ADVERTISEMENT

ಬೆಳೆಗಾರರ ಸಮಸ್ಯೆಗೆ ಸ್ಪಂದನೆ: ಸಂಸದ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 8:20 IST
Last Updated 10 ಡಿಸೆಂಬರ್ 2013, 8:20 IST

ಹುಣಸೂರು: ತಂಬಾಕು ಬೆಲೆ ಕುಸಿದಿದ್ದರೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ರೈತ ಸಂಘಟನೆಗಳು ಮಾಡುತ್ತಿರುವ ಆರೋಪ ನಿರಾಧಾರ ಎಂದು ಸಂಸದ ಎಚ್‌. ವಿಶ್ವನಾಥ್‌ ಹೇಳಿದರು.

ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯಲ್ಲಿ ರೈತರು ಮಾರುಕಟ್ಟೆ ಬಹಿಷ್ಕರಿಸಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದರು. ಜನಪ್ರತಿನಿಧಿಗಳು ತಂಬಾಕು ಬೆಳೆಗಾರರಿಗೆ ಸ್ಪಂದಿಸುತ್ತಿರುವುದರಿಂದ ರಾಜ್ಯದಲ್ಲಿ ಅತ್ಯುತ್ತಮ ಹರಾಜು ಮಾರುಕಟ್ಟೆ ಹೊಂದಲು ಸಾಧ್ಯವಾಗಿದೆ.

ಇಷ್ಟಲ್ಲದೇ ರೈತನ ಮೇಲೆ ನಡೆಯುತ್ತಿದ್ದ ನಿರಂತರ ಶೋಷಣೆ ಹತ್ತಿಕ್ಕಲು ಸಿ.ಸಿ. ಕ್ಯಾಮೆರಾವನ್ನು ಅಳವಡಿಸುವ ಮೂಲಕ ಲಂಚದ ಹಾವಳಿ ನಿಯಂತ್ರಿಸುವ ಕ್ರಮ ತೆಗೆದುಕೊಂಡಿದೆ. ಇವೆಲ್ಲವೂ ರೈತನಿಗಾಗಿ ಜನಪ್ರತಿನಿಧಿಗಳು ಕೈಗೊಂಡಿರುವ ಕೆಲಸ ಅಲ್ಲವೆ ಎಂದು ಪ್ರಶ್ನಿಸಿದರು.

ವಾಣಿಜ್ಯ ಸಚಿವರ ಭೇಟಿ: ತಂಬಾಕು ಬೆಲೆ ಕುರಿತಂತೆ ಮುಖ್ಯಮಂತ್ರಿಗಳ ನಿಯೋಗ ಡಿ.15ಮತ್ತು 16ರಂದು  ಕೇಂದ್ರ ವಾಣಿಜ್ಯ ಸಚಿವ ಆನಂದ ಶರ್ಮ ಅವರನ್ನು ಭೇಟಿ ಮಾಡಲಿದೆ. ನಿಯೋಗದಲ್ಲಿ ತಂಬಾಕು ಬೆಳೆಯುವ ಕ್ಷೇತ್ರಗಳ ಶಾಸಕರು ಮತ್ತು ಸಂಸದರು ಸೇರಿದಂತೆ ಭೇಟಿ ಮಾಡಿ ಸ್ಥಳಿಯ ತಂಬಾಕು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಿ ಸೂಕ್ತ ಬೆಲೆ ಕೊಡಿಸುವ  ಜವಾಬ್ದಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹೊರಲಿದೆ ಎಂದರು.

ತಂಬಾಕು ಬೆಳೆ ದರ ವಿಚಾರದಲ್ಲಿ ಪ್ರತಿ ವರ್ಷವೂ ರೈತರು ಹರಾಜು ಮಾರುಕಟ್ಟೆ ಮುಚ್ಚುವ ಕೆಲಸ ಮಾಡುತ್ತಲೇ ಬಂದಿದ್ದಾರೆ. ಮುಗ್ಧ ರೈತರಿಗೆ ವಿವಿಧ ಸಂಘಟನೆಗಳು ಅವರ ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತಿವೆ. ಈ ಬಗ್ಗೆ ವಿಷಾದವಿದ್ದು, ಸಂಘಟನೆಗಳು ತಂಬಾಕು ಬೆಳೆಗಾರನನ್ನು ವಿನಾಕಾರಣ ದಿಕ್ಕು ತಪ್ಪಿಸಿ ಧರಣಿಗೆ ಪ್ರಚೋದನೆ ನೀಡುವುದನ್ನು ಕೈ ಬಿಟ್ಟು ಮಾರುಕಟ್ಟೆ ನಡೆಸಲು ಸಹಕಾರ ನೀಡಲಿ ಎಂದು ಮನವಿ ಮಾಡಿದರು.

ದೇಶಿಯ ಮಾರುಕಟ್ಟೆ: ಆಂಧ್ರಪ್ರದೇಶದಲ್ಲಿ ಉತ್ಪತ್ತಿಯಾಗುತ್ತಿರುವ ತಂಬಾಕು ದೇಶಿಯ ಬಳಕಗೆ ಸೀಮಿತವಾಗಿದೆ. ಹೀಗಾಗಿ ಆ ರಾಜ್ಯದ ತಂಬಾಕಿನ ಮಾರಾಟ ಮತ್ತು ದರ ನಿಗದಿ ದೇಶದ ರೂಪಾಯಿ ಹಾಗೂ ಬೇಡಿಕೆ ಮೇಲೆ ಮಾರುಕಟ್ಟೆ ಅವಲಂಬಿಸಿದೆ. ಆದರೆ, ರಾಜ್ಯದ ತಂಬಾಕು ಉತ್ತಮ ಗುಣಮಟ್ಟ ಹೊಂದಿದ್ದು, ಈ ತಂಬಾಕು ಅಂತರಾಷ್ಟ್ರೀಯ ಮಾರುಕಟ್ಟೆ ಅವಲಂಬಿಸಿದೆ. ಸ್ಥಳಿಯ ವಿವಿಧ ಕಂಪನಿಗಳು ತಂಬಾಕು ಖರೀದಿಸಬೇಕಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್‌ ಏರಿಳಿತಗಳು ಹೆಚ್ಚಾಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಸ್ಥಿರ ದರ ನೀಡಲು ತೊಂದರೆ ಎದುರಾಗುತ್ತಿದೆ ಎಂದರು.

ವಿಶ್ವನಾಥ್‌ರೊಂದಿಗೆ ರೈತ ಸಂಘದವರು ಮಾತುಕತೆ ನಡೆಸಿದ ಬಳಿಕ ಚಳವಳಿ ಹಿಂಪಡೆದಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್‌ ತಿಳಿಸಿದ್ದಾರೆ. ಮಂಗಳವಾರದಿಂದ  ಮಾರುಕಟ್ಟೆಯಲ್ಲಿ ಭಾಗವಹಿಸಲು ರೈತರಿಗೆ ಮನವಿ ಮಾಡಿದ್ದಾರೆ. 15ರ ನಂತರವೂ ತಂಬಾಕು ಬೆಲೆ ಹೆಚ್ಚಾಗದಿದ್ದರೆ ಮತ್ತೆ ಹೋರಾಟಕ್ಕೆ ಬೀದಿಗಿಳಿಯಲಿದೆ ಎಂದು ಎಚ್ಚರಿಸಿದ್ದಾರೆ.

ಕ್ಷೇತ್ರದ ಶಾಸಕ ಮಂಜುನಾಥ್‌, ತಂಬಾಕು ಮಂಡಳಿ ಸದಸ್ಯ ಬಿ.ಎನ್‌.ಜಯರಾಂ ಮತ್ತು ಕಾಂಗ್ರೆಸ್‌ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT