ADVERTISEMENT

ಬಡಾವಣೆ ಒಳರಸ್ತೆ ದೊಡ್ಡದಾಗಿರಲಿ: ಶಾಸಕ

ಶೀಘ್ರ ಪತ್ರ ಬರೆಯಲು ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 6:09 IST
Last Updated 19 ಡಿಸೆಂಬರ್ 2013, 6:09 IST

ಕೆ.ಆರ್.ನಗರ: ದೇಶದಲ್ಲಿಯೇ ಕೆ.ಆರ್.ನಗರ ಮಾದರಿ ನಗರವಾಗಿದೆ. ಇಲ್ಲಿ ಹುಟ್ಟಿಕೊಳ್ಳುತ್ತಿರುವ ಹೊಸ ಬಡಾವಣೆಗಳ ರಸ್ತೆಗಳು 40ಅಡಿಗಳಿಗಿಂತ ಕಡಿಮೆ ಇರಬಾರದು. ಇದಕ್ಕಾಗಿ ಸೂಕ್ತ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜು ಅವರಿಗೆ ಶಾಸಕ ಸಾ.ರಾ.ಮಹೇಶ್ ಬುಧವಾರ ಸೂಚಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.

ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಕೆ.ಆರ್‌.ನಗರ ದೇಶದಲ್ಲಿಯೇ ಮಾದರಿ ನಗರವಾಗಿದೆ. ಅಂದು ರಚಿಸಿದ ಬಡಾವಣೆಗಳಲ್ಲಿನ ಎಲ್ಲ ರಸ್ತೆಗಳು 30 ಅಡಿಗಿಂತ ಹೆಚ್ಚಿಗೆ ಇವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ಬಡಾವಣೆಗಳಲ್ಲಿ ಕೇವಲ 30ಅಡಿಗಳಿಗಿಂತ ಕಡಿಮೆ ಅಳತೆಯ ರಸ್ತೆಗಳು ಬಿಡಲಾಗುತ್ತಿದೆ. ಇದರಿಂದ ಪಾರಂಪಾರಿಕ ನಗರದ ಹೆಸರಿಗೆ ಕಳಂಕವಾಗುತ್ತಿದೆ.

ಆದ್ದರಿಂದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ಬಡಾವಣೆಗಳಲ್ಲಿ ಕನಿಷ್ಟ 40 ಅಡಿಗಳ ರಸ್ತೆ ಇರಬೇಕು ಎಂಬ ಆದೇಶ ಹೊರಡಿಸಲು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಬೇಕು. ಒಂದು ಬಾಡವಣೆಯಿಂದ ಮತ್ತೊಂದು ಬಡಾವಣೆಗೆ ಹೋಗಲು ಸಂಪರ್ಕ ರಸ್ತೆ ಬಿಡಬೇಕಾಗುತ್ತದೆ. ಆದರೆ, ಬಡಾವಣೆ ರಚಿಸುವವರು ಇನ್ನೊಂದು ಬಡಾವಣೆಗೆ ಹೋಗಲು ರಸ್ತೆಯನ್ನೇ ಬಿಡುತ್ತಿಲ್ಲ. ಅಲ್ಲದೇ ಸಂಪರ್ಕ ಇಲ್ಲದ ಬಡಾವಣೆಗಳಿಗೂ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಇದರಿಂದ ಒಳಚರಂಡಿ ಕಾಮಗಾರಿಗೆ ತೊಡಕಾಗಿದೆ ಎಂದರು.

ಪುರಸಭೆ ವ್ಯಾಪ್ತಿಯಲ್ಲಿನ ಆಶ್ರಯ ಯೋಜನೆಯಲ್ಲಿ 250 ನಿವೇಶನಗಳಿವೆ. ನಿವೇಶನ ಕೋರಿ ಸುಮಾರು 2050ಅರ್ಜಿಗಳು ಬಂದಿದ್ದವು. ಅವುಗಳೆಲ್ಲವೂ ಪರಿಶೀಲಿಸಿ 1050ಅರ್ಹ ಅರ್ಜಿದಾರರನ್ನು ಗುರುತಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನಾಗಶೆಟ್ಟಿ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸಾ.ರಾ.ಮಹೇಶ್ ಅವರು, ಅರ್ಹ ಫಲಾನುಭವಿಗಳಿಗೆ ನಿವೇಶನ ಸಿಗಬೇಕು ಎನ್ನುವುದು ನಮ್ಮ ಬಯಕೆ.  ಅರ್ಹ 1050ರಲ್ಲಿ ಅನರ್ಹರು ನುಸುಳಿಲ್ಲ ಎನ್ನುದಕ್ಕೆ ಮತ್ತೊಮ್ಮೆ ಅವರ ಮನೆಗೆ ತೆರಳಿ ಪರಿಶೀಲಿಸಬೇಕು. ನಂತರ ಲಾಟರಿ ಮೂಲಕ ಫಲಾನುಭವಗಳನ್ನು ಆಯ್ಕೆಮಾಡಲಾಗುತ್ತದೆ. ಇಲ್ಲಿ ಯಾರ ಒತ್ತಡವೂ ನಡೆಯುವುದಿಲ್ಲ ಎಂದರು.

ತಾಲ್ಲೂಕಿನಲ್ಲಿ ಬಿಪಿಎಲ್ ಪಡಿತರ ಚೀಟಿ ಕೋರಿ 11,878 ಅರ್ಜಿಗಳು ಬಂದಿವೆ. ಅವುಗಳಲ್ಲಿ 435 ಪಡಿತರ ಚೀಟಿ ಈಗಾಗಲೇ ವಿತರಿಸಲಾಗಿದೆ. ಉಳಿದವುಗಳು ಪರಿಶೀಲನೆಯಲ್ಲಿವೆ ಎಂದು ಆಹಾರ ಇಲಾಖೆ ಅಧಿಕಾರಿ ಹನುಮಂತೇಗೌಡ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಜ.14ರೊಳಗಾಗಿ ಎಲ್ಲ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ಒದಗಿಸಬೇಕು ಎಂದು ಸೂಚಿಸಿದರು.

ಕ್ಷಮೆ ಕೋರಿದ ನಿರ್ದೇಶಕ: ಕರ್ನಾಟಕ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳ ತ್ರೈಮಾಸಿಕ ಸಭೆ ಪ್ರಾರಂಭವಾಗುತ್ತಿದ್ದಂತೆ ಇಲ್ಲಿನ ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ್ ಅವರು ಶಾಸಕರಲ್ಲಿ ಕ್ಷಮಾಪಣೆ ಕೋರಿದ ಘಟನೆ ನಡೆಯಿತು.  ಟಾರ್ಪಾಲು ವಿತರಣೆ ಯೋಜನೆ ಹೊಸದಾಗಿರುವುದರಿಂದ ಗೊಂದಲವಾಗಿ ರೈತರಿಂದ ಪ್ರತಿಭಟನೆ ಎದುರಿಸಬೇಕಾಯಿತು. ದಯವಿಟ್ಟು ಕ್ಷಮಿಸಬೇಕು. ಮತ್ತೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇನೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಜೆ.ದ್ವಾರಕೀಶ್, ಕಲ್ಪನಾ ಧನಂಜಯ್, ಪುಷ್ಪಲತಾ ಸಿ.ಪಿ.ರಮೇಶ್, ನಳಿನಾಕ್ಷಿ ವೆಂಕಟೇಶ್, ಸುಮಿತ್ರ ಗೋವಿಂದರಾಜು, ರಾಜಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾದಿಕ್ ಖಾನ್, ಉಪಾಧ್ಯಕ್ಷೆ ಶಕುಂತಲಾ ರಮೇಶ್, ಇಒ ಬಸವರಾಜು ಮತ್ತು ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.