ADVERTISEMENT

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 9:15 IST
Last Updated 13 ಜೂನ್ 2011, 9:15 IST

ಕೆ.ಆರ್.ನಗರ: ಪಟ್ಟಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಭಾನುವಾರ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಿಸಲಾಯಿತು.

ಪಟ್ಟಣದ ಡಾ.ಬಿ.ಆರ್.ಅಂಬೇ ಡ್ಕರ್ ವೃತ್ತದಲ್ಲಿ ವಿದ್ಯಾರ್ಥಿಗಳ ಜಾಥಾ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಟಿ.ಜವರೇಗೌಡ ಚಾಲನೆ ನೀಡಿದರು. ಪಟ್ಟಣದ ಮೈಸೂರು ರಸ್ತೆ, ಮುಸ್ಲಿಂ ಬ್ಲಾಕ್, ವಿ.ವಿ.ರಸ್ತೆ, ಸಿ.ಎಂ.ರಸ್ತೆ ಮೂಲಕ ಪುರಸಭೆ ಬಯಲು ರಂಗಮಂದಿರದ ವರೆಗೆ ವಿದ್ಯಾರ್ಥಿಗಳ ಜಾಥಾ ಏರ್ಪಡಿಸಲಾಗಿತ್ತು.

ಪುರಸಭೆ ಮುಖ್ಯಾಧಿಕಾರಿ ನಾಗಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ, ಕಾರ್ಮಿಕ ಇಲಾಖೆ ಅಧಿಕಾರಿ ಶಿವಪ್ಪ, ದೈಹಿಕ ಶಿಕ್ಷಣ ಸಂಯೋಜಕ ಪಿ.ಮಧುರದಾಸ್, ಶಿಕ್ಷಕರಾದ ಡಿ.ಕೆ.ಜಗದೀಶ್, ರಮೇಶ್, ಅಡವೀಶ್, ಪಟ್ಟಣದ ವಿವಿಧ ಶಾಲೆಯ ವಿದ್ಯಾರ್ಥಿ ಗಳು ಜಾಥಾದಲ್ಲಿ ಭಾಗವಹಿಸಿದ್ದರು.

ನಾಮಕಾವಸ್ಥೆಯಾದ ಕಾರ್ಯಕ್ರಮ: ಇದು ಹೇಳಿ ಕೇಳಿ ಸರ್ಕಾರಿ ಕಾರ್ಯಕ್ರಮ. ಅದು ಭಾನುವಾರ ಆಚರಣೆ ಮಾಡುವುದೆಂದರೆ ಇನ್ನು ಬೇರೆ ಹೇಳಬೇಕಾಗಿಲ್ಲ. ಜಿಲ್ಲಾಧಿಕಾರಿ ಆದೇಶ ಪಾಲನೆ ಮಾಡಲು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಪಟ್ಟಣದಲ್ಲಿ ಜಾಥಾ ಹೋದರೆ ಸಾಕು ಎನ್ನುವಂತಹ ಕಾರ್ಯಕ್ರಮ ಇದಾಗಿತ್ತು.

ಪಟ್ಟಣದ ವಿವಿಧ ರಸ್ತೆಗಳಲ್ಲಿ ಜಾಥಾ ತೆರಳಿ ಒಂದು ಗಂಟೆ ಅವಧಿಯಲ್ಲಿ ಇಡೀ ಕಾರ್ಯಕ್ರಮ ಮುಗಿಸಲಾಯಿತು. ಇಂತಹ ಕಾರ್ಯಕ್ರಮಗಳ ಮೂಲಕ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಡಿ ಎಂಬ ಸಂದೇಶ ಸಾರ್ವಜನಿಕರಿಗೆ ಅವಶ್ಯಕವಾಗಿರುತ್ತದೆ. ಆದರೆ ಇಲ್ಲಿ ಇದ್ಯಾವುದು ಆಗಲೇ ಇಲ್ಲ.
 
ಕೆಲವು ವಿದ್ಯಾರ್ಥಿಗಳು ಮಾತ್ರ ಜಾಥಾ ಉದ್ದಕ್ಕೂ ಏನೇ ಬರಲಿ ಒಗ್ಗಟ್ಟಿರಲಿ, ಒಂದೇ ಮಾತರಂ ಎಂಬ ಘೋಷಣೆ ಕೂಗುತ್ತಿದ್ದರು. ಇದರಿಂದ ದಾರಿ ಹೋಕರು ಮಕ್ಕಳೇಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕುತೂಹಲ ದಿಂದ ವೀಕ್ಷಿಸುತ್ತಿದ್ದರು. ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿ ಕೊಳ್ಳಬೇಡಿ ಎಂಬ ಸಂದೇಶ ರವಾನಿ ಸಲು ಜನಪ್ರತಿನಿಧಿಗಳು, ಅಧಿಕಾರಿಗಳ ಹಿತನುಡಿಗೆ ಸಭೆ ಏರ್ಪಡಿಸ ಬಹುದಿತ್ತು ಎಂಬ ಅಭಿಪ್ರಾಯ ಕೇಳಿಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.