ADVERTISEMENT

ಪುತ್ರ ಯತೀಂದ್ರ ಪರ ಸಿ.ಎಂ. ಮತಯಾಚನೆ

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ ಯಾಚನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 10:20 IST
Last Updated 18 ಏಪ್ರಿಲ್ 2018, 10:20 IST

ಮೈಸೂರು: ‘ನಾನು ವರುಣಾ ಕ್ಷೇತ್ರದ ಮಣ್ಣಿನ ಮಗ. ಇವನು ನನ್ನ ಮಗ. ನನ್ನನ್ನು ಎರಡು ಸಲ ಭಾರಿ ಅಂತರದಿಂದ ಗೆಲ್ಲಿಸಿರುವ ನೀವು, ಇವನನ್ನು ಅದಕ್ಕಿಂತಲೂ ದೊಡ್ಡ ಅಂತರದಿಂದ ಗೆಲ್ಲಿಸಬೇಕು’ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವರುಣಾ ಕ್ಷೇತ್ರದಲ್ಲಿ ಮಗ ಡಾ. ಯತೀಂದ್ರ ಅವರ ಪರ ಮತ ಯಾಚಿಸಿದ ಪರಿ ಇದು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೂರು ಹಂತಗಳಲ್ಲಿ ಆರು ದಿನ ಪ್ರಚಾರ ನಡೆಸಿದ್ದ ಮುಖ್ಯಮಂತ್ರಿ, ಮಂಗಳವಾರ ಇಡೀ ದಿನವನ್ನು ಮಗನ ಪರ ಮತ ಯಾಚನೆಗೆ ಮೀಸಲಿಟ್ಟರು. ಬೆಳಿಗ್ಗೆ 11ರಿಂದ ಆರಂಭವಾದ ಪ್ರಚಾರ ಅಭಿಯಾನ ರಾತ್ರಿಯವರೆಗೂ ಮುಂದುವರಿಯಿತು.

ಕ್ಷೇತ್ರ ವ್ಯಾಪ್ತಿಯ 20ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಿದರು. ಕೆಲವೆಡೆ ತೆರೆದ ಜೀಪಿನಲ್ಲಿ ರೋಡ್ ಷೋ ನಡೆಸಿದರು. ಅಲ್ಲಲ್ಲಿ ಭಾಷಣ ಮಾಡಿದರು. ಸರ್ಕಾರದ ಸಾಧನೆಗಳನ್ನು ನೆನಪಿಸಿ ಮತದಾರರ ಮನಸ್ಸನ್ನು ಭಾವನಾತ್ಮಕವಾಗಿ ಹಿಡಿದಿಡಲು ಪ್ರಯತ್ನಿಸಿದರು.

ADVERTISEMENT

‘ಈ ಕ್ಷೇತ್ರದಲ್ಲಿ ಸಂಬಂಧ ಇರುವುದು ನನಗೂ, ನಿಮಗೂ ಮಾತ್ರ. ಬೇರೆಯವರಿಗೆ ಇಲ್ಲಿನ ಜನರ ಜತೆ ಸಂಬಂಧ ಇಲ್ಲ. ಸಂಬಂಧ ಇಲ್ಲದವರ ಮಾತುಗಳನ್ನು ಕೇಳಬೇಡಿ’ ಎಂದು ಹೇಳುವ ಮೂಲಕ, ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿರುವ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಕಾಲೆಳೆದರು.

‘ನಾನು ಇಲ್ಲಿ ಸ್ಪರ್ಧಿಸದಿದ್ದರೂ ಪಕ್ಕದ ಮನೆಯಲ್ಲೇ (ಚಾಮುಂಡೇಶ್ವರಿ ಕ್ಷೇತ್ರ) ಇರುತ್ತೇನೆ. ನಿಮ್ಮ ಕಷ್ಟಗಳಿಗೆ ಸದಾ ಸ್ಪಂದಿಸುತ್ತೇನೆ’ ಎಂದರು.

ಚಾಮರಾಜನಗರ ಸಂಸದ ಆರ್‌.ಧ್ರುವನಾರಾಯಣ, ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಸಾಥ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.