ADVERTISEMENT

`ದೊಡ್ಡೂರಿನ ಪರಸಂಗಗಳು' ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 9:51 IST
Last Updated 3 ಡಿಸೆಂಬರ್ 2012, 9:51 IST

ಮೈಸೂರು: ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಜಿ.ಚಂದ್ರಶೇಖರ್ ಅವರ `ದೊಡ್ಡೂ ರಿನ ಪರಸಂಗಗಳು' ಕಥಾ ಸಂಕಲವನ್ನು ಭಾನುವಾರ ಕಲಾಮಂದಿರದ ಮನೆ ಯಂಗಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.

ಜಾನಪದ ತಜ್ಞ ಡಾ.ಪಿ.ಕೆ. ರಾಜಶೇಖರ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿ `ಜನರ ನಂಬಿಕೆಗಳಿಗೆ ವೈಜ್ಞಾನಿಕ ಕಲ್ಪನೆ ಮೂಡಿಸುವ ಶಕ್ತಿ ಚಂದ್ರಶೇಖರ್ ಅವರ ಕಥೆಗಳಿಗಿದೆ. ಈ ಕೃತಿಯ `ಎಲ್ಲಾ ಮಳೆಗಾಗಿ' ಕಥೆ ನಮ್ಮ ಹಳ್ಳಿ ಜನರ ಪರಂಪರಾಗತ ನಂಬಿಕೆ ಗಳನ್ನು ನಿರೂಪಿಸಿದೆ. ಇಲ್ಲಿ ಬಳಸಿರುವ ಭಾಷೆಯಲ್ಲಿ ಮಂಡ್ಯದ ಸೊಗಡಿದೆ. ತಾಯಿ ಕುರಿತು ಮಕ್ಕಳು ವ್ಯಕ್ತ ಪಡಿಸುವ ಆಕ್ರಂದನ, ಊರಿನ ಜನರ ಮೌಢ್ಯದ ಕಥಾವಸ್ತುವನ್ನು ಈ ಕೃತಿ ಅನಾವರಣಗೊಳಿಸಿದೆ ಎಂದರು.

ಚಂದ್ರಶೇಖರ್ ಅವರ ಬರವಣಿಗೆಗೆ ಓದಿಸಿಕೊಂಡು ಹೋಗುವ ಗುಣವಿದೆ. ಸಾವಿನ ಸುತ್ತ ಅವರ ಕಥೆಗಳು ಸುತ್ತಿದರೂ ಹಳ್ಳಿಯ ವಾಸ್ತವ ಚಿತ್ರಣವನ್ನು ತೆರೆದಿಡುತ್ತವೆ. ಈಗಾಗಲೇ ಎಂಟು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಮತ್ತಷ್ಟು ಸಾಹಿತ್ಯ ಕೃಷಿ ಅವರಿಂದ ನಡೆಯಲಿ ಎಂದು ಅವರು ಆಶಿಸಿದರು.

ಮಹಾರಾಣಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ಮಾತನಾಡಿ, ಚಂದ್ರಶೇಖರ್ ಅವರು ಅನುವಾದ ಹಾಗೂ ಸ್ವತಂತ್ರ ಬರವಣಿಗೆ ಎಂಬ ಎರಡು ಆಯಾಮಗಳಲ್ಲಿ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಚಾರಕ್ಕಾಗಿ ಯಾವುದೇ ಕೃತಿಯನ್ನೂ ಬರೆದಿಲ್ಲ. ತಮ್ಮ ಪಾಡಿಗೆ ತಾವು ಉತ್ತಮ ಕೃತಿಗಳನ್ನು ನೀಡುವ ಪ್ರವೃತ್ತಿ ಅವರದು. `ದೊಡ್ಡೂರಿನ ಪರಸಂಗಗಳು' ಕಥಾ ಸಂಕಲನದ ನಾಲ್ಕೂ ಕಥೆಗಳಲ್ಲೂ ಗ್ರಾಮೀಣ ಬದುಕಿನ ಚಿತ್ರಣವಿದೆ ಎಂದು ಹೇಳಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಮಹಿಮಾ ಪ್ರಕಾಶನದ ಕೆ.ವಿ. ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.