ADVERTISEMENT

ಬುಡಕಟ್ಟು ಸಂಶೋಧನೆಗೆ ಪರಿಣಾಮಕಾರಿ ಹೆಜ್ಜೆ

ಪ್ರತಿ ವರ್ಷ 100 ಮಾನವಶಾಸ್ತ್ರ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 6:54 IST
Last Updated 5 ಜೂನ್ 2013, 6:54 IST

ಮೈಸೂರು: ರಾಜ್ಯಗಳಲ್ಲಿ ವಿಶ್ವವಿದ್ಯಾನಿಲಯಗಳ ಮಾನವಶಾಸ್ತ್ರ ವಿಭಾಗಗಳ ಜೊತೆ ಸಂಯೋಜನೆ ಮುಖಾಂತರ ಬುಡಕಟ್ಟುಗಳ ಸಂಶೋಧನೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ನವದೆಹಲಿಯ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಮುಂದಾಗಿದೆ.

ಬುಡಕಟ್ಟು ಸಂಶೋಧನೆಗಳಿಗೆ ಮಾನವಶಾಸ್ತ್ರ ವಿಭಾಗಗಳ ಕೊಡುಗೆ ಅವಶ್ಯವಾಗಿದೆ. ಕ್ಷೇತ್ರಕಾರ್ಯದಲ್ಲಿ ಆಳವಾದ ಅನುಭವ ಹೊಂದಿರುವ ವಿದ್ಯಾರ್ಥಿಗಳನ್ನು ಹೊರತರಲು ಮಾನವಶಾಸ್ತ್ರ ಸಹಕಾರಿಯಾಗಿದೆ. ಜತೆಗೆ ಯಾವುದೇ ಒಂದು ಜಾತಿಯನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕಾದರೆ ಅಂತಹ ಜನಾಂಗದವರ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನವನ್ನು ಮಾನವಶಾಸ್ತ್ರಜ್ಞರಿಂದಲೇ ಕೈಗೊಂಡು ವರದಿ ಸಲ್ಲಿಸುವಂತೆ ಮಂತ್ರಾಲಯವು ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆಗಳಿಗೆ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆಯು ಪ್ರತಿ ವರ್ಷ 50 ರಿಂದ 100 ಸ್ನಾತಕೋತ್ತರ ಮಾನವಶಾಸ್ತ್ರ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯದ ಮುಖಾಂತರ ಸಂದರ್ಶನ ನಡೆಸಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ನೇಮಕವಾದವರಿಗೆ ಸೂಕ್ತ ತರಬೇತಿ ನೀಡಿ, ರಾಜ್ಯದಾದ್ಯಂತ ಬುಡಕಟ್ಟು ಜನಾಂಗದವರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಆರೋಗ್ಯ ಮತ್ತು ಜೀವನಶೈಲಿ ಬಗ್ಗೆ ಸಂಶೋಧನೆ ನಡೆಸಲು ತೊಡಗಿಸಲಾಗುತ್ತದೆ. ತಿಂಗಳಿಗೆ 8 ರಿಂದ 10 ಸಾವಿರ ರೂಪಾಯಿ ವೇತನ ನೀಡಲಾಗುತ್ತದೆ.

`ಕರ್ನಾಟಕ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆಯು ಮೈಸೂರು ವಿಶ್ವವಿದ್ಯಾನಿಲಯ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಪತಿಗಳೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಿದೆ. ಮಾನವಶಾಸ್ತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮ ಮಟ್ಟದಲ್ಲಿ ಅಥವಾ ಬುಡಕಟ್ಟು ಜನರು ವಾಸಿಸುವ ಹಾಡಿಗಳಲ್ಲಿ ಅಥವಾ ಅತಿ ಹಿಂದುಳಿದ ಪ್ರದೇಶದಲ್ಲಿ ವಾಸಿಸುವ ಜನಾಂಗದವರೊಂದಿಗೆ ಬೆರೆತು ಕ್ಷೇತ್ರಕಾರ್ಯ ಕೈಗೊಳ್ಳುವಂತೆ ನಿರ್ದೇಶಿಸಲು ವಿಶ್ವವಿದ್ಯಾನಿಲಯಗಳಿಗೆ ಮನವಿ ಮಾಡಲಾಗಿದೆ. ನಮ್ಮ ಸಂಸ್ಥೆಯಲ್ಲಿ ಕಳೆದ ಒಂದು ವರ್ಷದಿಂದ 20 ವಿದ್ಯಾರ್ಥಿಗಳು ಕ್ಷೇತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ವಿಪುಲವಾದ ಅವಕಾಶಗಳಿದ್ದು ಮಾನವಶಾಸ್ತ್ರ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು' ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ಡಾ.ಟಿ.ಟಿ.ಬಸವನಗೌಡ.

2011ರಲ್ಲಿ ಮೈಸೂರಿನಲ್ಲಿ ಸ್ಥಾಪನೆಯಾದ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆಯು ಸಂಶೋಧನೆ, ಮೌಲ್ಯಮಾಪನ, ತರಬೇತಿ, ವಿಚಾರ ಸಂಕಿರಣ, ಸಾಕ್ಷ್ಯಚಿತ್ರ ನಿರ್ಮಾಣ ಮುಂತಾದ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಆದಿವಾಸಿಗಳ ಕುರಿತು ಕ್ಷೇತ್ರಕಾರ್ಯ ಕೈಗೊಳ್ಳಲು ಆಸಕ್ತಿ ಇರುವ ಮಾನವಶಾಸ್ತ್ರ ವಿದ್ಯಾರ್ಥಿಗಳು ನೇರವಾಗಿ `ನಿರ್ದೇಶಕರ ಕಚೇರಿ, ಕರ್ನಾಟಕ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆ, ನಂ.1540, ಅನಿಕೇತನ ರಸ್ತೆ, ಕುವೆಂಪುನಗರ, ಮೈಸೂರು. ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ: 0821-2560274/ 275 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.