ADVERTISEMENT

ನಗರದಲ್ಲಿ 300 ಅನಧಿಕೃತ ಮಾಂಸದ ಅಂಗಡಿಗಳು!

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 11:15 IST
Last Updated 3 ಫೆಬ್ರುವರಿ 2012, 11:15 IST

ಮೈಸೂರು: ನಗರದಲ್ಲಿ ಬರೋಬ್ಬರಿ 300 ಮಾಂಸದ ಅಂಗಡಿಗಳಿಗೆ ಪರವಾನಗಿ ಇಲ್ಲ. ಮಹಾನಗರಪಾಲಿಕೆ ಲೆಕ್ಕಾಚಾರದ ಪ್ರಕಾರ ಅನಧಿಕೃತ ಅಂಗಡಿಗಳ ಸಂಖ್ಯೆ ಇಷ್ಟಿದೆ. ಆದರೆ ಹುಡುಕುತ್ತಾ ಹೋದರೆ ಅನಧಿಕೃತ ಅಂಗಡಿಗಳ ಸಂಖ್ಯೆ ನಾಲ್ಕು ಅಂಕಿ ತಲುಪಿದಲ್ಲಿ ಅಚ್ಚರಿಪಡಬೇಕಾಗಿಲ್ಲ!

ಮಟನ್, ಚಿಕನ್, ಮೀನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸಂಖ್ಯೆ ಅಂದಾಜು 2 ಸಾವಿರ ಮಂದಿ ಇದ್ದಾರೆ. ಆದರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 400 ಮಾಂಸದ ಅಂಗಡಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಪರವಾನಗಿ ಹೊಂದಿರುವವರ ಕೇವಲ 100 ಮಾತ್ರ. ಉಳಿದ 300 ಅಂಗಡಿಗಳಿಗೆ ಪರವಾನಗಿ ಇಲ್ಲ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಪಾಲಿಕೆಗೆ ಸೇರಿದ ಆಸ್ತಿಯಲ್ಲೇ ಕೆಲ ಮಾಂಸದ ಅಂಗಡಿಗಳು ನಡೆಯುತ್ತಿದ್ದರೆ ಮತ್ತೆ ಕೆಲವು ಖಾಸಗಿ ಯಾಗಿ ನಡೆಯುತ್ತಿವೆ. ನಗರ ವಿಸ್ತಾರವಾಗಿ ಬೆಳೆ ದಿದ್ದು, ಮಾಂಸಪ್ರಿಯರು ದಿನೆ ದಿನೇ ಹೆಚ್ಚುತ್ತಿರುವ ಬೆನ್ನಲ್ಲೇ ಬೇಡಿಕೆಗೆ ಅನುಗುಣವಾಗಿ ಅಂಗಡಿಗಳ ಸಂಖ್ಯೆಯೂ ಹೆಚ್ಚುತ್ತಿವೆ. ಆದರೆ ನಗರದಲ್ಲಿ ಎಷ್ಟು ಮಾಂಸದ ಅಂಗಡಿಗಳು ಅನಧಿಕೃತವಾಗಿ ನಡೆಯು ತ್ತಿವೆ ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ.

ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಮಾಂಸದ ಅಂಗಡಿಗಳು ಇದ್ದರೂ ಪರವಾನಗಿ ಪಡೆಯುವುದು ಕಡ್ಡಾಯ. ಒಂದು ವೇಳೆ ಪಡೆಯದಿದ್ದರೆ ಅಂತಹ ಅಂಗಡಿಗಳಿಗೆ ಬೀಗಮುದ್ರೆ ಹಾಕಲಾಗುತ್ತದೆ. ಬೇಸಿಗೆ ಸಮೀಪಿಸುತ್ತಿರುವುದರಿಂದ ಸ್ವಚ್ಛತೆಗೆ ಹೆಚ್ಚು ಗಮನ ಹರಿಸಬೇಕಾಗಿರುವುದರಿಂದ ಪಾಲಿಕೆ ಅಧಿಕಾರಿಗಳು ಎಚ್ಚತ್ತುಕೊಂಡಿದ್ದಾರೆ. ಪರವಾನಗಿ ಹೊಂದಿಲ್ಲದ ಮಾಂಸದ ಅಂಗಡಿಗಳನ್ನು ಪಟ್ಟಿ ಮಾಡಿ ಅಂತಹವುಗಳಿಗೆ ನೋಟಿಸ್ ಜಾರಿ ಮಾಡಿ, ಬೀಗಮುದ್ರೆ ಹಾಕಲು ಮುಂದಾಗಿದ್ದಾರೆ.

3 ಅಂಗಡಿಗಳಿಗೆ ಬೀಗಮುದ್ರೆ: ಇದೀಗ ಅಧಿಕಾರಿಗಳ ಕಣ್ಣು ಮಾಂಸದ ಅಂಗಡಿಗಳ ಮೇಲೆ ನೆಟ್ಟಿದೆ. ಪರವಾನಗಿ ಹೊಂದಿಲ್ಲದ ಮಾಂಸದ ಅಂಗಡಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದೇವರಾಜ ಮಾರುಕಟ್ಟೆಯಲ್ಲಿ ಎರಡು ಮೀನು ಮಾರಾಟ ಮತ್ತು ಒಂದು ಚಿಕನ್ ಅಂಗಡಿ ಮೇಲೆ ದಾಳಿ ಮಾಡಿ ಬೀಗಮುದ್ರೆ ಹಾಕಿದ್ದಾರೆ. ಅಲ್ಲದೆ ಪರವಾನಗಿ ಹೊಂದಿ ಅದನ್ನು ನವೀಕರಣ ಮಾಡದ ಅಂಗಡಿಗಳ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

ಸ್ವಚ್ಛತೆಗೆ ಆದ್ಯತೆ ಮುಖ್ಯ: ಮಾಂಸದ ಅಂಗಡಿಗಳಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ಮಾಂಸಗಳನ್ನು ಅಂಗಡಿ ಮುಂದೆ ತೆರೆದ ಸ್ಥಳದಲ್ಲಿ ತೂಗುಹಾಕುವಂತಿಲ್ಲ. ಗಾಜಿನ ಮರೆಯೊಳಗೆ ನೊಣ ಮತ್ತು ದೂಳು ಬಾರದಂತೆ ಮಾಂಸವನ್ನು ನೇತು ಹಾಕಬೇಕು. ಅಲ್ಲದೆ ಪಾಲಿಕೆ ಆರೋಗ್ಯ ಅಧಿಕಾರಿ ಶುದ್ಧ ಮಾಂಸವೆಂದು ದೃಢೀಕರಿಸಿದ ಬಳಿಕ ಮಾರಾಟಕ್ಕೆ ಅವಕಾಶ ಇದೆ. ಯಾವ ಅಂಗಡಿಯಲ್ಲಿ ಇದನ್ನು ಪಾಲಿಸುವುದಿಲ್ಲವೊ ಅಂತಹವರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ತದನಂತರವೂ ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ಪಾಲಿಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ.

ವಧಾ ಶುಲ್ಕಕ್ಕೆ ವಿರೋಧ: ಕುರಿ-ಮೇಕೆಗಳನ್ನು ವಧಾಗಾರಗಳಲ್ಲಿಯೇ ಕಡಿಯಬೇಕು ಎಂಬುದನ್ನು ಕಡ್ಡಾಯ ಮಾಡಲಾಗಿದೆ. ಹಿಂದೆ ಒಂದು ಕುರಿಗೆ ರೂ.7.50 ಯನ್ನು ಪಾಲಿಕೆ ವಧಾ ಶುಲ್ಕವಾಗಿ ಪಡೆಯುತ್ತಿತ್ತು. ಅದರೆ ಇ-ಟೆಂಡರ್ ಮೂಲಕ ಹೊರಗಿನವರಿಗೆ ಟೆಂಡರ್ ನೀಡಲಾಗಿದ್ದು, ಪ್ರಸ್ತುತ ಒಂದು ಕುರಿಗೆ ರೂ.20-30 ವಧಾ ಶುಲ್ಕವಾಗಿ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಮೈಸೂರು ಮಟನ್ ಮರ್ಚೆಂಟ್ಸ್ ಅಸೋಸಿಯೇಷನ್ ವ್ಯಾಪಕ ವಿರೋಧ ವ್ಯಕ್ತಪಡಿಸಿದೆ.

ಆದರೆ 6-7 ತಿಂಗಳ ಹಿಂದೆಯೇ ವಧಾ ಶುಲ್ಕ ಪಡೆಯಲು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆಗ ಯಾವ ತಕರಾರು ಇರಲಿಲ್ಲ. ಜಾರಿ ಬಂದ ನಂತರ ಈಗ ಮಟನ್ ಮಾರಾಟಗಾರರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ಎಂಬುದು ಅಧಿಕಾರಿಗಳ ವಾದ.ಮಾಂಸದ ಅಂಗಡಿಗಳು ಸೇರಿ ಎಲ್ಲ ಉದ್ದಿಮೆ ದಾರರು ಕಡ್ಡಾಯವಾಗಿ ಪರವಾನಗಿ ಹೊಂದಿರ ಬೇಕು. ಇಲ್ಲವಾದಲ್ಲಿ ನೋಟಿಸ್ ಜಾರಿ ಮಾಡಿ, ಅಂಗಡಿಗಳಿಗೆ ಬೀಗಮುದ್ರೆ ಹಾಕಲಾಗುತ್ತದೆ.
 
ಮಟನ್ ಮಾರಾಟಗಾರರು ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ನಿರ್ಲಕ್ಷಿಸಿ ಸಿಕ್ಕಿಬಿದ್ದಲ್ಲಿ ಪರವಾನಗಿ ಯನ್ನು ರದ್ದು ಮಾಡಲಾಗುತ್ತದೆ. ಸ್ವಚ್ಛತೆ ಕಾಪಾಡುವುದು, ಪರವಾನಗಿ ಕಡ್ಡಾಯವಾಗಿ ಹೊಂದುವುದರ ಬಗ್ಗೆ ಕರಪತ್ರಗಳನ್ನು ಹಂಚಿ ಅರಿವು ಮೂಡಿಸಲಾಗುತ್ತಿದೆ~ ಎಂದು ಪಾಲಿಕೆ ಪಶುವೈದ್ಯಾಧಿಕಾರಿ ಡಾ.ಲಿಂಗರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.