ADVERTISEMENT

ಪಾಲಿಕೆ ವಿರುದ್ಧ ಸೆಲ್ಲಾರ್ ವ್ಯಾಪಾರಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 5:26 IST
Last Updated 6 ಡಿಸೆಂಬರ್ 2017, 5:26 IST
ಮೈಸೂರಿನಲ್ಲಿ ಪಾಲಿಕೆ ವಿರುದ್ಧ ಸೆಲ್ಲಾರ್ ಮತ್ತು ಕಟ್ಟಡದ ಬೇಸ್‌ಮೆಂಟ್ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ವ್ಯಾಪಾರಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು (ಎಡಚಿತ್ರ). ಸಂಸದ ಪ್ರತಾಪಸಿಂಹ ರಾಜೀನಾಮೆಗೆ ಒತ್ತಾಯಿಸಿ ಯುವ ಕಾಂಗ್ರೆಸ್‌ನ ಚಾಮುಂಡೇಶ್ವರಿ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಮೈಸೂರಿನಲ್ಲಿ ಪಾಲಿಕೆ ವಿರುದ್ಧ ಸೆಲ್ಲಾರ್ ಮತ್ತು ಕಟ್ಟಡದ ಬೇಸ್‌ಮೆಂಟ್ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ವ್ಯಾಪಾರಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು (ಎಡಚಿತ್ರ). ಸಂಸದ ಪ್ರತಾಪಸಿಂಹ ರಾಜೀನಾಮೆಗೆ ಒತ್ತಾಯಿಸಿ ಯುವ ಕಾಂಗ್ರೆಸ್‌ನ ಚಾಮುಂಡೇಶ್ವರಿ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಮೈಸೂರು: ಪಾಲಿಕೆ ಅಧಿಕಾರಿಗಳು ವ್ಯಾಪಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಸೆಲ್ಲಾರ್ ಮತ್ತು ಕಟ್ಟಡದ ಬೇಸ್‌ಮೆಂಟ್ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ವ್ಯಾಪಾರಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ಮೆರವಣಿಗೆ ಹೊರಟ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿವರೆಗೂ ಜಾಥಾ ನಡೆಸಿದರು. ಈ ವೇಳೆ ಪಾಲಿಕೆ ವಿರುದ್ಧ ಆಕ್ರೋಶ ಹೊರ ಹಾಕಿದರು.

ನ್ಯಾಯಬದ್ಧವಾಗಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಸಂಘದ ಸದಸ್ಯರ ಮಳಿಗೆಗಳ ಮೇಲೆ ಪಾಲಿಕೆ ಅಧಿಕಾರಿಗಳು ಅನವಶ್ಯಕವಾಗಿ ದಾಳಿ ನಡೆಸುತ್ತಿದ್ದಾರೆ. ಇಲ್ಲದ ನಿಯಮವನ್ನು ಹೇಳಿ ವ್ಯಾಪಾರವನ್ನು ಬಂದ್ ಮಾಡಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

ಹಲವು ವರ್ಷಗಳ ಹಿಂದೆಯೇ ಪಾಲಿಕೆ ಸೆಲ್ಲಾರ್‌ನಲ್ಲಿ ವ್ಯಾಪಾರ ವಹಿ ವಾಟು ನಡೆಸಲು ಪರವಾನಗಿ ನೀಡಿದೆ. ಅಲ್ಲಿಂದ ಇಲ್ಲಿವರೆಗೆ ಯಾವುದೇ ಪ್ರಶ್ನೆ ಮಾಡದ ಅಧಿಕಾರಿಗಳು ದಿಢೀರನೆ ಇದು ನಿಯಮಬಾಹಿರ ಎನ್ನುತ್ತಿದ್ದಾರೆ. ಇಲ್ಲಿವರೆಗೆ ಕಾನೂನುಬದ್ಧವಾಗಿಯೇ ಎಲ್ಲ ತೆರಿಗೆ ಪಾವತಿಸಿದ್ದೇವೆ. ಈಗ ಅಂಗಡಿ ಮುಚ್ಚಿ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಸೆಲ್ಲಾರ್‌ನಲ್ಲಿ ವ್ಯಾಪಾರ ವಹಿವಾಟು ನಡೆಸಬಾರದು ಎಂಬ ನಿಯಮ ಎಲ್ಲಿಯೂ ಇಲ್ಲ. ಮಾತ್ರವಲ್ಲ, ಇಲ್ಲಿ ವ್ಯಾಪಾರ ನಡೆಸುವುದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಹೀಗಿದ್ದರೂ ಪಾಲಿಕೆ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು. ಸಂಘದ ಅಧ್ಯಕ್ಷ ಬೇರೂಲ್ ಕೊಠಾರಿ, ಉಪಾಧ್ಯಕ್ಷ ಸಂಜಯ್, ವ್ಯಾಪಾರಸ್ಥರಾದ ಸಲೀಂ ಪಾಷಾ, ರಂಗನಾಥ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.