ADVERTISEMENT

ಪಿಕ್‌ಅಪ್ ತೂಬಿನ ಕಾಮಗಾರಿಗೆ ರೂ. 3 ಕೋಟಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 10:45 IST
Last Updated 10 ಫೆಬ್ರುವರಿ 2012, 10:45 IST

ಸಾಲಿಗ್ರಾಮ: ತಾಲ್ಲೂಕಿನ ಗಡಿಗ್ರಾಮ ಕುಪ್ಪಳ್ಳಿಯ ಹೊರ ವಲಯದಲ್ಲಿ ಇರುವ ಮುಕ್ಕನಹಳ್ಳಿ ಕೆರೆಯ ಪಿಕ್‌ಅಪ್ ತೂಬಿನ ಕಾಮಗಾರಿಗೆ ಸರ್ಕಾರ ರೂ 3ಕೋಟಿ ಬಿಡುಗಡೆ ಮಾಡಿದ್ದು ಸರ್ವೇ ಕಾರ್ಯ ಪೂರ್ಣಗೊಂಡ ನಂತರ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಶಾಸಕ ಸಾ.ರಾ.ಮಹೇಶ್ ಬುಧವಾರ ಭರವಸೆ ನೀಡಿದರು.

ಮುಕ್ಕನಹಳ್ಳಿ ಕೆರೆಯಂಗಳವನ್ನು ಆಧುನಿಕ ಯಂತ್ರದ ಮೂಲಕ ಸರ್ವೇ ಕಾರ್ಯವನ್ನು ಮುಗಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

`ಈ ಕಾಮಗಾರಿಯಿಂದ ಸುಮಾರು ಐದು ಸಾವಿರಕ್ಕೂ ಅಧಿಕ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೇಸಾಯ ಮಾಡಲು ಅನುಕೂಲವಾಗುತ್ತದೆ. ಅಲ್ಲದೇ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಕೆಲವು ಗ್ರಾಮಗಳ ರೈತರಿಗೂ ಬೇಸಾಯ ಮಾಡಲು ನೀರು ಲಭ್ಯವಾಗುತ್ತದೆ ಎಂದು ತಿಳಿಸಿದರು.

ತಾಲ್ಲೂಕಿನ ಕುಪ್ಪಳ್ಳಿ ಗ್ರಾಮದಿಂದ ಹೊಸ ಅಗ್ರಹಾರ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಿಗೆ ಈ ಯಾೀಜನೆಯಿಂದ ನೀರು ಲಭ್ಯವಾಗುತ್ತದೆ ಇದರಿಂದ ಕೊನೆಯ ಭಾಗದ ರೈತರೂ ಕೂಡಾ ನಿರಾಂತಕವಾಗಿ ಬೇಸಾಯ ಮಾಡಬಹುದು ಎಂದ ಅವರು ಇದರ ಜತೆಯಲ್ಲೇ ಗುಳುವಿನ ಅತ್ತಿಗುಪ್ಪೆ ಗ್ರಾಮದ ದೊಡ್ಡಕೆರೆಯ ತೂಬಿಗೂ 40ಲಕ್ಷ ರೂಪಾಯಿ ವೆಚ್ಚದಲ್ಲಿ ಪಿಕ್‌ಅಪ್ ನಿರ್ಮಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಬತ್ತದ ಕಣಜ ಖ್ಯಾತಿಯ ಕೆ.ಆರ್.ನಗರ ತಾಲ್ಲೂಕಿನಲ್ಲಿ ಹಲವು ಗ್ರಾಮಗಳಿಗೆ ಬತ್ತದ ಬೆಳೆ ತೆಗೆಯಲು ಸಕಾಲದಲ್ಲಿ ನೀರು ಲಭ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡು ರಾಜ್ಯ ಸರ್ಕಾರದಿಂದ ವಿವಿಧ ನೀರಾವರಿ ಯಾೀಜನೆಗಳಿಗೆ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಿಸಲಾಗಿದೆ.

ಜತೆಗೆ ಪುರಾತನ ನಾಲೆಗಳ ಆಧುನಿಕರಣ ಕಾಮಗಾರಿಗೂ ಚಾಲನೆ ಸಿಕ್ಕಿದೆ ಎಂದು ಹೇಳಿದರು. ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ತಾ.ಪಂ.ಸದಸ್ಯ ತಂದ್ರೆಕೊಪ್ಪಲು ರವಿ, ಎಪಿಎಂಸಿ ನಿರ್ದೇಶಕ ಕುಪ್ಪಳ್ಳಿಸೋಮು, ದೇವಿತಂದ್ರೆ ಗ್ರಾ.ಪಂ.ಅಧ್ಯಕ್ಷ ವೆಂಕಟರಾಮೇಗೌಡ, ಅನಿಫ್‌ಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.