ADVERTISEMENT

ಮಾಧವಮಂತ್ರಿ ಅಣೆಕಟ್ಟು ಆಧುನೀಕರಣ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 10:20 IST
Last Updated 2 ಜುಲೈ 2012, 10:20 IST

ತಿ.ನರಸೀಪುರ: ತಲಕಾಡಿನ ಮಾಧವ ಮಂತ್ರಿ ಅಣೆಕಟ್ಟು ಆಧುನೀಕರಣಕ್ಕೆ 22 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಡಾ. ಎಚ್.ಸಿ. ಮಹಾದೇವಪ್ಪ ತಿಳಿಸಿದರು.

ತಾಲ್ಲೂಕಿನ ತಲಕಾಡು ಹೋಬಳಿಯ ಹೊಸ ಮತ್ತು ಹಳೇ ಕುಕ್ಕೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸುಮಾರು 800 ವರ್ಷ ಹಳೆಯದಾದ ಈ ಅಣೆಕಟ್ಟನ್ನು ಆಧುನೀಕರಣ ಮಾಡಿಸಿ ರೈತರ ಜಮೀನುಗಳಿಗೆ ಸಮರ್ಪಕ ನೀರು ಪೂರೈಕೆಗೆ ಯೋಜನೆ ಮಾಡಲಾಗುತ್ತಿದೆ. 84 ಕಿ.ಮೀ ಉದ್ದದವರೆಗೆ ಈ ಆಧುನೀಕರಣ ನಡೆಯಲಿದೆ. ಅಲ್ಲದೇ ತಾಲ್ಲೂಕು ವ್ಯಾಪ್ತಿಗೆ ಬರುವ ಅನೇಕ ನಾಲೆಗಳ ಆಧುನೀಕರಣ ಮಾಡಿಸಲು ಮುಂದಾಗಿದ್ದೇವೆ ಎಂದರು.

ಭರೂಕ ಸಮೀಪದಲ್ಲಿ ಎರಡನೇ ವಿದ್ಯುತ್ ಸ್ಥಾವರ ನಿರ್ಮಿಸಲು ಹಾಗೂ ಆ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲಾಗುವುದು. ನಾಲ್ಕು ವರ್ಷಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶದ ಅಭಿವೃದ್ಧಿ ಮಾಡಲಾಗಿದೆ ಎಂದು ತಿಳಿಸಿದರು.

ರೂ. 5 ಲಕ್ಷ ವೆಚ್ಚದಲ್ಲಿ ತಲಕಾಡು ಹಳೇ ಬೀದಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಎಸ್‌ಇಪಿ ಮತ್ತು ಟಿಎಸ್‌ಪಿ ಯೋಜನೆಗಳಡಿಯಲ್ಲಿ ಹಳೇ ಕುಕ್ಕೂರಿನಲ್ಲಿ ರೂ. 25 ಲಕ್ಷ ವೆಚ್ಚದ ಸಿಮೆಂಟ್ ರಸ್ತೆ, ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ತಲಕಾಡಿನ ಅಂಗನವಾಡಿ ಕೇಂದ್ರ, ಕುಕ್ಕೂರಿನಲ್ಲಿ ಅಂಗನವಾಡಿ, ಬಸ್ ಶೆಲ್ಟರ್ ಉದ್ಘಾಟಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸುಧಾ ಮಹಾದೇವಯ್ಯ, ಮಾಜಿ ಸದಸ್ಯರಾದ ಎಂ.ಆರ್.ಸೋಮಣ್ಣ, ಹೊನ್ನನಾಯಕ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಪಿ. ಗಿರೀಶ್, ಎಂ.ಡಿ. ಬಸವರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ಅಂದಾನಿ, ತಲಕಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಂದರರಾಜು, ಉಪಾಧ್ಯಕ್ಷ ದೊಡ್ಡಮಲ್ಲಯ್ಯ, ಬಿಇಒ ಲೋಕೇಶ್, ಜಿ.ಪಂ. ಎಂಜಿನಿಯರ್ ಎಸ್.ಆರ್.ಪುರುಷೋತ್ತಮ್, ನೀರಾವರಿ ಇಲಾಖೆ ಎಂಜಿನಿಯರು ಗಳಾದ ರವಿಕುಮಾರ್, ಶ್ರೀಕಂಠ ಪ್ರಸಾದ್, ಸಿಡಿಪಿಒ ರಾಜಪ್ಪ ಕಾಂಗ್ರೆಸ್ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.