ADVERTISEMENT

ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ ಆರಂಭ

​ಪ್ರಜಾವಾಣಿ ವಾರ್ತೆ
Published 13 ಜೂನ್ 2017, 9:16 IST
Last Updated 13 ಜೂನ್ 2017, 9:16 IST
ಮೈಸೂರಿನ ಸಯ್ಯಾಜಿರಾವ್‌ ರಸ್ತೆಯಲ್ಲಿರುವ ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಪೌರಕಾರ್ಮಿಕರು ಸೋಮವಾರ ಧರಣಿ ನಡೆಸಿದರು
ಮೈಸೂರಿನ ಸಯ್ಯಾಜಿರಾವ್‌ ರಸ್ತೆಯಲ್ಲಿರುವ ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಪೌರಕಾರ್ಮಿಕರು ಸೋಮವಾರ ಧರಣಿ ನಡೆಸಿದರು   

ಮೈಸೂರು: ಗುತ್ತಿಗೆ ನೇಮಕಾತಿ ಪದ್ಧತಿಯನ್ನು ರದ್ದುಪಡಿಸಿ ಸೇವೆಯನ್ನು ಕಾಯಂಗೊಳಿಸುವಂತೆ ಆಗ್ರಹಿಸಿ, ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸುವ ಮೂಲಕ ಪೌರಕಾರ್ಮಿಕರು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಮಹಾನಗರ ಪಾಲಿಕೆ ಕಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರ ಸಂಘದ ನೇತೃತ್ವದಲ್ಲಿ ಪಾಲಿಕೆಯ ಕಚೇರಿಯ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುರಿಯುತ್ತಿದ್ದ ಮಳೆಯಲ್ಲಿಯೇ ನೂರಾರು ಪೌರಕಾರ್ಮಿಕರು ಪಾದಚಾರಿ ಮಾರ್ಗದಲ್ಲಿ ಧರಣಿ ಕುಳಿತರು.

‘ಸ್ವಚ್ಛತೆಯಲ್ಲಿ ಮೈಸೂರಿಗೆ ದೇಶದಲ್ಲಿಯೇ ಮೊದಲ ಸ್ಥಾನ ಲಭಿಸಲು ಪೌರಕಾರ್ಮಿಕರೇ ಕಾರಣ. ಹೊತ್ತು ಮೂಡುವ ಮುನ್ನ ಮನೆ ಬಿಡುವ ನಾವು ಇಡೀ ನಗರವನ್ನು ಶುಚಿಗೊಳಿಸುತ್ತೇವೆ. ಬೀದಿಯ ಕಸ ಗುಡಿಸಿ, ಮನೆ–ಮನೆಗೆ ಧಾವಿಸಿ ಕಸ ಸಂಗ್ರಹಿಸುತ್ತೇವೆ. ಜನಜೀವನ ಸಹಜ ಸ್ಥಿತಿಗೆ ಬರುವ ಹೊತ್ತಿಗೆ ಕೆಲಸ ಮುಗಿಸುತ್ತೇವೆ.

ADVERTISEMENT

ಆದರೆ, ತ್ಯಾಜ್ಯ ಎತ್ತಲು, ಒಳಚರಂಡಿ ಶುಚಿಗೊಳಿಸಲು ಹಾಗೂ ಮ್ಯಾನ್‌ಹೋಲ್‌ ದುರಸ್ತಿಗೆ ಸೌಲಭ್ಯ ಕಲ್ಪಿಸಿಲ್ಲ. ಕೈಗವಸು, ಮುಖಗವಸು ಇಲ್ಲದೆ ಕಾರ್ಯನಿರ್ವಹಿಸುವ ಅನಿವಾರ್ಯತೆ ಇದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಫಾಯಿ ಕರ್ಮಚಾರಿ ಆಯೋಗ ನಡೆಸಿದ ಸಮೀಕ್ಷೆಯ ಪ್ರಕಾರ ಪೌರಕಾರ್ಮಿಕರ ಸರಾಸರಿ ಆಯಸ್ಸು 45–50. ಆಸ್ತಮಾ, ಕಾಮಾಲೆ, ಕ್ಯಾನ್ಸರ್‌, ಗ್ಯಾಂಗ್ರಿನ್‌, ಕುಷ್ಠರೋಗಕ್ಕೆ ಬಲಿಯಾಗುತ್ತಿದ್ದಾರೆ. ಕೆಲಸ ಮಾಡುವ ಸ್ಥಳದಿಂದಲೇ ಇವು ಅಂಟುತ್ತಿರುವುದೂ ನಿರೂಪಿತವಾಗಿದೆ. ಚಾಮುಂಡಿಬೆಟ್ಟದ ತಾವರೆಕಟ್ಟೆಯಲ್ಲಿ ಪೌರಕಾರ್ಮಿಕ ರೊಬ್ಬರು ಮ್ಯಾನ್‌ಹೋಲ್‌ನ ಕಲ್ಮಷ ನೀರಿನಲ್ಲಿ ಮುಳುಗಿ ದುರಸ್ತಿಗೊಳಿಸಿದ್ದನ್ನು ಇಡಿ ಸಮಾಜವೇ ನೋಡಿದೆ. ಆದರೂ, ರಾಜ್ಯ ಮತ್ತು ಕೇಂದ್ರ ಸರ್ಕಾರ ಸ್ಪಂದಿಸಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

‘ಗುತ್ತಿಗೆ ಪೌರಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸುವುದಾಗಿ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಎಲ್ಲರ ಸೇವೆಯನ್ನು ಕಾಯಂಗೊಳಿಸುವುದಾಗಿ ಭರವಸೆ ಕೂಡ ನೀಡಿತ್ತು. ಅಧಿಕಾರಕ್ಕೆ ಬಂದ ಬಳಿಕ ಗುತ್ತಿಗೆ ಪೌರಕಾರ್ಮಿಕ ಪದ್ಧತಿ ರದ್ದತಿಗೆ ಹೈಕೋರ್ಟ್‌ ಸೂಚನೆಯನ್ನು ನೀಡಿತು. ಎಲ್ಲರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016ರ ಮೇ 4ರಂದು ಈ ಕುರಿತು ಸಚಿವ ಸಂಪುಟ ತೀರ್ಮಾನವನ್ನೂ ಕೈಗೊಂಡರು. ಆದರೆ, ಈವರೆಗೆ ಇದು ಅನುಷ್ಠಾನಗೊಂಡಿಲ್ಲ’ ಎಂದು ಆರೋಪಿಸಿದರು.

‘ಗುತ್ತಿಗೆದಾರರು, ಅಧಿಕಾಶಾಹಿಯೊಂದಿಗೆ ಶಾಮೀಲಾದ ಸರ್ಕಾರ ಶೋಷಿತರ ವಿರುದ್ಧ ಹುನ್ನಾರ ನಡೆಸುತ್ತಿದೆ. ಸಚಿವ ಸಂಪುಟದ ತೀರ್ಮಾನ, ನ್ಯಾಯಾಲಯದ ಆದೇಶವನ್ನೂ ಉಲ್ಲಂಘಿಸುತ್ತಿದೆ. ಸರ್ಕಾರದ ಈ ನಿಲುವನ್ನು ವಿರೋಧಿಸಿ ರಾಜ್ಯದಾದ್ಯಂತ ಮುಷ್ಕರ ನಡೆಸುತ್ತಿದ್ದೇವೆ. ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟಾದರೆ, ಅನೈರ್ಮಲ್ಯ ಸಮಸ್ಯೆ ಸೃಷ್ಟಿಯಾದರೆ ಹಾಗೂ ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರು ಉಂಟಾದರೆ ಸರ್ಕಾರವೇ ಹೊಣೆ’ ಎಂದರು.

ಸಂಘದ ಉನ್ನತ ಸಮಿತಿಯ ಅಧ್ಯಕ್ಷ ಎನ್‌.ಮಾರ, ನಗರ ಘಟಕದ ಅಧ್ಯಕ್ಷ ಶ್ರೀನಿವಾಸ್‌, ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ನರಸಿಂಹ, ಪ್ರಧಾನ ಕಾರ್ಯದರ್ಶಿ ಮುರುಗೇಶ್‌ ಇದ್ದರು. ಪಾಲಿಕೆ ಸದಸ್ಯ ಪುರುಷೋತ್ತಮ್‌, ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್‌ ಹೋರಾಟಕ್ಕೆ ಬೆಂಬಲ ಸೂಚಿಸಿದರು.

* * 

ವೋಟ್‌ ಬ್ಯಾಂಕ್‌ ರಾಜಕಾರಣಕ್ಕೆ ದಲಿತರು ಬಲಿಯಾಗುತ್ತಿದ್ದಾರೆ. ಸಮಸ್ಯೆಗಳನ್ನು ಎಲ್ಲ  ಪಕ್ಷಗಳೂ ಉಪೇಕ್ಷೆ ಮಾಡುತ್ತಿವೆ. ಪೌರಕಾರ್ಮಿಕರ ವಿಚಾರದಲ್ಲಿ ಸರ್ಕಾರ ಹೊಣೆಗೇಡಿತನ ಪ್ರದರ್ಶಿಸುತ್ತಿದೆ
ವಿ.ಶೈಲೇಂದ್ರ
ಪಾಲಿಕೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.