ADVERTISEMENT

‍ಪಕ್ಷಕ್ಕೇನೂ ಲಾಭ ಆಗಿಲ್ಲ; ಬಿಟ್ಟು ಹೋಗಲಿ

ಸಂದೇಶ್‌ ಸಹೋದರರ ವಿರುದ್ಧ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 9:43 IST
Last Updated 30 ಮಾರ್ಚ್ 2018, 9:43 IST

ಮೈಸೂರು: ‘ಸಂದೇಶ್ ಸಹೋದರರಿಂದ ಜೆಡಿಎಸ್‌ಗೆ ಯಾವುದೇ ರೀತಿಯಲ್ಲಿ ಲಾಭವಾಗಿಲ್ಲ. ನಮ್ಮಿಂದಲೇ ಅವರಿಗೇ ಲಾಭವಾಗಿದೆ ಅಷ್ಟೆ. ಪಕ್ಷ ಬಿಟ್ಟು ಹೋಗಲಿ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಇಲ್ಲಿ ಗುರುವಾರ ಗುಡುಗಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಪಕ್ಷ ತೊರೆದು ಹೋಗುವವರು ಹೋಗಬಹುದು, ಬರುವವರಿಗೆ ಸ್ವಾಗತವಿದೆ. ಸಂದೇಶ್ ಸಹೋದರರು ಪಕ್ಷಕ್ಕೆ ಪ್ರಾಮಾಣಿಕವಾಗಿ ಇರಲಿಲ್ಲ. ಕಳೆದ ಬಾರಿಯೇ ಅವರನ್ನು ಕಣಕ್ಕಿಳಿಸಲು ವಿರೋಧವಿತ್ತು’ ಎಂದರು.

‘ಜೆಡಿಎಸ್‌ ತೊರೆಯುತ್ತಿರುವ ವಿಚಾರ ನನಗೇನೂ ಅಚ್ಚರಿ ಉಂಟುಮಾಡಿಲ್ಲ. ಶಾಸಕ ಸಾ.ರಾ.ಮಹೇಶ್‌ ಮೇಲೆ ಸಹೋದರರು ಈಗ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಂದೇಶ್‌ ಸ್ವಾಮಿ ಮೇಯರ್‌ ಆಗಲು, ಸಂದೇಶ್‌ ನಾಗರಾಜ್ ವಿಧಾನ ಪರಿಷತ್‌ ಸದಸ್ಯ ರಾಗಲು ಸಾ.ರಾ.ಮಹೇಶ್‌ ಕಾರಣ‌. ಅದಕ್ಕೆ ದೇವೇಗೌಡರು ಹಾಗೂ ನನ್ನ ವಿರೋಧವಿತ್ತು’ ಎಂದು ಹೇಳಿದರು. 

ADVERTISEMENT

‘ಜಿಲ್ಲೆಯಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂಬ ಪೂರ್ಣ ಮಾಹಿತಿ ನನಗಿದೆ. ಯಾರ ಮನೆಗೆ ಹೋಗಿದ್ದಾರೆ ಎಂಬುದೂ ಗೊತ್ತು. ಮೈಸೂರಿನವರೇ ಮುಂದಿನ ಮುಖ್ಯಮಂತ್ರಿಯಾಗಬೇಕು ಎನ್ನುತ್ತಾರೆ. ವೈಯಕ್ತಿಕವಾಗಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಗೆದ್ದೆ ಎನ್ನುವ ಇಂಥವರಿಗೆ ಹೇಗೆ ಟಿಕೆಟ್‌ ನೀಡಲಿ’ ಎಂದು ಪ್ರಶ್ನಿಸಿದರು.

‘ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಹೋಗಲಿ. ಚುನಾವಣೆ ನಡೆಯಲಿ. ನಾವು ಏಕೆ ಅಮಾನತು ಮಾಡಬೇಕು’ ಎಂದು ಗರಂ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.