ADVERTISEMENT

ಮತದಾನದ ಜಾಗೃತಿ: ಯುವಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 8:41 IST
Last Updated 22 ಏಪ್ರಿಲ್ 2013, 8:41 IST

ಸಾಲಿಗ್ರಾಮ: `ಸಾರ್ವತ್ರಿಕ ಚುನಾವಣೆಗಳಲ್ಲಿ ಜನರು ಕಣ್ಣು, ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುವ ವ್ಯವಸ್ಥೆಗೆ ಅಂಟಿ ಕೊಳ್ಳುತ್ತಿದ್ದಾರೆ. ಇದನ್ನು ತಡೆದು ಯುವ ಸಮುದಾಯ ಮತದಾರರಲ್ಲಿ ಜಾಗೃತಿ ಮೂಡಿಸದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಸಂಕಷ್ಟದಲ್ಲಿ ಸಿಲುಕಲಿದೆ' ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಂಸ್ಥಾಪಕ ಆರ್. ಬಾಲಸುಬ್ರಹ್ಮಣ್ಯಂ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಪ್ರಜಾಪ್ರಭುತ್ವ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾನದ ಬಗ್ಗೆ ಯುವ ಸಮುದಾಯ ಉದಾಸೀನ ಮಾಡಬಾರದು.

ಇದರಿಂದ ನಿಮ್ಮ ಅಸ್ತಿತ್ವದ ಬಗ್ಗೆ ಅನುಮಾನ ಶುರುವಾಗುತ್ತದೆ. ಇದಕ್ಕೆ ಅವಕಾಶ ನೀಡದೆ ಹಕ್ಕು ಚಲಾಯಿಸಬೇಕು ಎಂದು ಸಲಹೆ ನೀಡಿದರು.

ದೇಶದ ಪ್ರತಿಯೊಂದು ಪಕ್ಷದಲ್ಲೂ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಅಭ್ಯರ್ಥಿಗಳು ಇದ್ದಾರೆ. ಅಂತಹ ಅಭ್ಯರ್ಥಿಗಳಿಗೆ ಮತ ಹಾಕಿ ದೇಶ ಮತ್ತು ರಾಜ್ಯದ ಕಾನೂನು ರಚಿಸುವಂತೆ ನಾವು ಅವಕಾಶ ನೀಡಿದರೆ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕಿ ಬರುತ್ತದೆ. ಇದಕ್ಕೆ ಯುವ         ಸಮುದಾಯ ಅವಕಾಶ ನೀಡಬಾರದು.

ಮತ ನೀಡುವಾಗ ಸಾಕಷ್ಟು  ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.ಪ್ರಾಂಶುಪಾಲರಾದ ಪ್ರಕಾಶ್, ಭಾರತಿ ಎಕ್ಕುಂಡಿ, ಪ್ರಾಧ್ಯಾಪಕರಾದ ಜ್ಯೋತಿ, ಎಂ.ಎಸ್.ಶ್ರೀನಿವಾಸ್, ಮಿರ್ಲೆ ಮೃತ್ಯುಂಜಯ, ಮಂಜುನಾಥ್, ಡಾ. ಸತೀಶ್ ಚಂದ್ರ, ಬಸವಂತಪ್ಪ ಗುದಗತ್ತಿ, ದೇವಮ್ಮಣ್ಣಿ, ಕೃಷ್ಣೇಗೌಡ, ರಾಘವೇಂದ್ರ, ವಿಷಕಂಠಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.