ಮೈಸೂರು: ಮೈಸೂರು– ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಡಗೂರು ಎಚ್. ವಿಶ್ವನಾಥ್ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ಮಧ್ಯಾಹ್ನ 1.50ಕ್ಕೆ ವಾಹನದಲ್ಲಿ ಧಾವಿಸಿದ ವಿಶ್ವನಾಥ್ ಅವರು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್‌ಪ್ರಸಾದ್, ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಕಾಂಗ್ರೆಸ್‌ನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ಪ್ರದೀಪ್ ಅವರೊಡಗೂಡಿ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಿ. ಶಿಖಾ ಅವರಿಗೆ ನಾಮಪತ್ರ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಪ್ರಚಾರ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಪ್ರಚೋದನಕಾರಿ ಭಾಷಣದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷವು ಶಾಂತಿಯುತ ಮಾರ್ಗದಲ್ಲಿ ಪ್ರಚಾರದಲ್ಲಿ ತೊಡಗಿಕೊಳ್ಳಲಿದೆ. ಶಾಂತಿಯುತ ಚುನಾವಣೆಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಾಫರ್ ಷರೀಫ್ ಅವರು ಜೆಡಿಎಸ್‌ನಿಂದ ಸ್ಪರ್ಧಿಸಲಿದ್ದಾರೆಯೇ ಎಂಬುದಕ್ಕೆ ಪತ್ರಿಕ್ರಿಯಿಸಿದ ಅವರು ಕಾಂಗ್ರೆಸ್ ಪಕ್ಷವನ್ನು 50 ವರ್ಷಗಳಿಂದ ಬೆಳೆಸಿದವರು ಷರೀಫ್. ಅವರು ತಳಮಟ್ಟದಿಂದ ಬಂದವರು ಮತ್ತು ಅಪಾರ ಅನುಭವ ಉಳ್ಳವರಾಗಿದ್ದರಾರೆ. ಅವರು ಜೆಡಿಎಸ್ ಸೇರುವ ನಿರ್ಧಾರ ತಳೆಯಲು ಸಾಧ್ಯ ಇಲ್ಲ. ಇದೆಲ್ಲ ಜೆಡಿಎಸ್‌ನವರು ಸೃಷ್ಟಿಸಿರುವ ಊಹಾಪೋಹಗಳು ಅಷ್ಟೇ ಎಂದರು.
ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲರೂ ಎದುರಾಳಿಗಳೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೂವರು ನಾಮಪತ್ರ ಸಲ್ಲಿಕೆ: ಕಾಂಗ್ರೆಸ್ ಅಭ್ಯರ್ಥಿ ಮತ್ತು ಪಕ್ಷೇತರ ಅಭ್ಯರ್ಥಿಗಳಾದ ತಿಲಕ್‌ನಗರದ ಬಿ.ಎಸ್. ಕುಮಾರಸ್ವಾಮಿ ಮತ್ತು ಡಿ.ಜಿ. ಹಳ್ಳಿಯ ಎಂ.ಎಸ್. ಪ್ರವೀಣ್ ಸೇರಿದಂತೆ ಮೂವರು ಅಭ್ಯರ್ಥಿಗಳು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ವಿಶ್ವನಾಥ್ ಆಸ್ತಿ ವಿವರ
ಕ್ಷೇತ್ರ: ಮೈಸೂರು–ಕೊಡಗು
ಶಿಕ್ಷಣ: ಬಿ.ಎ, ಎಲ್.ಎಲ್.ಬಿ
ಸ್ಥಿರಾಸ್ತಿ: ₨ 1.95 ಕೋಟಿ
ಚರಾಸ್ತಿ: ₨ 19.76 ಲಕ್ಷ
ಚಿನ್ನ: 25 ಗ್ರಾಂ ( ₨ 68 ಸಾವಿರ )
ಒಟ್ಟು ಆಸ್ತಿ: ₨ 2.14 ಕೋಟಿ
ಬ್ಯಾಂಕ್ ಹಣ: ₨ 15.08 ಲಕ್ಷ
ನಗದು: ₨ 2 ಲಕ್ಷ
ವಾಹನ: ಇಲ್ಲ
ಸಾಲ: ಇಲ್ಲ
ಕ್ರಿಮಿನಲ್ ಮೊಕದ್ದಮೆ: ಇಲ್ಲ
ಕಾಂಗ್ರೆಸ್ ಅಭ್ಯರ್ಥಿ ವಿಶ್ವನಾಥ್ ಪತ್ನಿ: ಎನ್. ಶಾಂತಮ್ಮ
ಸ್ಥಿರಾಸ್ತಿ: ₨ 40 ಲಕ್ಷ
ಚರಾಸ್ತಿ: ₨ 47.10 ಲಕ್ಷ
ಚಿನ್ನ: 475 ಗ್ರಾಂ ( ₨ 13.97 ಲಕ್ಷ )
ಬೆಳ್ಳಿ: 2 ಕಿಲೋ ಗ್ರಾಂ ( ₨ 90 ಸಾವಿರ)
ಬ್ಯಾಂಕ್ ಹಣ: ₨ 31.23 ಲಕ್ಷ
ನಗದು: ₨ 1 ಲಕ್ಷ
ಒಟ್ಟು ಆಸ್ತಿ: ₨ 87.10 ಲಕ್ಷ
ಕ್ರಿಮಿನಲ್ ಮೊಕದ್ದಮೆ: ಇಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.