ADVERTISEMENT

ಬಸವನಗಿರಿ ಹಾಡಿಗೆ ಬೇಕು ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 7:40 IST
Last Updated 5 ಫೆಬ್ರುವರಿ 2011, 7:40 IST

ಎಚ್.ಡಿ. ಕೋಟೆ: ಗಿರಿಜನರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೋಟ್ಯಂತರ  ರೂಪಾಯಿ ಅನುದಾನವನ್ನು ಬಿಡುಗಡೆಮಾಡುತ್ತಿರುವುದು ಕೇವಲ ಮಾಧ್ಯಮಗಳಲ್ಲಿ ಮತ್ತು ಸರ್ಕಾರಿ ದಾಖಲೆಗಳಿಗೆ ಮಾತ್ರ ಸೀಮಿತವಾಗಿದೇಯೆ ಎಂಬ ಅನುಮಾನ ತಾಲ್ಲೂಕಿನ ಗಿರಿಜನರ ಪುನರ್ವಸತಿ  ಕೇಂದ್ರಗಳಲ್ಲಿ ಒಂದಾದ ಬಸವನಗಿರಿ ಹಾಡಿ ನೋಡಿದರೆ ಬರುತ್ತದೆ.

ಎನ್. ಬೇಗೂರು ಅರಣ್ಯ ವ್ಯಾಪ್ತಿಯಲ್ಲಿದ್ದ 34 ಗಿರಿಜನ ಕುಟುಂಬ ಹಾಗೂ ಕಬಿನಿ ಹಿನ್ನೀರಿನಲ್ಲಿ  ಮುಳುಗಡೆಯಾದ ವನ್ಯ ಭಾಗದಲ್ಲಿದ್ದ 40 ಕುಟುಂಬಗಳನ್ನು ಒಟ್ಟಿಗೆ ಸೇರಿಸಿ ಬಸವನಗಿರಿ ಎ ಹಾಡಿಯಲ್ಲಿ  2004ರಲ್ಲಿ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲಾಯಿತು.

ಇಲ್ಲಿ ವಾಸಿಸುವ ಒಂದೊಂದು ಕುಟುಂಬಕ್ಕೆ ಸರ್ಕಾರವು 10ಲಕ್ಷ ರೂ ಬಿಡುಗಡೆ ಮಾಡಿದೆ ಎಂದು  ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳು ಹೇಳುತ್ತಾರೆ. ವಸ್ತು ಸ್ಥಿತಿ ಗಮನಿಸಿದಾಗ ಪ್ರತಿ ಕುಟುಂಬಕ್ಕೆ ಒಂದು  ಮನೆ ಒಂದು ಜೊತೆ ಎತ್ತು, ಒಂದು ಹೆಕ್ಟೇರ್ ಭೂಮಿಯನ್ನು ಮಾತ್ರ ನೀಡಲಾಗಿದೆ. ಆದರೆ ಈ ಭೂಮಿಯಲ್ಲಿ ಬೆಳೆದ ಬೆಳೆ ಕಾಡು ಪ್ರಾಣಿಗಳ ಹಾವಳಿಗಳಿಂದ ಉಳಿದ ಆಹಾರ ಪದಾರ್ಥಗಳನ್ನು  ಒಕ್ಕಣೆ ಮಾಡಲೂ ಸಹ ಕಣ ಇಲ್ಲ.

ಇಲ್ಲಿ ವ್ಯವಸಾಯವನ್ನು ಬಿಟ್ಟರೆ ಬೇರಾವುದೇ ಕೈ ಕಸುಬುಗಳನ್ನು ಮಾಡಲು ಅವಕಾಶವಿಲ್ಲ. ಇಲ್ಲಿಯ  ಗಿರಿಜನರು ಕುಕ್ಕೆ, ಮೊರ, ಜೇನು ಹಸಿಯುವುದು ಹಾಗೂ ಕಿರು ಅರಣ್ಯ ಉತ್ಪಾದನೆಯ ಶೇಖರಣೆ ಇವರ  ಕಸುಬಾಗಿದೆ. ಇವುಗಳನ್ನು ಮಾಡಲು ಯಾವುದೇ ಸವಲತ್ತುಗಳನ್ನು ಸರ್ಕಾರ ನೀಡಿಲ್ಲ. ಇದರಿಂದ ಗಿರಿಜನರು  ಆಹಾರವನ್ನು ಅರಸಿ ಕೂಲಿ ಕೆಲಸಕ್ಕಾಗಿ ಕೊಡಗು ಹಾಗೂ ಇನ್ನಿತರಕಡೆ ವಲಸೆ ಹೋಗುತ್ತಿದ್ದಾರೆ.

ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ ಸ್ವಲ್ಪಮಟ್ಟಿಗೆ ಅನುಕೂಲವಿದೆ. ಆಸ್ಪತ್ರೆ ಇಲ್ಲವೇ ಇಲ್ಲ. ಆರೋಗ್ಯ ಹದಗೆಟ್ಟಲ್ಲಿ ತಾಲ್ಲೂಕು ಕೇಂದ್ರಕ್ಕೆ ಬರಬೇಕು. ಚರಂಡಿ ವ್ಯವಸ್ಥೆಯೂ ತೀರ ಹದಗೆಟ್ಟಿದೆ. ಮಳೆಗಾಲದಲ್ಲಿ ಹರಿದುಬರುವ ನೀರಿನ ಜೊತೆ ಹಾವು, ಚೇಳು ಹಾಗೂ ಹುಳ ಹುಪ್ಪಡಿಗಳು ಮನೆಯೊಳಗೆ ಹರಿದು ಬರುತ್ತವೆ ಎಂದು ಗಿರಿಜನರು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಾರೆ.

ಅಧಿಕಾರಿಗಳ ಬೇಜವಾಬ್ದಾರಿತನ ಎಷ್ಟಿದೆ ಎಂದರೆ 2004ನೇ ಇಸವಿಯಲ್ಲಿ ಕಾಮಗಾರಿಯನ್ನು ಜೇನುಕುರುಬ, ಯರವ, ಸೋಲಿಗ ಹಾಗೂ ಕಾಡುಕುರುಬ ಎಂಬ ನಾಲ್ಕು ಪಂಗಡಗಳಿಗೂ ಪ್ರತ್ಯೇಕವಾಗಿ 4 ಛಾವಡಿಗಳನ್ನು ನಿರ್ಮಿಸಲು ಪ್ರಾರಂಬಿಸಿದ ಛಾವಡಿಗಳ ನಿರ್ಮಾಣ ಇನ್ನೂ ಪ್ರಾರಂಭದ ಹಂತದಲ್ಲಿರುವುದೇ ಇದಕ್ಕೆ ಸಾಕ್ಷಿ, ಈ ಛಾವಡಿಗಳಲ್ಲಿ ಗಿರಿಜನರು ತಮ್ಮ ನಡುವಿನ ನ್ಯಾಯ, ಹಬ್ಬಹರಿದಿನಗಳ ಕಾರ್ಯಕ್ರಮಗಳು ಹಾಗೂ ಮುದುವೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಲು ಬಳಸಿಕೊಳ್ಳುತ್ತಾರೆ. ಇವುಗಳ ನಿರ್ಮಾಣಕ್ಕೆ ಒಟ್ಟು ನಾಲ್ಕು ಛಾವಡಿಗಳಿಂದ 24 ಲಕ್ಷ ಬಿಡುಗಡೆಯಾಗಿದ್ದರೂ ಕಾಮಗಾರಿ ಅರ್ಧದಷ್ಟೂ ನಡೆದಿಲ್ಲ ಎಂದು ಅಲ್ಲಿನ ನಿವಾಸಿ ಗ್ರಾಮ ಪಂಚಾಯಿತಿ ಸದಸ್ಯ ಜಿ.ಸ್ವಾಮಿಯ ಆರೋಪಿಸುತ್ತಾರೆ.

ಈ ಬಗ್ಗೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ ಚಂದ್ರಶೇಖರ್‌ರವರನ್ನು ಪ್ರಶ್ನಿಸಿದಾಗ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಸರಿಯಾದ ಮಾಹಿತಿ ನೀಡದೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ ಎಂದು ತಮ್ಮ ಅಸಹಯಾಕತೆಯನ್ನು ವ್ಯಕ್ತಪಡಿಸಿದರು.

ಇದಕ್ಕೆ ಸಂಬಂದಿಸಿದಂತೆ ಸಮಗ್ರ ಗಿರಿಜನ ಅಭಿವೃದ್ಧಿಯ ಅಧಿಕಾರಿ ಲಕ್ಷೀಕಾಂತನಾಯಕರವರನ್ನು ಸಂಪರ್ಕಿಸಿದಾಗ ‘ಈ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಇದು ಅರಣ್ಯ ಇಲಾಖೆಯವರಿಗೆ ಸಂಬಂಧಿಸಿದ ವಿಚಾರ’ ಎಂದರು. ನಂತರ ಕರೆ ಮಾಡಿ ಈ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದವರು ನಿರ್ಮಿಸುತ್ತಿದ್ದಾರೆ, ಅವರಿಗೆ ಹೇಳಿದ್ದೇನೆ ನಾಲ್ಕುದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಕಾಡಿನ ಮಧ್ಯೆ ವಾಸಿಸುತ್ತಿದ್ದ ಇವರುಗಳನ್ನು ಸ್ಥಳಾಂತರಿಸಿ ಪ್ರತಿ ಕುಟುಂಬಕ್ಕೆ ಕನಿಷ್ಠ 10ಲಕ್ಷಕ್ಕೂ ಹೆಚ್ಚು ಹಣವನ್ನು ವಿನಿಯೋಗಿಸಿದ್ದರೂ ಇವರುಗಳ ಸಮಸ್ಯೆ ಇನ್ನೂ ಜೀವಂತವಾಗಿರುವುದು ನಾಗರೀಕರು ತಲೆ ತಗ್ಗಿಸುವಂತೆ ಮಾಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.