ADVERTISEMENT

ದುಃಸ್ಥಿತಿಯಲ್ಲಿ ಮುದ್ದುಬೀರನಹುಂಡಿ ಸರ್ಕಾರಿ ಶಾಲೆ

ಪ್ರಜಾವಾಣಿ ವಿಶೇಷ
Published 28 ಜೂನ್ 2011, 7:30 IST
Last Updated 28 ಜೂನ್ 2011, 7:30 IST
ದುಃಸ್ಥಿತಿಯಲ್ಲಿ ಮುದ್ದುಬೀರನಹುಂಡಿ ಸರ್ಕಾರಿ ಶಾಲೆ
ದುಃಸ್ಥಿತಿಯಲ್ಲಿ ಮುದ್ದುಬೀರನಹುಂಡಿ ಸರ್ಕಾರಿ ಶಾಲೆ   

ತಿ.ನರಸೀಪುರ: ಕಲಿಕೆಯಲ್ಲಿ ಉತ್ತಮ ಶಾಲೆ ಎಂಬ ಶಿಫಾರಸಿಗೆ ಒಳಗಾಗಿರುವ ತಾಲ್ಲೂಕಿನ ಮುದ್ದುಬೀರನಹುಂಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಮಾತ್ರ ದುಃಸ್ಥಿತಿಯಲ್ಲಿದೆ.
ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಈ ಶಾಲೆಯಲ್ಲಿ 1 ರಿಂದ 5 ನೇ ತರಗತಿಗಳು ನಡೆಯುತ್ತದೆ.

ಆದರೆ ಇರುವ ಮಕ್ಕಳ ಸಂಖ್ಯೆ ಮಾತ್ರ ಕಡಿಮೆ. ಕಾರಣ ಒಳ್ಳೆಯ ಕಟ್ಟಡವಿಲ್ಲ. ಸ್ವಚ್ಛ ಪರಿಸರವಿಲ್ಲ. ಇರುವ ಒಂದು ಕೊಠಡಿ ಯಲ್ಲಿ ಮೂರು ತರಗತಿಗಳು ನಡೆದರೆ ಉಳಿದ ಎರಡು ತರಗತಿಗಳು ವರಾಂಡದಲ್ಲಿ ನಡೆ ಯುತ್ತವೆ. ಇರುವುದು ಇಬ್ಬರು ಶಿಕ್ಷಕಿಯರು.

ಇರುವ ಕಟ್ಟಡವೂ ಕೂಡ ಸುಸ್ಥಿತಿಯಲ್ಲಿಲ್ಲ. ಗೋಡೆ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಹೆಂಚುಗಳು ಒಡೆದು ಹೋಗಿ ಕೊಠಡಿಯೊಳಕ್ಕೆ ನೇರವಾಗಿ ಬಿಸಿಲು ಬೀಳುತ್ತದೆ. ಮಳೆ ಬಂದರೆ ಮಕ್ಕಳು ಕೂರಲು ಸ್ಥಳವಿಲ್ಲ.

ಮೇಲ್ಛಾವಣಿಯ ಮರದ ಪಟ್ಟಿಗಳು ಗ್ದ್ದೆದಲು ಹಿಡಿದು ಮುರಿಯುವ ಹಂತದಲ್ಲಿದೆ. ಶಾಲೆ ಕಟ್ಟಡದ ಪಕ್ಕದಲ್ಲಿರುವ ನಿವೇಶನದಲ್ಲಿ ಗಿಡ ಗಂಟಿಗಳು ಬೆಳೆದಿವೆ. ಅಲ್ಲಲ್ಲಿ ಕಸದ ರಾಶಿ ಬಿದ್ದಿವೆ.

`ನಮ್ಮ  ಗ್ರಾಮದಲ್ಲಿರುವ ಈ ಶಾಲೆಗೆ ಈವರೆಗೂ ಒಂದು ಒಳ್ಳೆಯ ಕಟ್ಟಡ ನಿರ್ಮಿಸುವಲ್ಲಿ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಇರುವ ಒಂದು ಕೊಠಡಿ ಹೀನಾಯ ಸ್ಥಿತಿಯಲ್ಲಿದೆ. 1 ರಿಂದ 5 ನೇ ತರಗತಿಯವರೆಗೂ ಇದೇ ಕೊಠಡಿ. ಮಕ್ಕಳು ಕುಳಿತು ಪಾಠ ಕೇಳುವ ವೇಳೆ ಮೇಲ್ಛಾವಣಿ ಯಲ್ಲಿ ಏನಾದರೂ ತೊಂದರೆ ಆದರೆ ಏನು ಮಾಡುವುದು ಎಂಬ ಆತಂಕ ಉಂಟಾಗುತ್ತದೆ. ಗೋಡೆ ಅಲ್ಲಲ್ಲಿ ಬಿರುಕು ಬಿಟ್ಟಿದೆ.

ಶಾಲೆಗೆ ಸೇರಿರುವ ಮತ್ತೊಂದು ಕಟ್ಟಡ ಇದ್ದರೂ ಮಳೆ ಬಂದರೇ ನೀರು ಸೋರುವುದರಿಂದ ಅಲ್ಲಿ ತರಗತಿ ನಡೆಸಲು ಸಾಧ್ಯವಾಗುತ್ತಿಲ್ಲ~ ಎನ್ನುತ್ತಾರೆ ಗ್ರಾಮದ ಯುವ ಮುಖಂಡ ಎಂ.ನಿಂಗರಾಜು.

`ಇಲ್ಲಿ ನಲಿ-ಕಲಿ ಯೋಜನೆ ಉತ್ತಮ ವಾಗಿದ್ದು, ಈ ಶಾಲೆಯನ್ನು ರಾಜ್ಯ ಪ್ರಶಸ್ತಿಗೂ ಶಿಫಾರಸು ಮಾಡಲಾಗಿದೆ. ನನಗೂ ಕೂಡ ಉತ್ತಮ ಶಿಕ್ಷಕಿ ಪ್ರಶಸ್ತಿ ಬಂದಿದೆ. ಶಿಕ್ಷಣದ ಮಾಧ್ಯಮ ಸಂಚಿಕೆಗಳಲ್ಲಿ ನಮ್ಮ ಶಾಲೆಯ ಕಲಿಕೆಯ ಚಿತ್ರಗಳು ಪ್ರಕಟವಾಗಿದೆ. ಈಗ ಶಾಲೆಯಲ್ಲಿ 1-5 ನೇ ತರಗತಿಗೆ ಮಕ್ಕಳ ಸಂಖ್ಯೆ 30 ಮಾತ್ರ ಇದೆ. ಶಾಲೆಯ ಕಟ್ಟಡದ ಬಗ್ಗೆ ಪೋಷಕರು ಆತಂಕ ಪಡುತ್ತಾರೆ. ಜತೆಗೆ ಗ್ರಾಮಕ್ಕೆ ಕೆಲವೆ ಕಿ.ಮೀ ಅಂತರದಲ್ಲಿ ಖಾಸಗಿ ಶಾಲೆಗಳಿರುವುದರಿಂದ ಪೋಷಕರು ಅತ್ತ ಗಮನ ನೀಡುತ್ತಿದ್ದಾರೆ~ ಎಂದು ಶಾಲೆಯ ಶಿಕ್ಷಕಿ ಸಂಧ್ಯಾರಾಣಿ `ಪ್ರಜಾವಾಣಿ~ಗೆ ತಿಳಿಸಿದರು.

ನೂತನ ಕಟ್ಟಡವನ್ನು ರೂ. 3.5 ಲಕ್ಷದಲ್ಲಿ ನಿರ್ಮಿಸುವ ಬಗ್ಗೆ ಮಾಹಿತಿ ಇದೆ ಎಂದು ಅವರು ಹೇಳಿದರು. ಸಣ್ಣ ಮಕ್ಕಳು ಶಾಲೆಗೆ ಬರುತ್ತಿರುವುದರಿಂದ ತುರ್ತಾಗಿ ಶಾಲಾ ಕಟ್ಟಡವನ್ನು ದುರಸ್ತಿಗೊಳಿಸುವ ಅಗತ್ಯವಿದೆ ಹಾಗೂ ಶಾಲಾ ಮಕ್ಕಳ ಸಂಖ್ಯೆಯನ್ನು ಹೆಚ್ಚು ಮಾಡುವ ದೃಷ್ಟಿಯಲ್ಲಿ ಇಲಾಖೆ ಹೊಸ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡಬೇಕೆಂಬುದು ಗ್ರಾಮಸ್ಥರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.