ADVERTISEMENT

ಬೋಗಾದಿ ಗ್ರಾಮ ಪಂಚಾಯಿತಿ ಅಕ್ರಮ ಖಾತೆ ಪತ್ತೆ!

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 11:05 IST
Last Updated 11 ಫೆಬ್ರುವರಿ 2011, 11:05 IST

ಮೈಸೂರು: ಮುಡಾ ವ್ಯಾಪ್ತಿ– ಹಾಗೂ ಕಂದಾಯ ಇಲಾಖೆಗೆ ಸೇರಿದ ಭೂಮಿಗೆ ಗ್ರಾಮ ಪಂಚಾಯಿತಿ  ವತಿಯಿಂದ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದು ಗುರುವಾರ ಬೆಳಕಿಗೆ ಬಂದಿದೆ.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಬೋಗಾದಿ ಗ್ರಾಮ ಪಂಚಾಯಿತಿಗೆ ದೀಢಿರ್ ಭೇಟಿ   ನೀಡಿ ಪರಿಶೀಲಿಸಿದಾಗ ಈ ಅಕ್ರಮ ಖಾತೆಯ ಬಣ್ಣ ಬಯಲಾಯಿತು. ಅಧಿಕಾರಿಗಳು ತಬ್ಬಿಬಾದರು. ಗೈರು ಹಾಜರಾಗಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್‌ಗೆ ನೋಟಿಸ್ ಜಾರಿ ಮಾಡಲು ಸೂಚಿಸಿದರು. ಬೋಗಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2,575 ಕ್ಕೂ ಹೆಚ್ಚು ಖಾತೆದಾರರಿದ್ದು, ಅವುಗಳಲ್ಲಿ  ಹಲವಾರು ಖಾತೆಗಳು ಅಕ್ರಮ ಎಂಬುದು ಪರಿಶೀಲನೆ ವೇಳೆ ಗೊತ್ತಾಯಿತು.

2,500ಕ್ಕೂ ಹೆಚ್ಚು ಖಾತೆಗಳಲ್ಲಿ ಮೂಲ ದಾಖಲೆಗಳನ್ನು ಪರಿಶೀಲಿಸಿ, ಅಕ್ರಮಗಳ ತನಿಖೆ ನಡೆಸಿ ಒಂದು ತಿಂಗಳೊಳಗೆ ವರದಿ ನೀಡುವಂತೆ ಅಧಿಕಾರಿಯೊಬ್ಬರನ್ನು ನೇಮಿಸಿದರು.ಪರಿಶೀಲನೆ ವೇಳೆ ಖಾತೆದಾರರಿಂದ ಸಂಗ್ರಹ ಮಾಡಿದ್ದ ಶುಲ್ಕ ಹಾಗೂ ಇತರೆ ದಾಖಲೆಗಳು ಇರಲಿಲ್ಲ. ಸ್ವಚ್ಛತಾ ಆಂದೋಲನಕ್ಕೆ ಒಂದು ಲಕ್ಷ ರೂಪಾಯಿ ವೆಚ್ಚ ಮಾಡಿರುವ ಲೆಕ್ಕ ತೋರಿಸಲಾಗಿತ್ತು. ಆದರೆ ಆಂದೋಲನ ನಡೆಸಿರುವ ದಾಖಲೆ ಇರಲಿಲ್ಲ. ಇದರಿಂದ ಕೋಪಗೊಂಡ ಸಚಿವರು ಗ್ರಾಪಂ ಕಾರ್ಯದರ್ಶಿ ಕೆಂಡಗಣ್ಣಸ್ವಾಮಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.  ವಿವಿಧ ಯೋಜನೆಗಳಿಗೆ ಒಳಪಡುವಂತಹ ರೂ. 18 ಲಕ್ಷಗಳ ಕ್ರಿಯಾ ಯೋಜನೆಗೆ ಸರಿಯಾದ ಖರ್ಚು ವೆಚ್ಚದ ಮಾಹಿತಿ ಇಲ್ಲದೆ ಇರುವುದರಿಂದ ಅಧಿಕಾರಿ ನೇಮಿಸಿ ವರದಿ ನೀಡಲು ಸೂಚಿಸಿದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮೈಸೂರು ಜಿಲ್ಲೆ 26ನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಶಿಕ್ಷಕರ ಕೊರತೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ವಿಷಯವಾರು ಶಿಕ್ಷಕರ ಕೊರತೆ ಇರುವುದರಿಂದ ಹಾಗೂ ಉತ್ತಮ ಫಲಿ ತಾಂಶಕ್ಕಾಗಿ ಪರೀಕ್ಷೆ ವೇಳೆ ಎರಡು ತಿಂಗಳು ಕಾಲ ಶಿಕ್ಷಕರ ಕೊರತೆ ಇರುವ ಶಾಲೆಗಳು ಗುತ್ತಿಗೆ ಆಧಾರದಲ್ಲಿ ನಿವೃತ್ತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಇವರಿಗೆ ಸರ್ಕಾರದ ವತಿಯಿಂದ ಗೌರವಧನ ನೀಡಲಾಗುವುದು ಎಂದರು. ಜಿ.ಪಂ. ಸಿಇಓ ಸತ್ಯವತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ವಿಜಯಲಕ್ಷ್ಮಿ, ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಹಾಗೂ ಇತರರು ಇದ್ದರು.

ವೈದ್ಯರ ನೇಮಕಕ್ಕೆ ಅಧಿಕಾರ
ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕೊರತೆ ಇರುವ ವೈದ್ಯರು, ನರ್ಸ್‌ಗಳು ಮತ್ತು ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗೆ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.

ಮೈಸೂರು ತಾಲ್ಲೂಕು ಜಯಪುರ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಉದ್ಫಾಟಿಸಿ ಗುರುವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ಆಸ್ಪತ್ರೆಗಳು ನೇಮಿಸಿಕೊಂಡ ಸಿಬ್ಬಂದಿಗೆ ಸರ್ಕಾರವೇ ಸಂಬಳ ನೀಡಲಿದೆ. ಇದರಿಂದ ರೋಗಿ ಗಳಿಗೆ ಅನುಕೂಲವಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವೈದ್ಯರು ಇಲ್ಲದಿದ್ದ ಸಂದರ್ಭದಲ್ಲಿ ಸಮೀಪದ ಖಾಸಗಿ ಆಸ್ಪತ್ರೆಯ ವೈದ್ಯರಿಂದ ಹೆರಿಗೆ ಮಾಡಿಸಿದರೆ ಅವರಿಗೆ ಒಂದು ಸಾವಿರ ರೂಪಾಯಿ ಗೌರವ ಧನ ನೀಡಲಾಗುವುದು ಎಂದು ಹೇಳಿದರು.

ಜಯಪುರ ಕೇಂದ್ರ ಸುತ್ತಮುತ್ತ ಸುಮಾರು 15 ಹಳ್ಳಿಗಳಿದ್ದು, ಜಯಪುರ ಸೇರಿದಂತೆ ಒಟ್ಟು ಜನ ಸಂಖ್ಯೆ 16877 ಇದೆ.  ಜಯಪುರಕ್ಕೆ ಹೊಂದಿಕೊಂಡಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಪ್ರಸ್ತುತ ಜಯಪುರ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿರುವುದರಿಂದ ಇಲ್ಲಿ ಸೌಲಭ್ಯವನ್ನು ಸುತ್ತ ಮುತ್ತಲಿನ ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ನಾಗರಾಜರಾವ್, ಶಾಸಕ ಸಿದ್ದರಾಜು, ಜಿಲ್ಲಾ ಪಂಚಾಯತಿ ಸದಸ್ಯ ಜಿ. ಎಂ. ಜವರನಾಯಕ್, ತಾಲ್ಲೂಕು ಪಂಚಾಯತಿ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.