ADVERTISEMENT

ಮತ ಎಣಿಕೆ ಕೇಂದ್ರಗಳಿಗೆ ಬಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 14 ಮೇ 2018, 8:21 IST
Last Updated 14 ಮೇ 2018, 8:21 IST

ಮೈಸೂರು: ಜಿಲ್ಲೆಯ 11 ಕ್ಷೇತ್ರಗಳ ಮತ ಎಣಿಕೆ ನಡೆಯಲಿರುವ ಕೇಂದ್ರಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಕಾಲೇಜು ಮತ್ತು ಕೂರ್ಗಳ್ಳಿಯಲ್ಲಿರುವ ಎನ್‌ಐಇ–ಐಟಿನಲ್ಲಿ ಮತ ಎಣಿಕೆ ನಡೆಯಲಿವೆ. ಮೇ 15ರಂದು ಬೆಳಿಗ್ಗೆ 8ರಿಂದ ಎಣಿಕೆ ಕಾರ್ಯ ಆರಂಭವಾಗಲಿದೆ.

ಕೃಷ್ಣರಾಜ, ನರಸಿಂಹರಾಜ, ಚಾಮುಂಡೇಶ್ವರಿ, ಹುಣಸೂರು, ನಂಜನಗೂಡು, ತಿ.ನರಸೀಪುರ ಮತ್ತು ಎಚ್‌.ಡಿ.ಕೋಟೆ ಕ್ಷೇತ್ರಗಳ ಮತ ಎಣಿಕೆ ಮಹಾರಾಣಿ ಕಾಲೇಜಿನಲ್ಲಿ ನಡೆಯಲಿದ್ದರೆ, ಕೆ.ಆರ್‌.ನಗರ, ಪಿರಿಯಾಪಟ್ಟಣ, ವರುಣಾ ಮತ್ತು ಚಾಮರಾಜ ಕ್ಷೇತ್ರಗಳ ಮತ ಎಣಿಕೆ ಎನ್‌ಐಇ ಕಾಲೇಜಿನಲ್ಲಿ ನಡೆಯಲಿದೆ.

ಮತದಾನ ಶನಿವಾರ ಸಂಜೆ 6 ಗಂಟೆಗೆ ಕೊನೆಗೊಂಡಿತ್ತು. ಆದರೆ, ಕೆಲವು ಮತಗಟ್ಟೆಗಳಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ರಾತ್ರಿಯವರೆಗೂ ಮತದಾನ ನಡೆದಿತ್ತು. ಇದರಿಂದ ಕೊನೆಯ ಬ್ಯಾಚ್‌ನ ಮತಯಂತ್ರಗಳು ಮತ ಎಣಿಕೆ ಕೇಂದ್ರ ತಲುಪುವಾಗ ಭಾನುವಾರ ಬೆಳಗಿನ ಜಾವ 3 ಗಂಟೆಯಾಗಿತ್ತು. ಆ ಬಳಿಕ ಅವುಗಳನ್ನು ಸ್ಟ್ರಾಂಗ್‌ರೂಂನಲ್ಲಿ ಜೋಡಿಸಿಡಲಾಗಿದೆ.

ADVERTISEMENT

ಸ್ಟ್ರಾಂಗ್‌ರೂಂಗಳ ಬಾಗಿಲು ಮತ್ತು ಕಿಟಕಿಗಳನ್ನು ಸೀಲ್‌ ಹಾಕಿ ಭದ್ರಪಡಿಸಲಾಗಿದೆ. ಎರಡೂ ಕೇಂದ್ರಗಳಲ್ಲಿ 100ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಕಟ್ಟಡಗಳ ಸುತ್ತ ಪ್ರಖರ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ.

ಮೂರು ಹಂತಗಳ ಭದ್ರತೆ: ಮತ ಎಣಿಕೆ ಕೇಂದ್ರಗಳಿಗೆ ಮೂರು ಹಂತಗಳ ಭದ್ರತೆ ಒದಗಿಸಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆ (ಕೆಎಸ್‌ಆರ್‌ಪಿ) ಸಿಬ್ಬಂದಿ ಮೊದಲ ಎರಡು ಹಂತಗಳ ಭದ್ರತೆ ಒದಗಿಸಿದ್ದರೆ, ನಗರ ಪೊಲೀಸರು ಮೂರನೇ ಹಂತದ ಭದ್ರತೆ ಒದಗಿಸಿದ್ದಾರೆ. ಒಟ್ಟಾರೆ 120 ಮಂದಿ ಮೂರು ಪಾಳಿಗಳಲ್ಲಿ ಮತ ಎಣಿಕೆ ಕೇಂದ್ರಗಳನ್ನು ಕಾಯುತ್ತಿದ್ದಾರೆ.

ಪ್ರತಿ ವಿದ್ಯುನ್ಮಾನ ಮತಯಂತ್ರಗಳಿಗೆ ಕೋಡ್‌ ಸಂಖ್ಯೆ ನೀಡಲಾಗಿದೆ. ಮತಗಟ್ಟೆಗಳು ಮತ್ತು ಕ್ಷೇತ್ರಗಳ ಆಧಾರದಲ್ಲಿ ಅವುಗಳನ್ನು ಸ್ಟ್ರಾಂಗ್‌ರೂಂಗಳಲ್ಲಿ ಜೋಡಿಸಿಡಲಾಗಿದೆ.

ಈ ಬಾರಿ ವಿವಿಪ್ಯಾಟ್‌ ಯಂತ್ರಗಳನ್ನು ಬಳಸಿರುವ ಕಾರಣ ಅವುಗಳಿಗೂ ಕೋಡ್‌ ಸಂಖ್ಯೆ ನೀಡಲಾಗಿದೆ. ಯಾವುದಾದರೂ ಮತಗಟ್ಟೆಯ ಮತ ಎಣಿಕೆ ವೇಳೆ ಗೊಂದಲ ಕಂಡುಬಂದರೆ ವಿವಿಪ್ಯಾಟ್‌ ಯಂತ್ರಗಳನ್ನು ಹೊರತೆಗೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.