ಹುಣಸೂರು: ದೇಶ ರಕ್ಷಣೆಗೆ ಗಡಿಭಾಗದಲ್ಲಿ ಹಗಲಿರುಳು ಸೇವೆ ಸಲ್ಲಿಸಿ, ನಿವೃತ್ತರಾದ ಸೈನಿಕರ ಕ್ಷೇಮಾಭಿವೃದ್ಧಿಗೆ ನಾಲ್ಕೈದು ದಶಕಗಳ ಹಿಂದೆ ನಿರ್ಮಿಸಿದ ಚೌಡಿಕಟ್ಟೆ ಸೈನಿಕರ ವಸತಿ ಕಾಲೋನಿ ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.
ತಾಲ್ಲೂಕಿನ ರತ್ನಾಪುರಿ ಗ್ರಾಮ 2 ಅಥವಾ ಚೌಡಿಕಟ್ಟೆ ಎಂದು ಕರೆಯುವ ಸಿಪಾಯಿಗಳ ಕ್ಷೇಮಾಭಿವೃದ್ಧಿ ಕಾಲೋನಿಯಲ್ಲಿ ಎಲ್ಲವೂ ಅತಂತ್ರ. ಎರಡನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಸೈನಿಕರಿಗೆ ಈ ಗ್ರಾಮದಲ್ಲಿ ಪುನ ರ್ವಸತಿ ಕಲ್ಪಿಸಲಾಗಿದೆ. ಚೌಡಿಕಟ್ಟೆ ಗ್ರಾಮದ ಮಧ್ಯೆ ಭಾಗ ಹಾದು ಹೋಗುವ ನೂರು ಅಡಿ ರಸ್ತೆ ಹಂತ ಹಂತವಾಗಿ ಒತ್ತುವರಿಯಾಗುತ್ತಿದ್ದರೂ ಸರ್ಕಾರ, ಚುನಾಯಿತ ಪ್ರತಿನಿಧಿಗಳು ಗಮನ ಹರಿಸಿಲ್ಲ. ಮೆಟಲಿಂಗ್ ಕಾಮಗಾರಿ ಇಲ್ಲದ ರಸ್ತೆಯಲ್ಲಿ ಹಾದು ಹೋಗುವ ವಾಹನ ದೂಳು ಎರಚಿ ಹೋಗುತ್ತದೆ. ರಾಜೀವ್‌ಗಾಂಧಿ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದೆ. ಚರಂಡಿ ಇಲ್ಲದೇ ಇರುವುದರಿಂದ ಮಳೆಗಾಲದಲ್ಲಿ ಕಾಲಿಡುವುದೇ ಕಷ್ಟ.
‘ಎರಡನೇ ಮಹಾಯುದ್ಧದ ಬಳಿಕ (1965) ನಿವೃತ್ತ ಸೈನಿಕರಿಗೆ ಈ ಭಾಗದಲ್ಲಿ ಕೃಷಿಭೂಮಿ ಮತ್ತು ನಿವೇಶನ ನೀಡಿ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಲಾಯಿತು. ಅಂದು 350 ಸೈನಿಕರು ಗ್ರಾಮದಲ್ಲಿ ವಾಸಿಸು ತ್ತಿದ್ದರು. ಈಗ ಹಲವರು ಅವರ ಮಕ್ಕಳೊಂದಿಗೆ ಪಟ್ಟಣ ಸೇರಿಕೊಂಡಿದ್ದಾರೆ. ಕೆಲವರು ಈಗಲೂ ಇದೇ ಗ್ರಾಮದಲ್ಲಿ ವಾಸಿಸುತ್ತಿದ್ದೇವೆ’ ಎನ್ನುತ್ತಾರೆ ಮಾಜಿ ಸೈನಿಕ ಸುಬ್ಬರಾವ್ ಸಿಂಧೆ ಪುತ್ರ ರಮೇಶ್ ರಾವ್ ಸಿಂಧೆ.
ಗುಡಿಸಲು ವಾಸಿ: ಮಾಜಿ ಸೈನಿಕರಾದ ಕೆ.ಪಿ.ಪೂವಯ್ಯ, ಮಹದೇವರಾವ್ ಮಗರ್, ಲಿಂಗಯ್ಯ, ಸರ್ಕಾರ್ ರಾವ್ ಮತ್ತು ಗಣೇಶ್‌ರಾವ್ ಮಾನೆ ಇಂದಿಗೂ ಮನೆ ಇಲ್ಲದೆ ಗುಡಿಸಿಲಿನಲ್ಲಿ ವಾಸಿಸುತ್ತಿದ್ದಾರೆ. ದೇಶ ಕಟ್ಟಿ ಉಳಿಸಿದ ಮಾಜಿ ಸೈನಿಕರಿಗೆ ಸರ್ಕಾರ ಆಶ್ರಯ ಮನೆಯೂ ನೀಡದೆ ಅವಮಾನಿಸಿದೆ ಎಂದು ಬೇಸರದಿಂದ ಹೇಳುತ್ತಾರೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಿಗದಿಗೊಳಿಸಿದ ಬೆಲೆಯನ್ನು ಕಂದಾಯ ಇಲಾಖೆಗೆ ಪಾವತಿಸಿ ಕೃಷಿ ಭೂಮಿಯನ್ನು ನಿವೃತ್ತ ಸೈನಿಕರು ಪಡೆಯಬಹುದಿತ್ತು. ಆದರೆ 700 ಎಕರೆ ಕೃಷಿಭೂಮಿ ಅನ್ಯರ ಹೆಸರಿನಲ್ಲಿ ಸಾಗುವಳಿ ಮಾಡಲಾಗಿದೆ. ಈ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ ಮಾಜಿ ಸೈನಿಕರಿಗೆ ತೀರ್ಪು ವ್ಯತಿರಿಕ್ತವಾಗಿ ಹೊರ ಬಿದ್ದಿತು. ಈ ಎಲ್ಲಾ ಅನ್ಯಾಯಗಳಿಗೆ ಹಿಂದಿನ ತಹಶೀಲ್ದಾರ್ ಕರುಂಬಯ್ಯ ಅವರೇ ಕಾರಣ ಎನ್ನುತ್ತಾರೆ ಸಿಂಧೆ. ಎಲ್ಲಾ ಸಮಸ್ಯೆಗಳು ಶಾಸಕ ಎಚ್.ಪಿ.ಮಂಜುನಾಥ್ ಗಮನಕ್ಕೆ ತರಲಾಗಿದೆ. ಇಷ್ಟೇ ಅಲ್ಲದೆ ಹಿಂದೆನ ಶಾಸಕರುಗ ಳಿಗೂ ತಿಳಿಸಲಾಗಿತ್ತು. ಆದರೆ ಯಾರೂ ಸಹ ನಮ್ಮ ಸಮಸ್ಯೆಗಳನ್ನು ಪರಿಹಾರಿಸಲಿಲ್ಲ ಎಂದು ಮಾಜಿ ಸೈನಿಕರು ನೋವಿನಿಂದಲೇ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.