ADVERTISEMENT

ನಗರಿಯಲ್ಲಿ ಕ್ರಿಸ್‌ಮಸ್‌ ರಂಗು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 5:42 IST
Last Updated 25 ಡಿಸೆಂಬರ್ 2017, 5:42 IST
ಕ್ರಿಸ್‌ಮಸ್‌ಗಾಗಿ ಮೈಸೂರಿನ ವೆಸ್ಲಿ ಚರ್ಚ್‌ ದೀಪಾಲಂಕೃತಗೊಂಡಿರುವುದು
ಕ್ರಿಸ್‌ಮಸ್‌ಗಾಗಿ ಮೈಸೂರಿನ ವೆಸ್ಲಿ ಚರ್ಚ್‌ ದೀಪಾಲಂಕೃತಗೊಂಡಿರುವುದು   

ಮೈಸೂರು: ಕ್ರಿಸ್‌ಮಸ್‌ಗೆ ಮೈಸೂರು ಸಿಂಗಾರಗೊಂಡಿದೆ. ನಗರದ ಸೇಂಟ್‌ ಫಿಲೋಮಿನಾ ಚರ್ಚ್ ಸೇರಿದಂತೆ ವಿವಿಧ ಪ್ರಾರ್ಥನಾ ಮಂದಿರಗಳು ದೀ‍ಪಾಲಂಕಾರ ಮಾಡಿಕೊಂಡು ಹಬ್ಬ ಆಚರಿಸಲು ಸಜ್ಜಾಗಿವೆ.

ಕ್ರಿಸ್‌ಮಸ್‌ಗೆ ಹಿಂದಿನ ದಿನವಾದ ಭಾನುವಾರ ರಾತ್ರಿ 11 ಗಂಟೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಗಳು ಆರಂಭಗೊಂಡವು. ಸೇಂಟ್‌ ಫಿಲೋಮಿನಾ ಚರ್ಚಿನಲ್ಲಿ ಬಿಷಪ್‌ ಕೆ.ಎ.ವಿಲಿಯಂ ಅವರ ನೇತೃತ್ವದಲ್ಲಿ ಪೂಜೆಗಳು ಆರಂಭಗೊಂಡವು. ಚರ್ಚ್‌ನ ಮುಖ್ಯಸ್ಥ ಎನ್‌.ಟಿ.ಜೋಸೆಫ್‌ ಅವರು ಕ್ರಿಸ್‌ಮಸ್‌ ದಿನದಂದು ಚರ್ಚಿನಲ್ಲಿ ಪೂಜಾ ಕಾರ್ಯ ನಡೆಸಿಕೊಡಲಿದ್ದಾರೆ. ಅಂತೆಯೇ, ನಗರದ ಎಲ್ಲ ಚರ್ಚ್‌ಗಳಲ್ಲೂ ಪೂಜೆಗಳು ನಡೆಯಲಿವೆ.

ಭಾನುವಾರ ರಾತ್ರಿ 11ರಿಂದ 12ರವರೆಗೆ ಕರೋಲ್‌ ಗೀತೆಗಳು ನಡೆದವು. ನಂತರ, ಬಿಷಪ್‌ ವಿಲಿಯಂ ಅವರು ಕನ್ನಡದಲ್ಲಿ ಸಂದೇಶ ನೀಡಿದರು. ಸೋಮವಾರ ಬೆಳಿಗ್ಗೆ 5ಕ್ಕೆ ತಮಿಳಿನಲ್ಲಿ, 6ಕ್ಕೆ ಕನ್ನಡದಲ್ಲಿ, 7ಕ್ಕೆ ಇಂಗ್ಲಿಷಿನಲ್ಲಿ, ಸಂಜೆ 6ಕ್ಕೆ ಕನ್ನಡದಲ್ಲಿ ಪ್ರಾರ್ಥನೆ ನಡೆಯಲಿವೆ.

ADVERTISEMENT

‘ಕಳೆದ ವರ್ಷ ಸೇಂಟ್‌ ಫಿಲೋಮಿನಾ ಚರ್ಚಿನ ಒಳಾಂಗಣವನ್ನು ದುರಸ್ತಿಗೊಳಿಸುತ್ತಿದ್ದ ಕಾರಣ ಚರ್ಚಿನ ಸಭಾಂಗಣದಲ್ಲಿ ಪ್ರಾರ್ಥನೆ ನಡೆದಿತ್ತು. ಈ ವರ್ಷ ಒಳಾಂಗಣದಲ್ಲಿ ಪ್ರಾರ್ಥನೆ ನಡೆಯಲಿದೆ. ಹೊರಭಾಗದಲ್ಲಿ ನಡೆಯುತ್ತಿರುವ ದುರಸ್ತಿ ಕಾರ್ಯವು 10 ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಬಿಷಪ್‌ ಕೆ.ಎ.ವಿಲಿಯಂ ‘ಪ್ರಜಾವಾಣಿ’ಗೆ ತಿಳಿಸಿದರು.

ಚರ್ಚಿನ ಹೊರಭಾಗದಲ್ಲಿ ಆಕರ್ಷಕ ‘ಕ್ರಿಬ್’ (ಗೋದಳಿ) ನಿರ್ಮಿಸಲಾಗಿದೆ. ನಗರದ ಸಂಪತ್ ಹಾಗೂ ತಂಡವು ಕ್ರಿಬ್‌ ನಿರ್ಮಿಸಿದೆ. ಕ್ರಿಬ್‌ನ ಪಕ್ಕದಲ್ಲಿ ಪುಟ್ಟ ಹಡಗಿನ ಪ್ರತಿಕೃತಿ ನಿರ್ಮಿಸಿದ್ದು, ಸಾಂಟಾ ಕ್ಲಾಸ್ ಮೂರ್ತಿಯನ್ನು ನಿಲ್ಲಿಸಲಾಗಿದೆ. ಕ್ರಿಬ್‌ಗೆ ಬಾಲ ಏಸುವಿನ ಬೊಂಬೆಯನ್ನು ಬಿಷಪ್‌ ಕೂರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.