ಟ್ರಮಟ್ಟದ ಕುಸ್ತಿಯಲ್ಲಿ 150 ಕುಸ್ತಿಪಟುಗಳು ಭಾಗವಹಿಸುವ ನಿರೀಕ್ಷೆಯಿದೆ~ ಎಂದು ಹೇಳಿದರು.

`ವಿಶ್ವ ಕುಸ್ತಿ ಫೆಡರೇಷನ್ ನಿಯಮಾವಳಿ ಪ್ರಕಾರವೇ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ರಾಷ್ಟ್ರಮಟ್ಟದ ಕುಸ್ತಿಯನ್ನು ಮ್ಯಾಟ್ ಮೇಲೆ ಮತ್ತು ರಾಜ್ಯಮಟ್ಟದ ನಾಡಕುಸ್ತಿಯನ್ನು ಮಣ್ಣಿನಂಕಣದ ಮೇಲೆ ನಡೆಸಲಾಗುತ್ತದೆ.

ರಾಜ್ಯಮಟ್ಟದ ಸೀನಿಯರ್ ವಿಭಾಗದಲ್ಲಿ 50ರಿಂದ 55ಕೆಜಿ, 60ಕೆಜಿಯವರೆ (ದಸರಾ ಕುಮಾರ್), 66ಕೆಜಿವರೆಗೆ, 74 ಕೆಜಿವರೆಗೆ (ದಸರಾ ಕೇಸರಿ ಪ್ರಶಸ್ತಿ), 74 ಕೆಜಿ ಮೇಲ್ಪಟ್ಟು, 120 ಕೆಜಿ ಮೇಲ್ಪಟ್ಟು (ದಸರಾ ಕಂಠೀರವ ಪ್ರಶಸ್ತಿ) ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಜೂನಿಯರ್ ವಿಭಾಗದಲ್ಲಿ 39ರಿಂದ 42 ಕೆಜಿ, 46ಕೆಜಿ, 54ಕೆಜಿ ಮತ್ತು 58 ಕೆಜಿಯವರೆಗೆ (ದಸರಾ ಕಿಶೋರ) ಸ್ಪರ್ಧೆಗಳು ನಡೆಯಲಿವೆ~ ಎಂದು ತಿಳಿಸಿದರು.

`ಕರ್ನಾಟಕದಲ್ಲಿ ಕನಿಷ್ಠ 5 ವರ್ಷಗಳಿಂದ ವಾಸವಾಗಿರುವ ಕುಸ್ತಿಪಟುಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಸರ್ಕಾರಿ ಕೆಲಸದಲ್ಲಿ ಇರುವವರು ತಮ್ಮ ಮೇಲಧಿಕಾರಿಗಳಿಂದ ಮತ್ತು ವಿದ್ಯಾರ್ಥಿಗಳು ಹಾಗೂ ಕ್ರೀಡಾ ವಸತಿ ನಿಲಯಗಳಲ್ಲಿರುವವರು ತಮ್ಮ ಸಂಸ್ಥೆಗಳ ಮುಖ್ಯಸ್ಥರಿಂದ ಅನುಮತಿ ಪತ್ರ ತರಬೇಕು~ ಎಂದರು.

`ಐದನೇ ಮಹಿಳಾ ಕುಸ್ತಿ ಸ್ಪರ್ಧೆಗಳೂ ನಡೆಯಲಿವೆ. ರಾಷ್ಟ್ರಮಟ್ಟದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಪ್ರಶಸ್ತಿ ಮತ್ತು ರಾಜ್ಯಮಟ್ಟದಲ್ಲಿ  ಶ್ರೀ ಚಾಮುಂಡೇಶ್ವರಿ ಪ್ರಶಸ್ತಿ ನೀಡಲಾಗುವುದು. ಪ್ರವೇಶ ಪತ್ರ ಕಳುಹಿಸಲು ಅಕ್ಟೋಬರ್ 15 ಕೊನೆಯ ದಿನವಾಗಿದೆ. ಸದಸ್ಯ ಕಾರ್ಯದರ್ಶಿ, ಕುಸ್ತಿ ಉಪಸಮಿತಿ-2012, ಸಾರ್ವಜನಿಕ ಸಂಪರ್ಕಾಧಿಕಾರಿ, ಕಾವೇರಿ ನೀರಾವರಿ ನಿಗಮ ನಿಯಮಿತ, ಕಾವೇರಿ ಭವನ ಸಂಕೀರ್ಣ, ಗೋಕುಲಂ, 4ನೇ ಹಂತ, ಯಾದವಗಿರಿ, ಮೈಸೂರು  (ದೂ: 0821-6554955 ಅಥವಾ ಇಮೇಲ್: wrestlingsubcommittee@gmail.com) ವಿಳಾಸಕ್ಕೆ ಕಳುಹಿಸಬೇಕು~ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.