ADVERTISEMENT

ನೀರಿನ ದರ: ಮುಂದುವರಿದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮೇ 2012, 7:50 IST
Last Updated 24 ಮೇ 2012, 7:50 IST

ಮೈಸೂರು: ಮಹಾನಗರ ಪಾಲಿಕೆಯು ನೀರಿನ ದರವನ್ನು ಹೆಚ್ಚಿಸಿರುವುದನ್ನು ವಿರೋಧಿಸಿ ಬುಧವಾರ ಕೂಡ ಪ್ರತಿಭಟನೆ ಮುಂದುವರೆದಿದ್ದು, ನಗರದ ಪಾಲಿಕೆ ಕಚೇರಿ ಎದುರು ಶ್ರೀ ಕಾಳಿಕಾಂಬ ಟ್ರಸ್ಟ್‌ನ ಸದಸ್ಯರು ತಮಟೆ ಚಳವಳಿ ನಡೆಸಿದರು.

ನೀರು ಸರಬರಾಜು ಶುಲ್ಕವನ್ನು ಏಕಾಏಕಿ ಐದು ಪಟ್ಟು ಹೆಚ್ಚಳ ಮಾಡಲಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಈ ನಡುವೆ  ನೀರು ಸರಬರಾಜು ದರವನ್ನು ಮನಬಂದಂತೆ ಏರಿಕೆ ಮಾಡಿರುವು ದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಹೆಚ್ಚಳ ಮಾಡಿರುವ ನೀರಿನ ದರವನ್ನು ಇಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕಾವೇರಿ ಮತ್ತು ಕಪಿಲಾ ನದಿಗಳ ತಟದಲ್ಲಿ ಇದ್ದರೂ ನೀರಿಗೆ ಹೆಚ್ಚು ಶುಲ್ಕ ಕಟ್ಟುವುದು ತಪ್ಪಿಲ್ಲ. ನೀರು ಸರಬರಾಜು ನಿರ್ವಹಣಾ ವೆಚ್ಚದ ನೆಪವೊಡ್ಡಿ ಶುಲ್ಕ ಹೆಚ್ಚಳ ಮಾಡಿರುವುದು ಖಂಡನೀಯ. ನೀರಿನ ಬಿಲ್ ನೋಡಿದ ಜನತೆ ಕಂಗಾಲಾಗಿದ್ದಾರೆ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜನತೆಗೆ ಸುಸಜ್ಜಿತ ನೀರು ಸರಬರಾಜು ಮಾಡುವ ಉದ್ದೇಶದಿಂದ ಆರಂಭವಾದ ವಾಣಿ ವಿಲಾಸ ನೀರು ಸರಬರಾಜು ಕೇಂದ್ರ ಗ್ಯಾಲನ್‌ಗಟ್ಟಲೇ ನೀರನ್ನು ಸರಬರಾಜು ಮಾಡುತ್ತಿತ್ತು. ಕಳೆದ ತಿಂಗಳವರೆಗೆ 25 ಸಾವಿರ ಲೀಟರ್ ನೀರಿಗೆ ರೂ.2 ಶುಲ್ಕ ಅದಕ್ಕಿಂತ ಹೆಚ್ಚಿನ ನೀರು ಬಳಕೆಗೆ ಹೊರೆಯಾಗದಂತೆ ನೀರಿನ ದರವನ್ನು ನಿಗದಿ ಮಾಡಲಾಗಿತ್ತು. ಆದರೆ ದಿಢೀರನೆ ನೀರಿನ ದರ ಹೆಚ್ಚಳ ಮಾಡುವ ಮೂಲಕ ಪಾಲಿಕೆ ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಪ್ರತಿಭ ಟನಾಕಾರರು ಕಿಡಿಕಾರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಟ್ರಸ್ಟ್‌ನ ಅಧ್ಯಕ್ಷ ಪಂಡಿತ್ ಗೋಪಾಲಸ್ವಾಮಿ, ಕಾರ್ಯದರ್ಶಿ ಜೆ.ಮಹೇಶ್‌ಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪೋಷಕರ ಜಾಗೃತಿ ವೇದಿಕೆ 
 ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಾಗಿರುವ ಡೊನೇಷನ್ ಹಾವಳಿ ತಡೆಗಟ್ಟಬೇಕು ಎಂದು ಒತ್ತಾಯಿಸಿ ಕರ್ನಾಟಕ ವಿದ್ಯಾರ್ಥಿಗಳ ಪೋಷಕರ ಜಾಗೃತಿ ವೇದಿಕೆ ಕಾರ್ಯಕರ್ತರು ಗಾಂಧಿಚೌಕದಲ್ಲಿ ಧರಣಿ ನಡೆಸಿದರು.
ಖಾಸಗಿ ಶಾಲೆಗಳಲ್ಲಿ ಮಕ್ಕಳ ಪ್ರವೇಶ ಪಡೆಯಲು ಶಿಕ್ಷಣವನ್ನು ಹಣಕ್ಕೆ ವ್ಯಾಪಾರ ಮಾಡಲಾಗುತ್ತಿದೆ.

ಪಠ್ಯಪುಸ್ತಕಗಳನ್ನು ಪೋಷಕರಿಗೆ ಮಾರಾಟ ಮಾಡಿ ಸಹಸ್ರಾರು ರೂಪಾಯಿಗಳನ್ನು ಅಕ್ರಮವಾಗಿ ವಸೂಲು ಮಾಡಲಾಗುತ್ತಿದೆ. ಇದೆಲ್ಲಾ ಗೊತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೆ. ಖಾಸಗಿ ಶಾಲೆಗಳಲ್ಲಿ ವಸೂಲಿ ಮಾಡುತ್ತಿರುವ ಹಣಕ್ಕೆ ಕಡ್ಡಾಯವಾಗಿ ರಶೀದಿ ಪಡೆಯಬೇಕು. ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನುರಿತ ಶಿಕ್ಷಕರನ್ನು ಹೊಂದಿರದ ಶಿಕ್ಷಣ ಸಂಸ್ಥೆಗಳ ಮಾನ್ಯತೆಯನ್ನು ರದ್ದು ಮಾಡಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.