ಮೈಸೂರು: ‘ಬಾಲಾಪರಾಧಿಗಳ ಸುಧಾರಣೆ ಮಾಡುವುದಕ್ಕಿಂತ ಬಾಲಾಪರಾಧವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ನಮ್ಮ ಪ್ರಧಾನ ಗುರಿಯಾಗಬೇಕು’ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎನ್,ಚಂದ್ರಶೇಖರ್ ಅಭಿಪ್ರಾಯಪಟ್ಟರು.
ನಗರದ ವಿದ್ಯಾವರ್ಧಕ ಕಾನೂನು ಕಾಲೇಜು ಹಾಗೂ ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ, ಕನ್ನಡ ಕಾನೂನು ವೇದಿಕೆ ವತಿಯಿಂದ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಬಾಲಾಪರಾಧಿಗಳ ಸುಧಾರಣೆ ಕುರಿತು ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶದಲ್ಲಿ ತುಂಬಿ ತುಳುಕುತ್ತಿರುವ ಬಡತನ ಮತ್ತು ಶಿಕ್ಷಣದ ಕೊರತೆಯಿಂದಾಗಿ ಬಾಲಾಪರಾಧಗಳು ಹೆಚ್ಚಾಗುತ್ತಿವೆ. ಬಾಲಾಪ ರಾಧವನ್ನು ಸುಧಾರಿಸುವ ಮುನ್ನ ಮಕ್ಕಳಿಗೆ ಹಾಗೂ ಯುವ ಜನತೆಗೆ ಉತ್ತಮವಾದ ಶಿಕ್ಷಣವನ್ನು ನೀಡಬೇಕು. ಅವರ ಬಡತನವನ್ನು ಮೊದಲು ತಡೆಗಟ್ಟಬೇಕು. ಅಲ್ಲದೆ ಹೆತ್ತವರಿಂದ ಆತ್ಮೀಯ ಹಾರೈಕೆ ಸಿಗುವಂತಾಗಬೇಕು. ಹಾಗಾದಾಗ ಮಾತ್ರ ಬಾಲಾಪರಾಧದ ನಿರ್ಮೂಲನೆ ಸಾಧ್ಯ. ಆ ನಿಟ್ಟಿನಲ್ಲಿ ಸಮಾಜ ಮತ್ತು ಕಾನೂನು ವ್ಯವಸ್ಥೆಗಳು ಅವಿರತವಾಗಿ ದುಡಿಯಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಪ್ರಥಮ ನಿರ್ದೇಶಕ ಜಿ.ದಕ್ಷಿಣಾಮೂರ್ತಿ ಆಶಯ ಭಾಷಣ ಮಾಡಿದರು. ವಿದ್ಯಾವರ್ಧಕ ಸಂಘದ ಗೌರವ ಅಧ್ಯಕ್ಷ ಗುಂಡಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಬಿ.ವಾಸುದೇವ, ಮೈಸೂರು ಮುಖ್ಯ ನ್ಯಾಯ ದಂಡಾಧಿಕಾರಿ ಸಿ.ಆರ್.ರಾಜಾ ಸೋಮಶೇಖರ್ ಮತ್ತು ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.