ADVERTISEMENT

ದಾಖಲಾತಿ ಕಂಡು ದಂಗಾದ ಮಹೇಶ್‌

ಮಹಾರಾಜ ಪ್ರೌಢಶಾಲೆಗೆ ಶಿಕ್ಷಣ ಸಚಿವರ ದಿಢೀರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 8:22 IST
Last Updated 19 ಜೂನ್ 2018, 8:22 IST
ದಾಖಲಾತಿ ಕಂಡು ದಂಗಾದ ಮಹೇಶ್‌
ದಾಖಲಾತಿ ಕಂಡು ದಂಗಾದ ಮಹೇಶ್‌   

ಮೈಸೂರು: ಐನೂರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದ ಮಹಾರಾಜ ಪ್ರೌಢಶಾಲೆಯಲ್ಲಿ ಈಗ ಕೇವಲ 127 ಮಕ್ಕಳು ಇರುವುದನ್ನು ಕಂಡು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್‌.ಮಹೇಶ್‌ ದಂಗಾದರು.

ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಪ್ರೌಢಶಾಲೆಗೆ ಅಧಿಕಾರಿಗಳೊಂದಿಗೆ ಸಚಿವರು ಸೋಮವಾರ ದಿಢೀರ್‌ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

‘ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಿಸಿದ ಶಾಲೆಯಿದು. ಒಂದು ಸಮಯದಲ್ಲಿ 700-800ರಷ್ಟು ಮಕ್ಕಳಿದ್ದರು. ನನ್ನ ಮಗ ಕೂಡ ಇಲ್ಲಿಯೇ ಓದಿದ್ದಾನೆ. ಖಾಸಗಿ ಶಾಲೆಗಳಿಗಿಂತ ಹೆಚ್ಚು ಸೌಲಭ್ಯ ಇಲ್ಲಿದೆ. ಹೀಗಿದ್ದೂ ಮಕ್ಕಳ ಸಂಖ್ಯೆ ಕಡಿಮೆಯಾಗಲು ಶಿಕ್ಷಣ ಇಲಾಖೆಯಲ್ಲಿನ ದೌರ್ಬಲ್ಯವೇ ಕಾರಣ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಶಾಲೆಯ 8,9,10ನೇ ತರಗತಿಗಳಲ್ಲಿ ಕೇವಲ 127 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, 11ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಒಂಬತ್ತು ಕೊಠಡಿಗಳು ಖಾಲಿ ಇವೆ.

‘ಈ ಶಾಲೆಗೆ ಹೆಚ್ಚಿನ ಸಂಖ್ಯೆ ಯಲ್ಲಿ ಮಕ್ಕಳನ್ನು ಕರೆತರಲು ಅಧಿಕಾರಿ ಗಳೊಂದಿಗೆ ಚರ್ಚಿಸಿದ್ದೇನೆ. ನಗರದಲ್ಲಿ 22 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಸುಮಾರು 4 ಸಾವಿರ ಮಕ್ಕಳು ಈ ಶಾಲೆಗಳಿಂದ ಪ್ರೌಢಶಾಲಾ ಹಂತ ಪ್ರವೇಶಿಸುತ್ತಾರೆ. ಕನಿಷ್ಠ 500 ಮಕ್ಕಳನ್ನು ಮಹಾರಾಜ ಪ್ರೌಢಶಾಲೆಗೆ ಸೆಳೆಯಬಹುದು. ಆದರೀಗ ಅದು ಸಾಧ್ಯವಾಗುತ್ತಿಲ್ಲ. ಶೇ 60ರಷ್ಟು ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದಾರೆ’ ಎಂದರು.

‘ಮುಂದಿನ ದಿನಗಳಲ್ಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಖುದ್ದಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಸೆಳೆಯಬೇಕು. ವಿದ್ಯಾರ್ಥಿಗಳ ಪೋಷಕರ ಸಭೆ ನಡೆಸಬೇಕು. ವ್ಯಾನ್‌ ಸೌಲಭ್ಯ ಒದಗಿಸಬೇಕು. ಸರ್ವ ಶಿಕ್ಷಣ ಅಭಿಯಾನದಡಿ ಇದಕ್ಕೆ ಅವಕಾಶವಿದೆ. ಈ ಮೂಲಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಬಹುದು’ ಎಂದು ಸಲಹೆ ನೀಡಿದರು.

‘ಇಂಥ ಪರಿಸ್ಥಿತಿ ರಾಜ್ಯದ ಹಲವು ಶಾಲೆಗಳಲ್ಲಿ ಇದೆ. ಗುಣಮಟ್ಟದ ಶಿಕ್ಷಣ ಕೊರತೆ, ಇಂಗ್ಲಿಷ್‌ಗೆ ಆದ್ಯತೆ ನೀಡದಿರುವುದರಿಂದ ಸಹಜವಾಗಿಯೇ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿಲ್ಲ. ಶಾಲೆಗೆ ಉತ್ತಮ ಸೌಲಭ್ಯ ನೀಡಿ, ಇಂಗ್ಲಿಷ್‌ಗೆ ಆದ್ಯತೆ ನೀಡಬೇಕು. ಎಲ್‌ಕೆಜಿ, ಯುಕೆಜಿಗೆ ಅವಕಾಶ ನೀಡಿದರೆ ಖಂಡಿತ ದಾಖಲಾತಿ ಹೆಚ್ಚಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಈ ಪ್ರೌಢಶಾಲೆಗೆ ಹಾಸ್ಟೆಲ್‌ ಸೌಲಭ್ಯ ಒದಗಿಸುವ ಯೋಚನೆ ಇದೆ. ಈ ಸಂಬಂಧ ಸಮಾಜ ಕಲ್ಯಾಣ ಅಧಿಕಾರಿಗಳೊಂದಿಗೆ ಮಾತನಾಡು ತ್ತೇನೆ. ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ ಪ್ರಾರಂಭಿಸಲು ಚರ್ಚಿಸುತ್ತೇನೆ’ ಎಂದರು. ತರಗತಿಗಳಿಗೆ ತೆರಳಿ ಮಕ್ಕಳ ಜತೆ ಕುಶಲೋಪರಿ ನಡೆಸಿದರು.

ಡಿಡಿಪಿಐ ಮಮತಾ, ಕಾಲೇಜಿನ ಪ್ರಾಂಶುಪಾಲ ಟಿ.ಆರ್‌.ಸಿದ್ದರಾಜು, ಬಿಎಸ್‌ಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸೋಸಲೆ ಸಿದ್ದರಾಜು ಇದ್ದರು.

ಮಹಾರಾಜ ಪ್ರೌಢಶಾಲೆಗೆ ನಿತ್ಯ ಮಕ್ಕಳನ್ನು ಕರೆತರಲು ಖಾಸಗಿ ಶಾಲೆಗಳಂತೆ ವ್ಯಾನ್‌ ವ್ಯವಸ್ಥೆ ಮಾಡಬೇಕು. ಹಾಸ್ಟೆಲ್‌ ವ್ಯವಸ್ಥೆಗೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ
– ಎನ್‌.ಮಹೇಶ್‌‌, ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.