ADVERTISEMENT

ಮಠಗಳು ಜಾತೀಯತೆಯಿಂದ ಹೊರಬರಲಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 5:40 IST
Last Updated 16 ಜುಲೈ 2012, 5:40 IST

ನಂಜನಗೂಡು: ದೇಶದಲ್ಲಿ ನಾಗರಿಕತೆ ಬೆಳೆದಂತೆಲ್ಲ ಜಾತೀಯತೆಯೂ ಬೆಳೆಯುತ್ತಿರುವುದು ವಿಷಾದನೀಯ ಎಂದು ಶಾಸಕ ವಿ.ಶ್ರೀನಿವಾಸಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಕನಕದಾಸ ವಿದ್ಯಾರ್ಥಿ ನಿಲಯದಲ್ಲಿ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಶನಿವಾರ ಏರ್ಪಡಿಸಿದ್ದ ಕನಕಗುರು ಪೀಠದ ಬೀರೇಂದ್ರಪುರಿ ಸ್ವಾಮೀಜಿ 6ನೇ ಪುಣ್ಯಸ್ಮರಣೆ ಹಾಗೂ ಪುರಸಭೆ ನೂತನ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂತ ಕನಕದಾಸರು ಅಂದಿನ ದಿನಗಳಲ್ಲಿ ಸಾಹಿತ್ಯದ ಮೂಲಕ ಜಾತೀಯತೆ ವಿರುದ್ಧ ಧ್ವನಿ ಎತ್ತಿದ್ದರು. ಅದೇ ರೀತಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಲೇಖನಿ ಮೂಲಕ ಹೋರಾಡಿದ್ದರು. ವರ್ಗೀಕೃತ ಸಮಾಜ ವ್ಯವಸ್ಥೆಯಲ್ಲಿ ಜಾತೀಯತೆ ಪ್ರಬಲವಾಗಿದೆ. ಮಠಗಳು ಜಾತೀಯತೆಯಿಂದ ಹೊರಬಂದು ಸಮಾಜದ ಚಿಂತನೆ ನಡೆಸಬೇಕು. ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ತಾವು ಕೆಳವರ್ಗದ ಎಲ್ಲ ಜಾತಿಯವರಿಗೆ ರಾಜಕೀಯ ಶಕ್ತಿ ತುಂಬಲು ಶ್ರಮಿಸಿದ್ದೇನೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಸಿ.ಎಂ.ಶಂಕರ್, ಜನರ ನಂಬಿಕೆಗೆ ಚ್ಯುತಿ ಬಾರದಂತೆ ಸೇವೆ ಸಲ್ಲಿಸುವುದಾಗಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಾರುತಿ, ಪುರಸಭೆ ಉಪಾಧ್ಯಕ್ಷೆ ಎಂ.ಗಾಯತ್ರಿ, ಮುಖ್ಯಾಧಿಕಾರಿ ಡಿ.ರಮೇಶ್, ಬಿಸಿಸಿ ಅಧ್ಯಕ್ಷರಾದ ಸುಬ್ಬಣ್ಣ, ಬಿ.ಎಸ್.ಮಹದೇವಪ್ಪ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ, ಜೆಡಿಎಸ್ ಪಟ್ಟಣ ಘಟಕ ಅಧ್ಯಕ್ಷ ಎನ್.ಎಂ.ಮಂಜುನಾಥ್, ಗುತ್ತಿಗೆದಾರ ಯು.ಎನ್.ಪದ್ಮನಾಭ ರಾವ್, ಕಾಳೇಗೌಡ, ಗೋವಿಂದರಾಜು, ಮದ್ದುಮಾದೇಗೌಡ, ಎನ್.ಎಸ್. ಮಹದೇವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.