ADVERTISEMENT

ಮಹಿಳೆಗೆ ಚಿಂತನಾಶಕ್ತಿ ಬಂದಿದೆ: ಡಾ.ಇಂದಿರಾ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2011, 9:50 IST
Last Updated 9 ಮಾರ್ಚ್ 2011, 9:50 IST

ಸರಗೂರು: ಮಹಿಳೆ ಕಂಪ್ಯೂಟರ್ ಇದ್ದ ಹಾಗೆ. ಮಹಿಳೆಗೆ ಹೆಚ್ಚು ಯೋಚನೆ ಮಾಡುವ ಶಕ್ತಿ ಇದೆ. ಮಹಿಳೆ ಮನೆಗೆ ಸೀಮಿತವಾಗದೆ ಹೊರಗಡೆ ಕೆಲಸ ಮಾಡಿ ಬದುಕುವುದನ್ನು ಕಲಿತಿದ್ದಾಳೆ ಎಂದು ಸ್ತ್ರೀಪರ ಚಿಂತಕಿ ಡಾ.ಇಂದಿರಾ ತಿಳಿಸಿದರು.

ಪಟ್ಟಣದ ಮೈರಾಡ ಸಂಸ್ಥೆಯಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು ಲಿಂಗ ಅನುಪಾತ ಪಟ್ಟಣ ಪ್ರದೇಶದಲ್ಲಿ ಹೆಚ್ಚು ಆಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಇದು ಕಡಿಮೆ. ಮುಂದಿನ ದಿನದಲ್ಲಿ ಹೆಣ್ಣು ಮಕ್ಕಳಿಗೂ ವಧು ದಕ್ಷಿಣೆ ನೀಡಿ ಮದುವೆ ಆಗುವಕಾಲ ಬರುತ್ತದೆ. ಈವಾಗ  ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದೆ. ಭ್ರೂಣ ಹತ್ಯೆ ಜಾಸ್ತಿ ಆಗುತ್ತಿದೆ ಅದನ್ನು ತಡೆಗಟ್ಟಬೇಕು ಎಂದರು.

ಗ್ರಾಮಾಂತರ ಪ್ರದೇಶದಲ್ಲಿ ಶಿಶುಮರಣ ಜಾಸ್ತಿ ಆಗುತ್ತಿದೆ. ಮಹಿಳೆ ಸರಿಯಾದ ಸಮಯಕ್ಕೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯದೆ ಈ ರೀತಿ ಆಗುತ್ತಿದೆ. ಪಟ್ಟಣದ ಮಹಿಳೆ ಆಗಿಂದಾಗ್ಗೆ ವೈದ್ಯರ ಬಳಿಹೋಗಿ ಸಮಯಕ್ಕೆ  ಸರಿಯಾಗಿ ವೈದ್ಯರಿಂದ ಚಿಕಿತ್ಸೆ ಪಡೆದು ತನ್ನ ಮಗುವನ್ನು ಉಳಿಸು ಕೊಳ್ಳುತ್ತಾಳೆ ಎಂದು ಸಲಹೆ ನೀಡಿದರು.

ಪಟ್ಟಣ, ಗ್ರಾಮಾಂತರ ಪ್ರದೇಶದ ಮಹಿಳೆ ಎನ್ನುವ ಭಾವನೆ ಹೋಗ ಬೇಕು. ಗ್ರಾಮಾಂತರ ಜೀವನಕ್ಕೂ  ಪಟ್ಟಣ ಜೀವನಕ್ಕೂ ತುಂಬಾ ವ್ಯತ್ಯಾಸ ಇದೆ. ಹಳ್ಳಿಯ ಜೀವನವೇ ಉತ್ತಮ. ಪಟ್ಟಣ ಜೀವನ ಬಹಳ ಕಷ್ಟ.   ಪಟ್ಟಣದಲ್ಲಿ ಒಬ್ಬ ವ್ಯಕಿ ಒಂದು ದಿನ ಖರ್ಚುಮಾಡುವ ಹಣವನ್ನು ಹಳ್ಳಿ ಯಲ್ಲಿ ಒಂದು ತಿಂಗಳು ಜೀವನ  ನಡೆಸಬಹುದು ಎಂದು ತಿಳಿಸಿದರು.

ವಕೀಲ ಎಂ.ಎನ್.ರವಿಶಂಕರ್ ಮಾತನಾಡಿ ನಾವು ಹುಟ್ಟುವಾಗಲೆ ಕಾನೂನು ಶುರುವಾಗಿದೆ. ನಾವು  ಇರುವವರಗೂ ಕಾನೂನು ನಮ್ಮಲ್ಲಿ ಇರುತ್ತದೆ. ನೆಮ್ಮದಿ ಇರಬೇಕಾದರೆ ಜ್ಞಾನ ಇರಬೇಕು. ಬದುಕು ಜೋಡಿ ಎತ್ತು ಇದ್ದಹಾಗೆ. ಗ್ರಾಮಾಂತರ ಪ್ರದೇಶದವರಿಗೆ ಆತ್ಮವಿಶ್ವಾಸ ಇದೆ. ಪಟ್ಟಣ ಪ್ರದೇಶದವರಿಗೆ ಆತ್ಮವಿಶ್ವಾಸ  ಕೊರತೆ ಇದೆ. ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡಿದರೆ ಕ್ರಿಯಾಶೀಲರಾಗಿರುತ್ತಾರೆ. ಉತ್ತಮ ಶಿಕ್ಷಣ ನೀಡಲು ಸರ್ಕಾರ  ಮತ್ತು ಸರ್ಕಾರೇತರ ಸಂಸ್ಥೆಗಳು ಸಹಾಯ ಹಸ್ತ ನೀಡುತ್ತಿದೆ ಇದರಿಂದ ಉನ್ನತ ಶಿಕ್ಷಣ ಪಡೆಯಬಹುದು ಎಂದರು.

ಕಾರ್ಯಕ್ರಮವನ್ನು ಜಿಲ್ಲಾ ಪಂಚಾ ಯಿತಿ ಸದಸ್ಯೆ ಪದ್ಮಬಸವರಾಜು ಉದ್ಘಾಟಿಸಿ ಮಾತನಾಡಿದರು. ಸರಗೂರು ಸೌಜನ್ಯ ಗ್ಯಾಸ್‌ನ ಸೋಮಶೇಖರ್ ಗ್ಯಾಸ್ ಮತ್ತು ಸ್ಟೌ ಯಾವ ರೀತಿ ಉಯೋಗಿಸ ಬೇಕು  ಎಂಬುದರ ಬಗ್ಗೆ ಈ ಕಾರ್ಯ ಕ್ರಮದಲ್ಲಿ ಮಹಿಳೆಯರಿಗೆ ತಿಳಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ  ಬೆಳ ಗಮ್ಮರಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಮೈರಾಡ ಸಂಸ್ಥೆಯ ವಿಲಿಯಂ ಡಿಸೋಜ, ಜ್ಞಾನಜ್ಯೋತಿ ಸಂಪನ್ಮೂಲ ಕೇಂದ್ರದ ನಾರಾಯಣಶೆಟ್ಟಿ, ವತ್ಸಲ,  ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಶಂಭುಲಿಂಗನಾಯಕ. ಮುಳ್ಳೂರು ಗ್ರಾ.ಪಂ.ಉಪಾಧ್ಯಕ್ಷೆ ಭಾಗ್ಯಸಿದ್ದ ರಾಜು, ಹಂಚೀಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಸಿದ್ದನಾಯಕ ಮತ್ತು ಮಹಿಳಾ ಸಂಘದ ಸದಸ್ಯರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.