ADVERTISEMENT

ಬಿಕೋ ಎನ್ನುತ್ತಿವೆ ಪಕ್ಷಗಳ ಕಚೇರಿಗಳು

ಕಾಂಗ್ರೆಸ್‌ ಕಚೇರಿ ಭಣಭಣ; ಬಿಜೆಪಿ, ಜೆಡಿಎಸ್‌ ಕಚೇರಿಗೆ ಬೀಗ

​ಪ್ರಜಾವಾಣಿ ವಾರ್ತೆ
Published 14 ಮೇ 2018, 8:28 IST
Last Updated 14 ಮೇ 2018, 8:28 IST
ಬಿಜೆಪಿ ಕಚೇರಿಗೆ ಭಾನುವಾರ ಬೀಗ ಹಾಕಿತ್ತು
ಬಿಜೆಪಿ ಕಚೇರಿಗೆ ಭಾನುವಾರ ಬೀಗ ಹಾಕಿತ್ತು   

ಮೈಸೂರು: ವಿಧಾನಸಭಾ ಚುನಾವಣೆ ಪ್ರಯುಕ್ತ ಚಟುವಟಿಕೆಗಳ ತಾಣವಾಗಿದ್ದ ಕಾಂಗ್ರೆಸ್‌ ಕಚೇರಿ ಕಾರ್ಯಕರ್ತರಿಲ್ಲದೆ ಬಿಕೋ ಎನ್ನುತ್ತಿದ್ದರೆ, ಬಿಜೆಪಿ ಮತ್ತು ಜೆಡಿಎಸ್‌ ಕಚೇರಿಗಳು ಭಾನುವಾರ ಬಂದ್‌ ಆಗಿದ್ದವು.

ರೈಲು ನಿಲ್ದಾಣದ ಬಳಿ ಇರುವ ಕಾಂಗ್ರೆಸ್‌ ನಗರ ಹಾಗೂ ಗ್ರಾಮಾಂತರ ಜಿಲ್ಲಾ ಘಟಕದ ಕಚೇರಿಯಲ್ಲಿ ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ, ಕಾರ್ಯದರ್ಶಿ ಡೇರಿ ವೆಂಕಟೇಶ್‌ ಸೇರಿದಂತೆ 4–5 ಮಂದಿ ಇದ್ದರು. ಕೆಲ ಮುಖಂಡರು ಬಂದು ಹೋಗುತ್ತಿದ್ದರು.

ನಗರ ವ್ಯಾಪ್ತಿಯ ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮತದಾನದ ಕುರಿತು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಹಾಗೂ ಬೂತ್‌ ಅಧ್ಯಕ್ಷರಿಂದ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ಮೂರ್ತಿ ನಿರತರಾಗಿದ್ದರು.

ADVERTISEMENT

‘ಯಾವ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ, ಕಾಂಗ್ರೆಸ್‌ಗೆ ಯಾವ ಬೂತ್‌ಗಳಿಂದ ಎಷ್ಟು ಮತಗಳು ಬಂದಿರಬಹುದು ಎಂಬ ಮಾಹಿತಿಯನ್ನು ಶನಿವಾರ ರಾತ್ರಿಯಿಂದಲೇ ಸಂಗ್ರಹಿಸಲಾಗುತ್ತಿದೆ. ಇದರ ಆಧಾರದ ಮೇಲೆ ಅಭ್ಯರ್ಥಿಗಳ ಗೆಲುವು– ಸೋಲಿನ ಬಗ್ಗೆ ನಿರ್ಧರಿಸಲಾಗುತ್ತದೆ. ಈ ಎಲ್ಲ ಮಾಹಿತಿಯನ್ನು ಕೆಪಿಸಿಸಿಗೆ ರವಾನಿಸುತ್ತಿದ್ದೇವೆ’ ಎಂದು ಆರ್‌.ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದ ಮೂರೂ ಕ್ಷೇತ್ರಗಳ ಅಭ್ಯರ್ಥಿಗಳು ಗೆಲುವಿಗಾಗಿ ಅವಿರತವಾಗಿ ಶ್ರಮಿಸಿದ್ದರು. ಹಗಲು ರಾತ್ರಿ ಎನ್ನದೆ ಮತದಾರರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಮತದಾನ ಮುಕ್ತಾಯಗೊಂಡಿದ್ದರಿಂದ ಎಲ್ಲರೂ ನಿರಾಳರಾಗಿದ್ದಾರೆ.

ಇಟ್ಟಿಗೆಗೂಡಿನಲ್ಲಿರುವ ಬಿಜೆಪಿ ಕಚೇರಿಯನ್ನು ಮುಚ್ಚಲಾಗಿತ್ತು. ಅದರ ಮುಂದೆ ಪ್ರವಾಸಿಗರ ವಾಹನ ನಿಂತಿತ್ತು. ಆ ವಾಹನದಲ್ಲಿ ಬಂದಿದ್ದ ಪ್ರವಾಸಿಗರು ಕಚೇರಿಯ ಮೆಟ್ಟಿಲ ಮೇಲೆ ಕುಳಿತು ಊಟ ಮಾಡುತ್ತಿದ್ದ ದೃಶ್ಯ ಕಂಡುಬಂತು.

‘ಭಾನುವಾರದಂದು ಬಿಜೆಪಿ ಕಚೇರಿ ತೆಗೆಯುವುದಿಲ್ಲ. ಎಲ್ಲರೂ ಚುನಾವಣಾ ಕೆಲಸದಲ್ಲಿ ತೊಡಗಿದ್ದರು. ಮತದಾನ ಮುಗಿದಿದ್ದರಿಂದ ಎಲ್ಲರೂ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಾರೆ’ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ತಿಳಿಸಿದರು.

ಜೆಡಿಎಸ್‌ ಕಚೇರಿ ಬೀಗ ಹಾಕಿತ್ತು. ಕಾರ್ಯಕರ್ತರೂ ಅತ್ತ ಸುಳಿಯಲಿಲ್ಲ.

ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಪೂಜೆ

ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗಾಗಿ ಕಾರ್ಯಕರ್ತರು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಭಾನುವಾರ ವಿಶೇಷ ಪೂಜೆ ಸಲ್ಲಿಸಿದರು. ನಗರದ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ. ಇದಕ್ಕಾಗಿ ದೇವಿಗೆ ವಿಶೇಷ ಪೂಜೆ ಮಾಡಿಸಲಾಗಿದೆ. ರಾಜ್ಯದಲ್ಲೂ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕಾರ್ಯಕರ್ತರೊಬ್ಬರು ತಿಳಿಸಿದರು.

‘ಚುನಾವಣೆ; ಟ್ರಾವೆಲ್ಸ್‌ಗಳಿಗೆ ತೊಂದರೆ ಆಗಿಲ್ಲ’

‘ಚುನಾವಣೆಯಿಂದಾಗಿ ಟ್ರಾವೆಲ್ಸ್‌ಗಳಿಗೆ ಯಾವುದೇ ತೊಂದರೆ ಉಂಟಾಗಲಿಲ್ಲ. ಹುಣಸೂರಿನಲ್ಲಿ ನಡೆದ ಜೆಡಿಎಸ್‌ ಸಮಾವೇಶ, ಸಂತೆಮರಹಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶಕ್ಕೆ ಆಯಾ ಪಕ್ಷಗಳ ಕಾರ್ಯಕರ್ತ ರನ್ನು ಕರೆದುಕೊಂಡು ಹೋಗುವ ಅವಕಾಶ ನನಗೆ ಸಿಕ್ಕಿತ್ತು. ಸಿದ್ದರಾಮಯ್ಯ ಅವರು ಮೈಸೂರಿಗೆ ಬಂದರೆ ಅಥವಾ ರೋಡ್‌ ಷೋ ನಡೆಸಿದರೆ ಮಾತ್ರ ವಾಹನ ದಟ್ಟಣೆ ಕಂಡುಬರುತ್ತಿತ್ತು. ಇದರಿಂದ ನಮಗೆ ಸ್ವಲ್ಪ ಸಮಸ್ಯೆ ಆಗುತ್ತಿತ್ತು. ಚುನಾವಣಾ ಕಾವು ಇಳಿದಿದೆ. ಯಾವ ಪಕ್ಷ ಅಧಿಕಾರದ ಗದ್ದುಗೆ ಹಿಡಿಯುತ್ತದೆಯೋ ನೋಡಬೇಕು’ ಎಂದು ಬಸ್‌ ಚಾಲಕ ಪ್ರದೀಪ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.