ADVERTISEMENT

ಪಾಲಿಮರ್ ಪ್ಯಾಕೆಜಿಂಗ್ ಘಟಕ ಸ್ಥಾಪನೆ ಯೋಜನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 6:55 IST
Last Updated 22 ಅಕ್ಟೋಬರ್ 2011, 6:55 IST

ಮೈಸೂರು: ಮುಂದಿನ ಪಂಚವಾರ್ಷಿಕ ಯೋಜನೆಯಲ್ಲಿ ಇಲ್ಲಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಶಾಲೆಯಲ್ಲಿ (ಡಿಎಫ್‌ಆರ್‌ಎಲ್) 20 ಕೋಟಿ ವೆಚ್ಚದಲ್ಲಿ ಪಾಲಿಮರ್ ಪ್ಯಾಕೆಜಿಂಗ್ ಮತ್ತು ಮಾರುಕಟ್ಟೆ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ ಡಿಆಡಿಒ ಜೀವವಿಜ್ಞಾನ ಮತ್ತು ಅಂತರರಾಷ್ಟ್ರೀಯ ಸಹಕಾರ ವಿಭಾಗದ ಮುಖ್ಯನಿಯಂತ್ರಕ ಮತ್ತು ಹಿರಿಯ ವಿಜ್ಞಾನಿ ಡಾ. ಡಬ್ಲ್ಯು. ಸೆಲ್ವಮೂರ್ತಿ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭದ್ರತೆಯು ರಾಷ್ಟ್ರದ ಅಭಿವೃದ್ಧಿ ನಿರ್ಧಾರಕಗಳಲ್ಲಿ ಒಂದು. ನಾವು ಬಲಾಢ್ಯರಾಗಿದ್ದಾಗ ಮಾತ್ರ ಇತರ ಬಲಶಾಲಿಗಳು ನಮ್ಮನ್ನು ಗುರುತಿಸುತ್ತಾರೆ. ಇಲ್ಲಿನ  ಡಿಎಫ್‌ಆರ್‌ಎಲ್ ಪೌಷ್ಟಿಕ ಆಹಾರ ಮತ್ತು ಸಂರಕ್ಷಣೆ ಕ್ಷೇತ್ರದಲ್ಲಿ ಉತ್ಕೃಷ್ಟ ಅವಿಷ್ಕಾರಗಳನ್ನು ಕೈಗೊಂಡು ರಕ್ಷಣಾ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್‌ಡಿಒ) ಅಂಗಸಂಸ್ಥೆಯಾಗಿರುವ ಡಿಎಫ್‌ಆರ್‌ಎಲ್ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಸಂಶೋಧನೆ ಕೈಗೊಂಡು ಭೂ-ಸೇನೆ, ವಾಯುಪಡೆ, ನೌಕಾದಳದ ಮತ್ತು ಪ್ಯಾರಾ ಮಿಲಿಟರಿ ಯೋಧರಿಗೆ ಅಗತ್ಯವಿರುವ ವಿಟಮಿನ್‌ಯುಕ್ತ ಆಹಾರ ಅಭಿವೃದ್ಧಿಪಡಿಸುತ್ತಿದೆ.

ಸೈನಿಕರು ವಿಷಮ ವಾತಾವರಣ (ಬಿಸಿಲು, ಚಳಿ, ಮಳೆ...), ವಿವಿಧ ಭೂಪ್ರದೇಶ (ಮರುಭೂಮಿ, ಪರ್ವತ, ಅರಣ್ಯ) ಕ್ಲಿಷ್ಟ ಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಇಂಥ ಸಂದರ್ಭಗಳಲ್ಲಿ ಅವರು ದಾರ್ಢ್ಯತೆ ಕಾಪಾಡಿಕೊಂಡು ದಕ್ಷತೆಯಿಂದ ಹೋರಾಡಲು ಅಗತ್ಯವಿರುವ ಮತ್ತು ದೀರ್ಘಕಾಲ ಸಂರಕ್ಷಿಸಲು ಸಾಧ್ಯವಿರುವ ಪೌಷ್ಟಿಕ ಆಹಾರವನ್ನು ಡಿಎಫ್‌ಆರ್‌ಎಲ್ ಅಭಿವೃದ್ಧಿಪಡಿಸಿದೆ ಎಂದು ಹೇಳಿದರು.

ಪೌಷ್ಟಿಕ ಆಹಾರ ನಿರ್ವಹಣೆಯಲ್ಲಿ ನ್ಯಾನೊ ಟೆಕ್ನಾಲಜಿ ಬಳಕೆಗೆ ಸಂಶೋಧನೆಗಳು ನಡೆದಿದ್ದು, ಅವು ಅಂತಿಮ ಹಂತದಲ್ಲಿವೆ. `ರಡಿ ಟು ಈಟ್ ಟೆಕ್ನಾಲಜಿ~, `ಪ್ರೀಜ್ ಡ್ರೈ ಟಿಕ್ನಾಲಜಿ~.  `ವಾಟರ್ ಟೆಸ್ಟಿಂಗ್ ಕಿಟ್~ ಈ ಹೊಸ ತಂತ್ರಜ್ಞಾನಗಳ ಇಲ್ಲಿಯವೆ. ಆರು ತಿಂಗಳ ವರೆಗೆ ಬಾಳಿಕೆ ಬರುವ ಚಪಾತಿ, ಒಂದು ಗಂಟೆಯಲ್ಲಿ ಸಾವಿರ ಚಪಾತಿಗಳನ್ನು ಸುಡುವ ಯಂತ್ರಗಳನ್ನು ಈ ಸಂಸ್ಥೆ ಸಂಶೋಧಿಸಿದೆ.
 
ಮಾಂಸಹಾರದ ಗುಣಮಟ್ಟ ಪರಿಶೀಲನೆಗೆ (ನಾಟಿ, ಫಾರ್ಮ್...) ಯಂತ್ರ ಕಂಡುಕೊಳ್ಳಲಾಗಿದೆ. ಮಾಂಸಹಾರ ಕೆಡದಂತೆ ಬಹುಕಾಲ ಸಂರಕ್ಷಿಸಲು ಅಗತ್ಯವಾದ ತಂತ್ರಜ್ಞಾನ ರೂಪಿಸಲಾಗಿದೆ. ಭೂ-ಸೇನೆ, ವಾಯುಸೇನೆ, ನೌಕಾದಳದ ಯೋಧರಿಗೆ ಅಗತ್ಯಕ್ಕೆ ತಕ್ಕಂತೆ ಬೇರೆ ಬೇರೆ ನ್ಯೂಟ್ರಿಷಿಯಸ್ ಆಹಾರಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ಇಲ್ಲಿ ಅಭಿವೃದ್ಧಿಪಡಿಸಿರುವ ಬಿಟ್ರೂಟ್, ಶುಂಠಿ, ಲೋಳೆಸರ ಜ್ಯೂಸ್ ಇತ್ಯಾದಿ ಸೈನಿಕರಿಗೆ ವರದಾನವಾಗಿವೆ. ಪೌಷ್ಟಿಕತೆ ಜೊತೆಗೆ ದೇಹದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ (ಕೊಲೆಸ್ಟ್ರಾಲ್, ಮಧುಮೇಹ, ಹೈಪರ್‌ಟೆನ್ಶನ್...) ಬೀರದಂತೆ ಎಚ್ಚರವಹಿಸಿ ಆಹಾರ ಅಭಿವೃದ್ಧಿಪಡಿಸಲಾಗಿದೆ.
 
ಈಗ ಸಂಶೋಧಿಸಿರುವ ಆಹಾರ, ಪರಿಸರ ಮತ್ತು ಕ್ಲಿನಿಕ್ ಸ್ಯಾಂಪಲ್‌ಗಳಲ್ಲಿ ಅಂತ್ರಾಕ್ಸ್ ಹಾಗೂ ಆಫ್ಲ ಟಾಕ್ಸಿನ್ `ಎ~ ಪತ್ತೆ ಹಚ್ಚುವ `ರ‌್ಯಾಪಿಡ್ ಅಂಡ್ ಸೆನ್ಸಿಟವ್ ಟೆಸ್ಟ್ ಕಿಟ್~ ಮತ್ತು ಹಾಲಿನ ಗುಣಮಟ್ಟ ಪರೀಕ್ಷಿಸುವ `ಮಿಲ್ಕ್ ಟೆಸ್ಟಿಂಗ್ ಕಿಟ್~ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಅವರು ದೀರ್ಘಕಾಲ ಮೊಸರು ರಕ್ಷಿಸಿ ಇಡುವ ಬಗ್ಗೆ ಸಂಶೋಧನೆ ನಡೆಯುತ್ತಿವೆ ಎಂದು ತಿಳಿಸಿದರು.

ಡಿಆರ್‌ಡಿಒ ಕ್ಷಿಪಣಿ, ಯುದ್ಧವಿಮಾನ, ರಾಡಾರ್ ಅತ್ಯಾಧುನಿಕ ಯುದ್ಧೋಪಕರಣಗಳನ್ನು ಸಿದ್ಧಪಡಿಸಿ, ವಿಶ್ವದಲ್ಲಿ ಮುಂಚೂಣಿಯಲ್ಲಿದೆ. ಡಿಆರ್‌ಡಿಒ ಮತ್ತು ಡಿಎಫ್‌ಆರ್‌ಎಲ್‌ಗೆ ಇನ್ನು 2 ಸಾವಿರ ವಿಜ್ಞಾನಿಗಳ ಅವಶ್ಯಕತೆ. 2012 ಫೆಬ್ರುವರಿಯಲ್ಲಿ 5 ಸಾವಿರ ಕಿ.ಮೀ ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ನಡೆಸಲು ಡಿಆರ್‌ಡಿಒ ಸಿದ್ಧತೆ ನಡೆಸಿದೆ ಎಂದು ತಿಳಿಸಿದರು.

ಡಿಎಫ್‌ಆರ್‌ಎಲ್‌ನ ನಿರ್ದೇಶಕ ಡಾ.ಎ.ಎಸ್. ಬಾವಾ ಪ್ರಾಸ್ತಾವಿಕವಾಗಿ ಮಾತನಾಡಿ, ಪುಡ್ ಟೆಕ್ನಾಲಜಿಯಲ್ಲಿ ಈಗಿರುವ ಪಿ.ಜಿ. ಡಿಪ್ಲೋಮಾ ಕೋರ್ಸ್ ಜೊತೆಗೆ ಸ್ನಾತಕೋತ್ತರ ಪದವಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ಎಎಸ್‌ಸಿ ಕಾಲೇಜಿನ ಕಮಾಡೆಂಟ್ ಲೆಫ್ಟಿನೆಂಟ್ ಜನರಲ್ ಕಮಲ್ ಮಾಹೆ ಮತ್ತು ನವದೆಹಲಿಯ ಡಿಆರ್‌ಡಿಒ ನಿರ್ದೇಶಕ ಡಾ.ಜಿ.ಇಳವಳಗನ್ ಅವರನ್ನು ಸನ್ಮಾನಿಸಲಾಯಿತು.

ಡಿಎಫ್‌ಆರ್‌ಎಲ್‌ನ 50 ವರ್ಷದ ಚಟುವಟಿಕೆಗಳು ಮತ್ತು ಸಾಧನೆಗಳ ಕಿರುಹೊತ್ತಿಗೆ, ರ‌್ಯಾಪಿಡ್ ಅಂಡ್ ಸೆನ್ಸಿಟವ್ ಟೆಸ್ಟ್ ಕಿಟ್- ಮಿಲ್ಕ್ ಟೆಸ್ಟಿಂಗ್ ಕಿಟ್‌ಗಳನ್ನು ಬಿಡುಗಡೆಗೊಳಿಸಲಾಯಿತು. ವಿಜ್ಞಾನಿಗಳಾದ ಡಾ.ಕೆ.ರಾಧಾಕೃಷ್ಣ, ಡಾ.ಎಚ್.ವಿ.ಬಾತ್ರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.